ಉಡುಪಿ: ವಿಶೇಷ ಚೇತನರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುವುದಕ್ಕೆ ಪ್ರತಿಯೊಬ್ಬರೂ ಕ್ಷೇತ್ರದಲ್ಲಿಯೂ ಪ್ರೋತ್ಸಾಹಿಸಿ, ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಕರೆ ನೀಡಿದ್ದಾರೆ.
ಬುಧವಾರ ನಗರದ ಪುರಭವನದಲ್ಲಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ರೆಡ್‌ಕ್ರಾಸ್ ಮತ್ತು ಇತರ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ 20 ವಿಕಲಚೇತನ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇಂತಹ ಶಾಲೆಗಳಲ್ಲಿ ಕಲಿಸುವ ಶಿಕ್ಷಕರು ಅಭಿನಂದನೆಗೆ ಅರ್ಹರು, ಹೃದಯವಂತ ದಾನಿಗಳು ಇಂತಹ ಶಾಲೆಗೆ ಸಹಕಾರ ನೀಡಬೇಕು ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸುಗಮ್ಯ ಭಾರತ ಅಭಿಯಾನದಡಿ ಸಾರ್ವಜನಿಕ ಸಾರಿಗೆ, ಕಟ್ಟಡಗಳು ಮತ್ತು ಕಛೇರಿಗಳನ್ನು ವಿಶೇಷ ಚೇತನರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತಿದೆ. ಸಮಾಜ ಕೂಡಾ ವಿಶೇಷ ಚೇತನರ ಬಗ್ಗೆ ಸಂವೇದನೆ ಹೊಂದಿರಬೇಕು. ಅವರ ಬೇಕು-ಬೇಡ ಮತ್ತು ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಪ್ರಗತಿ ಸಾಧಿಸಲು ವಿಕಲಚೇತನರನ್ನು ಒಳಗೊಂಡ ಸಮಾಜ ರೂಪಿಸುವುದು ಎನ್ನುವ ಘೋಷ ವಾಕ್ಯದೊಂದಿಗೆ ವಿಶ್ವ ವಿಕಲಚೇತನರ ದಿನ ಆಚರಿಸಲಾಗುತ್ತಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ವಿಶೇಷ ಚೇತನ ಪ್ರತಿಭೆಗಳಾದ ಪ್ರೀತಿ, ಪ್ರಥಮ್ ಜೋಶಿ, ಚಿರಾಗ್ ಪೈ, ಸಾಯಿದೀಪ್ ಶೆಟ್ಟಿ, ನಿರಂಜನ್ ಭಟ್ ಮುನ್ನೂರು, ಮಕ್ಬುಲ್ ಶೇಕ್, ಜಿ.ಸುರೇಶ್ ಆಚಾರ್ ಹಾಗೂ ಉಮೇಶ್ ಕುಂದರ್ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತನರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ವಿಶೇಷ ಶಾಲಾ ಮಕ್ಕಳು ಹಾಗೂ ವಿಕಲಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್, ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ ಮತ್ತಿತರರು ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಕಾರ್ಯದರ್ಶಿ ಗಣನಾಥ ಶೆಟ್ಟಿ ನಿರೂಪಿಸಿದರು.