ಕನ್ನಡಪ್ರಭ ವಾರ್ತೆ ಇಂಡಿ
ಬಂಥನಾಳ–ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಿದ್ಧಲಿಂಗ ಮಹಾರಾಜರ ಸಮಸ್ತ ಸ್ವಾಭಿಮಾನಿ ಭಕ್ತರ ಸಹಯೋಗದಲ್ಲಿ ಲಚ್ಯಾಣದಲ್ಲಿ ನಡೆದ ಬೃಹತ್ ಬಹಿರಂಗ ಭಕ್ತರ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು.ಮುಂದಿನ ಒಂದು ವಾರದೊಳಗೆ ಬಂಥನಾಳ–ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಸಮಿತಿಯ ಸಭೆಯನ್ನು ಕರೆಯಲು ತೀರ್ಮಾನಿಸಲಾಯಿತು.
ಆಯ್ಕೆ ಸಭೆಯಲ್ಲಿ ಆಯ್ಕೆ ಸಮಿತಿಯ ಸದಸ್ಯರಾಗಿರುವ ನಾಲ್ವರು ಪೂಜ್ಯರು ಹಾಗೂ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಭಾಗವಹಿಸಬೇಕು ಎಂದು ಒತ್ತಾಯಿಸಲಾಯಿತು.ಅಲ್ಲದೆ, ವಿಶೇಷ ಆಹ್ವಾನಿತರಾಗಿ ವಿವಿಧ ಧರ್ಮಗಳ ಧರ್ಮಗುರುಗಳು, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಬುದ್ಧಿಜೀವಿಗಳು, ಆಧ್ಯಾತ್ಮಿಕ ಚಿಂತಕರು, ಸಾಹಿತಿಗಳು ಹಾಗೂ ಶ್ರೀ ಸಿದ್ಧಲಿಂಗ ಮಹಾರಾಜರ ಸಂಪ್ರದಾಯದ ಸಮಸ್ತ ಗುರುಗಳು ಮತ್ತು ಎಲ್ಲ ಭಕ್ತರನ್ನು ಆಹ್ವಾನಿಸಿ ಬೃಹತ್ ಭಕ್ತರ ಸಮಾವೇಶ ನಡೆಸಲು ನಿರ್ಧರಿಸಲಾಯಿತು.
ಈ ಸಮಾವೇಶದಲ್ಲಿ ಭಕ್ತರು ಹಾಗೂ ಸಮಾಜದ ವಿವಿಧ ವಲಯಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಲಿಸಿ, ಸರ್ವಾನುಮತದ ನಿರ್ಧಾರದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ನಿರ್ಣಯಿಸಲಾಯಿತು.
ಬೃಹತ್ ಭಕ್ತರ ಸಮಾವೇಶವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಪ್ರಚಾರ ಸಮಿತಿ, ಮಾಧ್ಯಮ ಸಮಿತಿ, ವೇದಿಕೆ ಸಮಿತಿ ಹಾಗೂ ಸ್ವಾಗತ ಸಮಿತಿಗಳನ್ನು ರಚಿಸಲಾಯಿತು.ಸಮಾವೇಶಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಶ್ರೀ ಸಿದ್ಧಲಿಂಗ ಮಹಾರಾಜರ ಸ್ವಾಭಿಮಾನಿ ಭಕ್ತರೇ ಭರಿಸುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.
ಸಭೆಯಲ್ಲಿ ಬಸವರಾಜ ಎಂ. ಬಿರಾದಾರ, ಬಾಬುಗೌಡ ಸಿ. ಬಿರಾದಾರ, ಚಂದ್ರಕಾಂತ ಗು. ಬಾಬಳಗಾಂವ, ಚಂದು ಯಳಮೇಲಿ, ಬಾಬು ಯಳಮೇಲಿ, ಬಸವರಾಜ ಅಚ್ಚೇಗಾಂವ, ಗುಂಡುರಾವ ಕಟಕಧೋಂಡ, ಮಾಳಪ್ಪ ಭಜಂತ್ರಿ, ರಾಜು ನದಾಫ, ಬಸವರಾಜ ಕೆ. ಲಾಳಸೇರಿ, ವಿಠ್ಠಲ ಚೋರಗಿ, ರಾಜೇಂದ್ರ ಹತ್ತಳ್ಳಿ, ಗೌಡಪ್ಪ ಬಿರಾದಾರ (ಹಿಳ್ಳಿ), ಸುಭಾಷ ಲಾಳಸೇರಿ, ಸಿದ್ದಾರಾಮ ಲಾಳಸೇರಿ, ಈರಪ್ಪ ವಾಲಿ, ಶಿವಯೋಗೆಪ್ಪ ಸಾತಲಗಾಂವ, ಉಮೇಶಗೌಡ ಬಿರಾದಾರ, ಶಿವಪ್ಪ ಮಾಸ್ಟರ್ ವಾಲಿ, ಸಾಯಬಣ್ಣ ಕರಾಳೆ, ಶಿವಾನಂದ ಎಚ್. ಮುಜಗೊಂಡ, ಡಿ.ಎಸ್. ಪಾಟೀಲ, ರಾಜೇಂದ್ರ ಹತ್ತಳ್ಳಿ, ಶಶಿಕಾಂತ ಬಿರಾದಾರ, ಹಣಮಂತ ಮುಜಗೊಂಡ, ಮಲಕಣ್ಣಾ ಗುಬ್ಯಾಡ, ವಿಠ್ಠಲ ಬಾಬಳಗಾಂವ, ರಮೇಶ್ ಅಹೀರಸಂಗ, ಸುರೇಶ್ ವಾಲಿ, ಶಸಿಕಾಂತ ಬಿರಾದಾರ, ಗುರುರಾಜ ವಾಲಿ, ಸಿದ್ದು ಗೋಡಿಹಾಳ ಸೇರಿದಂತೆ ನೂರಾರು ಸ್ವಾಭಿಮಾನಿ ಭಕ್ತರು ಭಾಗವಹಿಸಿ, ಸಭೆಯ ಎಲ್ಲ ನಿರ್ಣಯಗಳಿಗೆ ಸರ್ವಾನುಮತದ ಅನುಮೋದನೆ ನೀಡಿದರು.ದಾಖಲೆ ಕ್ರೋಢೀಕರಣ ಸಮಿತಿ ರಚನೆ:
ಪ್ರಸ್ತುತ ನಡೆಯುತ್ತಿರುವ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ಪ್ರಶ್ನಿಸಲು ಹಾಗೂ ಅಗತ್ಯ ನ್ಯಾಯಾಂಗ ಹೋರಾಟ ನಡೆಸಲು ಐವರು ಅನುಭವಿ ವಕೀಲರನ್ನು ಸಂಪರ್ಕಿಸಿ ,ನೇಮಿಸಲು,ನಿರ್ಧರಿಸಿತು.ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಕ್ರೋಢೀಕರಿಸಲು ಪ್ರತ್ಯೇಕ ದಾಖಲೆ ಕ್ರೋಢೀಕರಣ ಸಮಿತಿ ರಚಿಸಲಾಯಿತು.