ಅತಿಕ್ರಮಣ ಮಾಡಿಕೊಂಡಿದ್ದ ಸರ್ಕಾರಿ ಆಸ್ತಿಗೆ ಬೀಗ

KannadaprabhaNewsNetwork |  
Published : Feb 03, 2026, 01:15 AM IST
 ಫೋಟೋ ಇದೆ  :-2 ಕೆಜಿಎಲ್ 1 :  ಅತಿಕ್ರಮ ಅಂಗಡಿಗಳಿಗೆ ಬೀಗ ಹಾಕುತ್ತಿರುವ ಅಧಿಕಾರಿಗಳು | Kannada Prabha

ಸಾರಾಂಶ

ಸರ್ಕಾರಿ ಆಸ್ತಿಯನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದ ಮೂರು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಅಂಗಡಿಗಳಿಗೆ ಬೀಗ ಹಾಕಿದ ಘಟನೆ ತಾಲೂಕಿನ ಬೋರಲಿಂಗನ ಪಾಳ್ಯದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಸರ್ಕಾರಿ ಆಸ್ತಿಯನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದ ಮೂರು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಅಂಗಡಿಗಳಿಗೆ ಬೀಗ ಹಾಕಿದ ಘಟನೆ ತಾಲೂಕಿನ ಬೋರಲಿಂಗನ ಪಾಳ್ಯದಲ್ಲಿ ನಡೆದಿದೆ.

ಇಂದು ಬೆಳಿಗ್ಗೆ ನ್ಯಾಯಾಲಯದ ಆದೇಶದಂತೆ ಅತಿಕ್ರಮಣ ತೆರವಿಗೆ ಬಂದ ಅಧಿಕಾರಿಗಳ ಜೊತೆಗೆ ಜಟಾಪಟಿ ನಡೆಸಿದ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಇದು ನಮ್ಮ ಜಾಗ ಇದನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಪೊಲೀಸರು ಇದು ಬೋರಲಿಂಗನ ಪಾಳ್ಯದ ಸರ್ವೆ ನಂಬರ್ 9ರಲ್ಲಿ ಇದ್ದ ಗ್ರಾಮ ಪಂಚಾಯಿತಿ ಕಟ್ಟಡವಾಗಿದ್ದು, ಸರ್ಕಾರಿ ಕಟ್ಟಡವಾಗಿದೆ. ಗ್ರಾಪಂ ಸ್ಥಳಾಂತರಗೊಂಡ ನಂತರ ಇಲ್ಲಿನ ಸಂಪತ್ ಕುಮಾರ್, ರಾಜಣ್ಣ, ರಾಜೇಶ್, ನವೀನ ಎಂಬುವವರು ಅತಿಕ್ರಮವಾಗಿ ಅಂಗಡಿ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಕುರಿತು 2025ರ ಡಿಸೆಂಬರ್ 29ರಂದು ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ ತೆರವುಗೊಳಿಸಲು ಠರಾವು ಅಂಗಿಕಾರವಾಗಿದೆ. ಜೊತೆಗೆ ಈಗ ನ್ಯಾಯಾಲಯದ ಆದೇಶ ಸಹ ಇದೆ. ಆದ್ದರಿಂದ ಜಾಗವನ್ನು ಬಿಟ್ಟುಕೊಡಬೇಕು ಎಂದು ಸೂಚಿಸಿದರು.

ಇದಕ್ಕೆ ಪ್ರತಿಯಾಗಿ ಸ್ಥಳೀಯ ವಾಸಿಗಳು ಇದು ದಲಿತರ ಭೂಮಿ ಹಲವಾರು ವರ್ಷಗಳಿಂದ ಇಲ್ಲಿ ನಾವು ವಾಸಿಸುತ್ತಿದ್ದೇವೆ ಜಿಲ್ಲಾಧಿಕಾರಿಗಳ ಆದೇಶ ನಮ್ಮಂತೆ ಇದೆ. ನಾವು ದಲಿತರು ಎಂಬ ಕಾರಣಕ್ಕಾಗಿ ಹಾಗೂ ರಾಜಕೀಯ ಪ್ರೇರಿತವಾಗಿ ನಮ್ಮ ಜಾಗವನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು. ಈ ವೇಳೆ ಸ್ಥಳೀಯರು ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಮಾತಿಗೆ ಮಾತು ನಡೆದು ವಾಗ್ವಾದ ನಡೆಯಿತು. ಮಧ್ಯ ಪ್ರವೇಶ ಮಾಡಿದ ಕುಣಿಗಲ್ ಸಿಪಿಐ ಮಾಧ್ಯನಾಯಕ್ ಮನವೊಲಿಸುವ ಪ್ರಯತ್ನದಲ್ಲಿ ವಿಫಲರಾಗಿ ಕೊನೆಗೆ ಮಹಿಳಾ ಪೊಲೀಸರಿಂದ ಸ್ಥಳೀಯವಾಗಿದ್ದ ವ್ಯಕ್ತಿಗಳನ್ನು ತೆರವುಗೊಳಿಸಿ ನ್ಯಾಯಾಲಯದ ಆದೇಶದಂತೆ ಮೂರು ಅಂಗಡಿಗಳಿಗೆ ಬೀಗ ಹಾಕಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅತಿಕ್ರಮಣಕಾರರು ನಾವು ಹಲವಾರು ವರ್ಷಗಳಿಂದ ಈ ಸ್ವತ್ತನ್ನು ಅನುಭವಿಸುತ್ತಾ ಬಂದಿದ್ದೇವೆ. ರಾಜಕೀಯ ಪ್ರೇರಿತವಾಗಿ ನಮ್ಮ ಮೇಲೆ ಇಂತಹ ಸುಳ್ಳು ದೂರುಗಳನ್ನು ಹಾಗೂ ಆದೇಶಗಳನ್ನು ತಂದು ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್ , ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ದಿಲೀಪ್ , ಸಿಪಿಐ ಮಾಧ್ಯನಾಯಕ್ , ಪಂಚಾಯ್ತಿ ಕಾರ್ಯದರ್ಶಿ ನಾಗರಾಜು , ತಾ,ಪಂ ಸಹಾಯಕ ನಿರ್ದೇಶಕರಾದ ಕಾಂತರಾಜು ಸೇರಿದಂತೆ ಇತರರು ಇದ್ದರು.

ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಅಧಿಕಾರಿಗಳು ಅಕ್ರಮ ಆಸ್ತಿ ತೆರವು ಸಂದರ್ಭದಲ್ಲಿ ಸ್ಥಳೀಯ ಮಹಿಳೆ ಒಬ್ಬರು ತಮ್ಮ ಬಳಿ ಇದ್ದ ಪೆಟ್ರೋಲ್ ಬಾಟಲನ್ನು ತಮ್ಮ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು ಈ ಘಟನೆಯಿಂದ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅಧಿಕಾರಿಗಳು ಕೆಲಕಾಲ ಆತಂಕಕ್ಕೆ ಒಳಗಾದರು. ಈ ಸಂದರ್ಭದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ ಪೊಲೀಸರು ಮನವರಿಕೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದು ಹಾಗೂ ಪ್ರಚೋದಿಸುವುದು ಅಪಾಯಕಾರಿ ಹಾಗೂ ಕಾನೂನಿಗೆ ವಿರುದ್ಧವಾಗಿದೆ ಆದ್ದರಿಂದ ನಿಮ್ಮ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಥಳೀಯ ರೈಲ್ವೆ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದ ಡಿಐಜಿ ರಶ್ಮಿ
ಅವಕಾಶ ವಂಚಿತರಾಗಬೇಡಿ, ಅವಕಾಶಗಳನ್ನು ಸೃಷ್ಠಿ ಮಾಡಿ