ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಎಂಟಿಸಿ ಬಸ್‌ಗಳಲ್ಲಿನ ಸೇವೆ ಕುರಿತಂತೆ ಸಾರಿಗೆ ಸಚಿವ ಬೈರತಿ ಸುರೇಶ್‌ ರಿಯಾಲಿಟಿ ಚೆಕ್‌ ನಡೆಸಿದ ಬೆನ್ನಲ್ಲೇ ಬಿಎಂಟಿಸಿ ಆಡಳಿತ ಮಂಡಳಿ ಪ್ರಯಾಣಿಕರಿಗೆ ಗುಣಮಟ್ಟದ ಮತ್ತು ಸುರಕ್ಷಿತ ಸೇವೆ ಒದಗಿಸಲು ಚಾಲಕ ಮತ್ತು ನಿರ್ವಾಹಕರಿಗೆ ಬಿಎಂಟಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕಳೆದ ಶನಿವಾರ ಬೈರತಿ ಸುರೇಶ್‌ ಅವರು ಮಾಸ್ಕ್‌ ಧರಿಸಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿ ಚಾಲಕ ಮತ್ತು ನಿರ್ವಾಹಕರ ಕಾರ್ಯದ ಕುರಿತಂತೆ ರಿಯಾಲಿಟಿ ಚೆಕ್‌ ನಡೆಸಿದ್ದರು. ಈ ವೇಳೆ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದ ರೀತಿ ಕಂಡು ಬಂದಿದ್ದು, ಅವರ ವಿರುದ್ಧ ಕ್ರಮಕ್ಕೆ ಬೈರತಿ ಸುರೇಶ್‌ ಸೂಚನೆ ನೀಡಿದ್ದರು. ಜತೆಗೆ ಬಿಎಂಟಿಸಿ ಸೇವೆಯನ್ನು ಪ್ರಯಾಣಿಕ ಸ್ನೇಹಿಯನ್ನಾಗಿಸಬೇಕು ಎಂದು ಸೂಚಿಸಿದ್ದರು. ಅದರ ಆಧಾರದಲ್ಲಿ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ ಕೆಲವೊಂದು ನೀಡಲಾಗಿದೆ.ಎಲ್ಲ ಚಾಲಕರು ಕಡ್ಡಾಯವಾಗಿ ಬಸ್‌ಗಳನ್ನು ನಿಗದಿತ ಬಸ್‌ ನಿಲುಗಡೆಗಳಲ್ಲಿಯೇ ಬಸ್‌ ನಿಲ್ಲಿಸಬೇಕು. ಚಾಲಕರು ಮತ್ತು ನಿರ್ವಾಹಕರು ಬಸ್‌ ಹತ್ತುವ ಎಲ್ಲ ಪ್ರಯಾಣಿಕರೊಂದಿಗೆ ಗೌರವಯುತ ಮತ್ತು ಸೌಜನ್ಯದಿಂದ ವರ್ತಿಸಬೇಕು. ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್‌ನಿಂದ ಇಳಿಸಬಾರದು. ಚಿಲ್ಲರೆ ಇಲ್ಲದಿದ್ದರೆ ಯುಪಿಐ ಪಾವತಿ ವ್ಯವಸ್ಥೆ ಮೂಲಕ ಪ್ರಯಾಣ ದರ ಪಾವತಿಸಿಕೊಳ್ಳಬೇಕು.

ಯಾರಾದರೂ ನಿರ್ವಾಹಕ ಅಥವಾ ಚಾಲಕರ ಮೇಲೆ ಪದೇಪದೆ ಪ್ರಯಾಣಿಕರೊಂದಿಗೆ ಸರಿಯಾಗಿ ವರ್ತಿಸದಿರುವ ದೂರು ಬಂದರೆ ಅಂತಹ ಸಿಬ್ಬಂದಿಗೆ ವಡ್ಡರಹಳ್ಳಿಯ ತರಬೇತಿ ಕೇಂದ್ರದಲ್ಲಿ ಕಡ್ಡಾಯವಾಗಿ ಕೌಶಲ್ಯ ತರಬೇತಿ ನೀಡಬೇಕು. ಘಟಕ ವ್ಯವಸ್ಥಾಪಕರು ಮತ್ತು ಸಂಚಾರ ಅಧಿಕಾರಿಗಳು ಪ್ರತಿ ದಿನ ಡಿಪೋಗಳಿಗೆ ಭೇಟಿ ನೀಡಿ, ರಸ್ತೆ ಸುರಕ್ಷತೆ, ಪ್ರಯಾಣಿಕರೊಂದಿಗೆ ವರ್ತಿಸುವ ಪರಿ ಹಾಗೂ ನಿಗದಿತ ನಿಲ್ದಾಣಗಳಲ್ಲಿ ಬಸ್‌ ನಿಲ್ಲಿಸುವ ಕುರಿತು ಚಾಲಕ-ನಿರ್ವಾಹಕರಿಗೆ ಅರಿವು ಮತ್ತು ಮಾರ್ಗದರ್ಶನ ನೀಡಬೇಕು. ಹಾಗೆಯೇ, ಪ್ರಯಾಣಿಕರಿಂದ ಮೆಚ್ಚುಗೆಗೆ ಪಾತ್ರರಾಗುವ ಮತ್ತು ಉತ್ತಮ ಸೇವೆ ಸಲ್ಲಿಸುವ ಚಾಲಕ-ನಿರ್ವಾಹಕರನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಬೇಕು ಎಂದು ತಿಳಿಸಲಾಗಿದೆ.

ಸಾರಿಗೆ ಸಚಿವರನ್ನೇ ಬಸ್‌ನಿಂದಇಳಿಸಿದ್ದ ನಿರ್ವಾಹಕ ಅಮಾನತುಸಾರಿಗೆ ಸಚಿವರನ್ನೇ ಬಸ್‌ನಿಂದ


ಇಳಿಸಿದ್ದ ನಿರ್ವಾಹಕ ಅಮಾನತು

ಬೆಂಗಳೂರು: ಟಿಕೆಟ್‌ ಖರೀದಿಸಲು ಚಿಲ್ಲರೆ ಇಲ್ಲದ ಕಾರಣಕ್ಕಾಗಿ ಸಾರಿಗೆ ಸಚಿವ ಬೈರತಿ ಸುರೇಶ್‌ ಅವರನ್ನು ಬಿಎಂಟಿಸಿ ಬಸ್‌ನಿಂದ ಕೆಳಗಿಳಿಸಿದ್ದ ಚಾಲಕ ಕಂ ನಿರ್ವಾಹಕರನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶಿಸಿದೆ.ಕಳೆದ ಶನಿವಾರ ಬೈರತಿ ಸುರೇಶ್‌ ಅವರು ಬಿಎಂಟಿಸಿ ಸೇವೆ ಪರೀಕ್ಷಿಸಲು ರಿಯಾಲಿಟಿ ಚೆಕ್‌ ನಡೆಸಿದ್ದರು. ಈ ವೇಳೆ ಕೆಂಪೇಗೌಡ ಬಸ್‌ನಿಲ್ದಾಣ-ನಾಗಶೆಟ್ಟಿಹಳ್ಳಿ ಮಾರ್ಗದ ಬಸ್‌ನಲ್ಲಿ ಪ್ರಯಾಣಿಸುವಾಗ ಚಿಲ್ಲರೆ ನೀಡುವಂತೆ ನಿರ್ವಾಹಕರು ಬೈರತಿ ಸುರೇಶ್‌ ಅವರಲ್ಲಿ ಕೇಳಿದ್ದಾರೆ. ಆಗ ಬೈರತಿ ಸುರೇಶ್‌ ಚಿಲ್ಲರೆಯಿಲ್ಲ ಎಂದು ಹೇಳಿದಾಗ ಅವರನ್ನು ಬಸ್‌ನಿಂದ ಕೆಳಕ್ಕಿಳಿಸಿದ್ದರು. ಹೀಗೆ ಉದ್ಧಟತನ ತೋರಿದ ಚಾಲಕ ಕಂ ನಿರ್ವಾಹಕ ಟಿ.ಜಿ. ರಾಮಕೃಷ್ಣ ಅವರನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶಿಸಿದೆ. ಹಾಗೆಯೇ, ಜಯಮಹಲ್‌ ರಸ್ತೆಯ ಫನ್‌ವರ್ಲ್ಡ್‌ ಸಮೀಪ ಪ್ರಯಾಣಿಕರೊಬ್ಬರು ಬಸ್‌ ನಿಲುಗಡೆಗೆ ಕೋರಿದರೂ ಬಸ್‌ ನಿಲ್ಲಿಸಿರಲಿಲ್ಲ. ಪ್ರಯಾಣಿಕರು ನಿಂತಿದ್ದ ಸ್ಥಳ ಬಸ್ ನಿಲುಗಡೆ ತಾಣವಾಗಿರಲಿಲ್ಲ. ಹೀಗಾಗಿ ಸಚಿವರು ಸಾರ್ವಜನಿಕರ ಅನುಕೂಲಕ್ಕಾಗಿ ಫನ್‌ವರ್ಲ್ಡ್‌ ಸಮೀಪ ಅಧಿಕೃತ ಬಸ್‌ ನಿಲುಗಡೆ ನೀಡುವಂತೆ ಸೂಚಿಸಿದ್ದರು. ಅದರಂತೆ ಇದೀಗ ಬಿಎಂಟಿಸಿ ಫನ್‌ವರ್ಲ್ಡ್‌ ಸಮೀಪ ಅಧಿಕೃತ ಬಸ್‌ ನಿಲುಗಡೆಗೆ ಆ ಮಾರ್ಗದಲ್ಲಿ ಸೇವೆ ನೀಡುವ ಬಸ್‌ಗಳ ಚಾಲಕರಿಗೆ ನಿರ್ದೇಶಿಸಿದೆ.