ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಎರಡು ದಿನಗಳ ಕಾಲ ಏರ್ಪಡಿಸಲಾಗಿದ್ದ ಮೊದಲ ವರ್ಷ ಕಾಫಿ ದಸರಾ ಕಾರ್ಯಕ್ರಮದಲ್ಲಿ ಕಾಫಿ ಹಾಗೂ ವಿವಿಧ ಕೃಷಿ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಕಾಫಿ ದಸರಾವು ಒಂದು ವೇದಿಕೆಯಾಗಿದ್ದು, ಕಾಫಿ ಕೃಷಿಯಲ್ಲಿ ಕೊಡಗಿನ ಜನರು ತೊಡಗಿಸಿಕೊಂಡಿರುವುದು ವಿಶೇಷವಾಗಿದೆ. ಆದ್ದರಿಂದ ಕಾಫಿ ಬೆಳೆಯನ್ನು ಮತ್ತಷ್ಟು ಔನತ್ಯಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕಿದೆ ಎಂದು ಡಾ.ಮಂತರ್‌ಗೌಡ ಅವರು ಸಲಹೆ ಮಾಡಿದರು.ಕಾಫಿ ದಸರಾ ವಿಚಾರ ಸಂಕಿರಣದಲ್ಲಿ ವಿವಿಧ ತಜ್ಞರು, ವಿಜ್ಞಾನಿಗಳು, ಕೃಷಿಕರು ಪಾಲ್ಗೊಂಡು ಕಾಫಿ ಉತ್ತೇಜನ ಸಂಬಂಧಿಸಿದಂತೆ ಹಲವು ಅಭಿಪ್ರಾಯ, ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ತಜ್ಞರ ಅಭಿಪ್ರಾಯವನ್ನು ಕ್ರೋಢೀಕರಿಸಿ ಕಾಫಿ ಬೆಳೆಯಲ್ಲಿ ಮತ್ತಷ್ಟು ಉತ್ತಮ ಇಳುವರಿ ಪಡೆಯಲು ಶ್ರಮಿಸಬೇಕಿದೆ ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಪ್ರಥಮ ಬಾರಿಗೆ ಕಾಫಿ ದಸರಾ ಏರ್ಪಡಿಸಿರುವುದು ವಿಶೇಷವಾಗಿದೆ. ಕೊಡಗಿನ ಕಾಫಿ ಬೆಳೆ ಪ್ರಗತಿ ಹಾಗೂ ಸಾಧಕರ ಬಗ್ಗೆ ದಾಖಲೀಕರಣವಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾಫಿ ಟೇಬಲ್ ಹೊರತರಲು ಪ್ರಯತ್ನಿಸಲಿದೆ ಎಂದು ತಿಳಿಸಿದರು.
ಅತಿಯಾದ ರಸಗೊಬ್ಬರವು ಸಹ ಕಾಫಿ ಬೆಳೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಮಳೆಗೆ ತಕ್ಕಂತೆ ರಸಗೊಬ್ಬರ ಹಾಕಬೇಕು. ಕಾಫಿ ಗಿಡ ಸಂರಕ್ಷಣೆ ಸಂಬಂಧಿಸಿದಂತೆ ಗಾಳಿ, ನೀರು, ಬೆಳಕು ಬಗ್ಗೆ ಕಾಫಿ ಬೆಳೆಗಾರರಲ್ಲಿ ಕನಿಷ್ಠ ಮಾಹಿತಿ ಇರಬೇಕು ಎಂದು ಧರ್ಮರಾಜ ಅವರು ಹೇಳಿದರು.
ಕಾಫಿ ಬೆಳೆ ಸಂಬಂಧಿಸಿದಂತೆ ಮಾರುಕಟ್ಟೆ ಬೆಲೆ ಗಮನಿಸಿ ಕಾಫಿ ಮಾರಾಟ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಕಾಫಿ ಬೆಳೆ ಸಂಬಂಧ ಹೆಚ್ಚಿನ ನಿಗಾವಹಿಸಬೇಕು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೆಲೆಯ ಬಗ್ಗೆ ಮಾಹಿತಿ ಇರಬೇಕು ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಲನಾ ಭರತ್ ಅವರು ಮಾತನಾಡಿ ಕಡಿಮೆ ಬಂಡವಾಳದಲ್ಲಿ ಮೀನು ಕೃಷಿಯನ್ನು ಕೈಗೊಂಡು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಮೀನುಕೃಷಿಗೆ ಸ್ಥಳೀಯ ಮಾರುಕಟ್ಟೆ ಸೌಲಭ್ಯವು ಸಹ ಇದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು ಎಂದು ಮಿಲನ ಭರತ್ ಅವರು ಸಲಹೆ ಮಾಡಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕೀಟ ಶಾಸ್ತ್ರಜ್ಞರಾದ ಡಾ.ಕೆಂಚಾರೆಡ್ಡಿ ಮಾತನಾಡಿ, ಜೇನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಜೇನು ಕೃಷಿ ಸಹ ಒಂದು ಉದ್ಯಮವಾಗಿದ್ದು, ಕಾಫಿ ಜೊತೆಗೆ ಜೇನುಕೃಷಿಯಲ್ಲಿ ಕೈಗೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
ಕಾಫಿ ಸಾಧಕ ಕೃಷಿಕರಾದ ನಡಿಕೇರಿಯಂಡ ಬೋಸ್ ಮಂದಣ್ಣ, ಕರಡದ ಬಿದಿರು ಕೃಷಿಯಲ್ಲಿ ಪ್ರಗತಿ ಸಾಧಿಸಿರುವ ನಿಖಿಲ್ ರಾಮಮೂರ್ತಿ, ಕೊಡಗು ಕಾಫಿ ಮಹಿಳಾ ಜಾಗೃತಿ ಸಂಘದ ಮಹಿಳಾ ಸಂಘಟನೆಗಾಗಿ ಪ್ರಶಸ್ತಿ, ಯಂತ್ರೋಪಕರಣಗಳ ತಯಾರಿಕೆಗಾಗಿ ವಿ.ಎ.ತಾಹಿರ್, ಜೇನುಕೃಷಿ ಸಾಧಕರಾದ ಶಿರಕಜೆ ಮಾದಪ್ಪ, ಮರಗೋಡು ಗ್ರಾಮದ ಕಟ್ಟೆಮನೆ ಪ್ರೇಮ ಗಣೇಶ್, ಕರಿಮೆಣಸು ಕೃಷಿಯಲ್ಲಿ ಸಾಧಕರಾದ ಎ.ಪಿ.ಸುಬ್ಬಯ್ಯ, ಬತ್ತ ಕೃಷಿಕರಾದ ದೊಡ್ಡಳ್ಳಿ ಗ್ರಾಮದ ಬಸವಣ್ಣಯ್ಯ ಮತ್ತು ಹುಲುಸೆ ಗ್ರಾಮದ ಎಚ್.ಪಿ.ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು. ವಿನೋದ್ ಮೂಡಗದ್ದೆ ನಿರೂಪಿಸಿದರು. ಕಾಫಿ ದಸರಾ ಸಂಘಟಕರಾದ ಅನಿಲ್ ಎಚ್.ಟಿ. ಸ್ವಾಗತಿಸಿ, ವಂದಿಸಿದರು.