ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಮುಗಲಖೋಡ (ಮಾಲಾಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ) ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ನಂತರ 12 ಮಕ್ಕಳಲ್ಲಿ ವಾಂತಿ ಹಾಗೂ ಅತಿಸಾರದ ಲಕ್ಷಣಗಳು ಕಂಡುಬಂದಿವೆ. ಈ ಪೈಕಿ 9 ಮಕ್ಕಳನ್ನು ಮುಧೋಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ನಿರ್ಜಲೀಕರಣ )ಕಂಡುಬಂದ ಹಿನ್ನೆಲೆಯಲ್ಲಿ 3 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಪಂ ಸಿಇಒ ಗಜಾನನ ಬಾಲೆ ಸ್ವತಃ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದು, ಎಲ್ಲ ಮಕ್ಕಳಿಗೆ ಅತ್ಯುತ್ತಮ ಚಿಕಿತ್ಸೆ ಹಾಗೂ ಅಗತ್ಯ ಆರೈಕೆ ಒದಗಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಧೋಳ ತಾಲೂಕು ಆಸ್ಪತ್ರೆಗೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಜೀತ ಮನ್ನಿಕೇರಿ ಮಕ್ಕಳ ಆರೋಗ್ಯ ವಿಚಾರಿಸಿದ್ದು, ಮಕ್ಕಳ ಸಹಜಸ್ಥಿತಿಯಲ್ಲಿರುವುದಾಗಿ ತಿಳಿಸಿದ್ದಾರೆ. ಭೇಟಿ ಸಮಯದಲ್ಲಿ ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌ ವಾಸುದೇವ ಸ್ವಾಮಿ, ಜಿಲ್ಲಾ ಆಸ್ಪತ್ರೆ ಚಿಕಿತ್ಸಕ ಮಹೇಶ ಕೋನಿ, ಸರ್ವಶಿಕ್ಷಣ ಅಭಿಯಾನದ ಡಿವೈಪಿಸಿಯ ಉಪ ಸಮನ್ವಯಾಧಿಕಾರಿ ಪಿ.ಎಸ್.ಬಳೂಲಮಟ್ಟಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಭಾರತಿ ದಾಸೋಹ ಸೇರಿದಂತೆ ಇತರರು ಇದ್ದರು.