ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರ ಶುಕ್ರವಾರ ಮತದಾನ ನಡೆಯಲಿದೆ. ವಾರಾಂತ್ಯ ಆಗಿರುವುದರಿಂದ ಬಹುತೇಕರು ಮತದಾನ ಮಾಡದೆ ಪ್ರವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರ ಶುಕ್ರವಾರ ಮತದಾನ ನಡೆಯಲಿದೆ. ವಾರಾಂತ್ಯ ಆಗಿರುವುದರಿಂದ ಬಹುತೇಕರು ಮತದಾನ ಮಾಡದೆ ಪ್ರವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಎಲ್ಲರೂ ತಪ್ಪದೆ ಮತ ಚಲಾಯಿಸಲು ಮತದಾರರಿಗೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶನಿವಾರ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಬಾರಿ ಸರಾಸರಿ ಮತದಾನಕ್ಕಿಂತ ಶೇ.5ರಷ್ಟು ಕಡಿಮೆ ಮತದಾನ ಆಗಿರುವ 353 ಮತಗಟ್ಟೆಗಳಿವೆ.
ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಆಯಾ ಮತಗಟ್ಟೆಗಳ ವ್ಯಾಪ್ತಿಯ ಪ್ರತಿ ಮನೆಗೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮತದಾರರಲ್ಲಿ ಅರಿವು ಮೂಡಿಸಬೇಕು ಎಂದರು.
ಅಂಗವಿಕಲರು ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮತದಾನದ ವ್ಯವಸ್ಥೆಯಿದ್ದು, 12 ಡಿ ನಮೂನೆ ಮೂಲಕ ಭರ್ತಿ ಮಾಡಿಕೊಳ್ಳಬೇಕು. ಮತದಾರರ ಚೀಟಿಯನ್ನು ಮತದಾನದ ದಿನಾಂಕಕ್ಕಿಂತ 10 ದಿನ ಮುಂಚಿತವಾಗಿ ಪ್ರತಿ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು.
ಪ್ರಸ್ತುತ ಸಾಲಿನಲ್ಲಿ ಮತದಾರರ ಚೀಟಿಯಲ್ಲಿ ಮತಗಟ್ಟೆ ಲೊಕೇಶನ್ ತಿಳಿಸುವ ಬಾರ್ ಕೋಡ್ ಇರಲಿದ್ದು, ಇದರ ಬಗ್ಗೆ ಮತದಾರರಿಗೆ ತಿಳಿಸಬೇಕು. ಜತೆಗೆ ಚುನಾವಣಾ ದಿನಾಂಕ ಮುದ್ರಿಸಿರುವ ಚೀಟಿಯನ್ನು ಪ್ರತಿ ಮನೆ ಮನೆ ತಲುಪಿಸಬೇಕೆಂದು ತಿಳಿಸಿದರು.
ಈ ವೇಳೆ ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಕಾಂತರಾಜು, ಬೆಂಗಳೂರು ನಗರ ಜಿಲ್ಲೆಯ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸ್ವೀಪ್ ನೋಡಲ್ ಅಧಿಕಾರಿ ವಿಶ್ವನಾಥ್ ಉಪಸ್ಥಿತರಿದ್ದರು.