ಗಡಿಭಾಗದಲ್ಲಿ ಕನ್ನಡ ಬೆಳವಣಿಗೆಗೆ ಪ್ರೋತ್ಸಾಹ : ಬೇವಿನಮರದ

KannadaprabhaNewsNetwork |  
Published : Feb 12, 2025, 12:30 AM IST
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಂಗಳವಾರ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಅನುಷ್ಠಾನ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha

ಸಾರಾಂಶ

Encouragement for Kannada development on the border

- ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಂದ ವಿವಿಧ ಕಾಮಗಾರಿ ಪ್ರಗತಿ ಪರಿಶೀಲನೆ

- ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆ ಹಣ ಬಳಕೆ ಪ್ರಮಾಣ ಪತ್ರ, ಪರಿಶೀಲನಾ ವರದಿ ಸಲ್ಲಿಸಲು ಸೂಚನೆ

----

ಕನ್ನಡಪ್ರಭ ವಾರ್ತೆ ಯಾದಗಿರಿ

ನೆರೆರಾಜ್ಯದ ಗಡಿ ಭಾಗದಲ್ಲಿನ ಮಕ್ಕಳಿಗೆ ಕನ್ನಡ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಅನುಷ್ಠಾನ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರಾಜ್ಯದ ಹಾಗೂ ಹೊರರಾಜ್ಯದ ಕನ್ನಡಪರ ಸಂಘ-ಸಂಸ್ಥೆಗಳಿಗೆ ಕನ್ನಡ ಭಾಷಾ ಚಟುವಟಿಕೆಗಳಿಗಾಗಿ ಪ್ರೋತ್ಸಾಹ ನೀಡುವುದು ಹಾಗೂ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಗ್ರಂಥಾಲಯ, ಕ್ರೀಡಾ ಕೊಠಡಿ, ಶಾಲಾ ಶೌಚಾಲಯ, ಶಾಲಾ ಆವರಣ ಗೋಡೆ, ಆಟದ ಮೈದಾನ ಇತ್ಯಾದಿ ಸೌಲಭ್ಯಗಳನ್ನು ಪ್ರಾಧಿಕಾರದಿಂದ ಒದಗಿಸಿದಲ್ಲಿ ಸೂಕ್ತ. ಇದರಿಂದ ಕನ್ನಡಿಗರಿಗೆ ಹಾಗೂ ಗಡಿ ಭಾಗದ ಮಕ್ಕಳಿಗಾದರೂ ಅನುಕೂಲವಾಗಬಹುದು ಎಂದರು.

ಹಲವಾರು ವರ್ಷಗಳಿಂದ ರಸ್ತೆ, ಸಾಂಸ್ಕೃತಿಕ ಭವನಗಳಿಗೆ ಹಣ ಬಳಸದೇ ಇರುವುದು ಸರಿಯಲ್ಲ. ಹಣ ಬಳಸಿ ಕಾಮಗಾರಿ ಕೈಗೊಂಡರೂ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಕಾರಣ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಶೀಲಿಸಿ ವರದಿ ನೀಡುವಂತೆ ಸೋಮಣ್ಣ ಬೇವಿನಮರದ ಅಧಿಕಾರಿಗಳಿಗೆ ಸೂಚಿಸಿದರು.

2010-11ರಿಂದ ವಿವಿಧ ಕೆಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದರೂ, ಹಣ ಬಳಕೆ ಪ್ರಮಾಣ ಪತ್ರ ಬಂದಿಲ್ಲ. ಅನುದಾನ ನೀಡಿದರೂ ಕಾಮಗಾರಿ ಪೂರ್ಣಗೊಂಡ ಬಗ್ಗೆ ಮಾಹಿತಿ ಬಂದಿಲ್ಲ. ಬಾಕಿಯುಳಿದ ಕಾಮಗಾರಿಗಳಿಗೆ ಅನುದಾನ ಅವಶ್ಯಕತೆ ಇದೆಯೇ ಎಂಬ ಬಗ್ಗೆ ತಿಳಿಸಬೇಕು, ಇಲ್ಲದಿದ್ದಲ್ಲಿ ಅಗತ್ಯವಿರುವ ಕಡೆ ಈ ಅನುದಾನ ಬಳಸಿಕೊಳ್ಳಲಾಗುವುದು. ಈವರೆಗೆ ಮೂಲಸೌಕರ್ಯಗಳಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸದಿದ್ದಲ್ಲಿ, ಇತರೆಡೆ ಅನುದಾನ ಹಂಚಿಕೆಗೂ ಸೂಕ್ತ ಅವಕಾಶ ಕಲ್ಪಿಸಲು ಅನುಕೂಲವಾಗಲಿದೆ ಎಂದ ಅವರು, 2010-11ರಿಂದ ಇದುವರೆಗೆ ಪ್ರಾಧಿಕಾರದಿಂದ ಹಣ ಬಿಡುಗಡೆ, ವರ್ಷವಾರು ಕಾಮಗಾರಿ ಕೈಗೊಂಡಿರುವ ಬಗ್ಗೆ ಹಣ ಬಳಕೆ ಪ್ರಮಾಣ ಪತ್ರ, ಉಳಿದ ಮೊತ್ತ ಮಾಹಿತಿ ಆದಷ್ಟು ಬೇಗನೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ್‌ ಅವರಿಗೆ ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸೂಚಿಸಿದರು.ಜಿಲ್ಲೆಯಲ್ಲಿ ಗಡಿ ಭಾಗದ ಬಾಕಿ ಕಾಮಗಾರಿ ಸ್ಥಳಕ್ಕೆ ಕೂಡಲೆ ತಹಶೀಲ್ದಾರರು, ಅನುಷ್ಠಾನ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಬೇಕು. ಕೆಲಸವಾಗಿದ್ದರೆ ಹಣ ಬಳಕೆ ಪತ್ರ ಪಡೆಯಬೇಕು. ಇಲ್ಲದಿದ್ದರೆ ನೋಟಿಸ್ ನೀಡಿ ಹಣ ವಸೂಲಿ ಮಾಡಬೇಕು ಎಂದು ಸೂಚನೆ ನೀಡಿದ ಅವರು, ವಿವಿಧ ತಾಲೂಕಿನಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪಿ.ಆರ್.ಇ.ಡಿ, ಕೆಆರ್.ಡಿ ಎಲ್. ಅಧಿಕಾರಿಗಳು ಮತ್ತು ತಹಸೀಲ್ದಾರರು ಸಮನ್ವಯತೆಯೊಂದಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

===ಬಾಕ್ಸ್‌:1===

ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಹಂತದ ಕಾಮಗಾರಿಗಳಾದ, ಶಾಲಾ ಕೊಠಡಿ, ಗ್ರಂಥಾಲಯ, ಪುಸ್ತಕ ವಿತರಣೆ, ಆಟದ ಮೈದಾನ ಸುಧಾರಣೆ, ಶಾಲಾ ಶೌಚಾಲಯಗಳ ಸ್ಥಳಕ್ಕೆ ಆಗಾಗ ಭೇಟಿ ನೀಡಿ ಪರಿಶೀಲಿಸಿದ ಮತ್ತು ಅನುದಾನ ಬಳಕೆ ಹಾಗೂ ಕಾಮಗಾರಿ ಪ್ರಗತಿ ಬಗ್ಗೆ ವರದಿ ಪಡೆಯಬೇಕು.

ಸಿ.ಸಿ ರಸ್ತೆ, ಇನ್ನಿತರ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಿಂದ ಪರಿಶೀಲನಾ ವರದಿ ಪಡೆಯಬೇಕು. ಸಾಂಸ್ಕೃತಿಕ ಭವನಗಳಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಂದ ಅವಶ್ಯಕ ಸಂದರ್ಭದಲ್ಲಿ ತಹಸೀಲ್ದಾರ್ ರ ಸಮನ್ವಯತೆಯಿಂದ ಪರಿಶೀಲಿಸಿದ, ಪರಿಶೀಲನಾ ವರದಿ ಪಡೆದು, ಸಮಗ್ರ ವರದಿಯನ್ನು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಅಪರ್ ಜಿಲ್ಲಾಧಿಕಾರಿಗಳಿಗೆ ಸೋಮಣ್ಣ ಬೇವಿನಮರದ ತಳಿಸಿದರು.

===ಬಾಕ್ಸ್‌:2====

ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಆಯಾ ವರ್ಷದಲ್ಲಿ ಆಯೋಜಿಸಲು 50 ಸಾವಿರ ರು. ಒಂದು ಲಕ್ಷ ರು. ಮೊತ್ತ ಅನುದಾನ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದರು, ಇದೂವರೆಗೆ ಸಂಸ್ಥೆಗಳಿಂದ ಅಂದಾಜು ಪಟ್ಟಿ ಬಾರದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಆಯಾ ವರ್ಷದಲ್ಲಿ ಆಗಬೇಕಾದ ಕಾರ್ಯಕ್ರಮಗಳು ಈಗ ಮಾಡುವಂತಿಲ್ಲ. ಹೀಗಾಗಿ ಇಂತಹ ಕಾರ್ಯಕ್ರಮಕ್ಕೆ ಹಾಗೂ ಬಾಕಿ ಉಳಿದ ರಸ್ತೆ ಕಾಮಗಾರಿಗೆ ಈಗ ಅನುದಾನ ಬಿಡುಗಡೆ ಮಾಡಬಾರದು ಎಂದು ನಿರ್ದೇಶನ ನೀಡಿದರು.

----

11ವೈಡಿಆರ್‌1 : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಅನುಷ್ಠಾನ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ