ಕನ್ನಡಪ್ರಭ ವಾರ್ತೆ ಹಿರಿಯೂರು

ಆಡಂಬರವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವ ಶಕ್ತಿ ಇದ್ದರೂ ಸಹ ಬಡ ಜನರ ನಡುವೆ ಬಂದು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು ಅನುಕರಣೀಯ ಎಂದು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.ನಗರದ ಅವಧಾನಿ ನಗರದಲ್ಲಿ ಹಿರಿಯೂರು ಉಪಚುನಾವಣೆ ಪಕ್ಷೇತರ ಅಭ್ಯರ್ಥಿ ಬೊಮ್ಮನಹಳ್ಳಿ ಬಾಬು ರವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜಕಾರಣಿಗಳಲ್ಲಿ ಜನರ ನಡುವೆ ನಿಂತು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವ ಪ್ರವೃತ್ತಿ ಕಡಿಮೆ. ಆದರೆ ಬೊಮ್ಮನಹಳ್ಳಿ ಬಾಬು ಬಡ ಸಮುದಾಯಗಳ ನಡುವೆ ಬಂದು ಹುಟ್ಟುಹಬ್ಬ ಆಚರಿಸಿಕೊಂಡದ್ದು ಅಭಿನಂದನಾರ್ಹ. ಜಾತ್ಯಾತೀತ ಧರ್ಮಾತೀತ ವ್ಯಕ್ತಿತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬಾಬುರವರಿಗೆ ಜನಾಶೀರ್ವಾದ ಬೇಕಾಗಿದೆ. ದೇವರು ಕೊಟ್ಟಿರುವ ಸಾಕಷ್ಟು ಸೌಭಾಗ್ಯಗಳಲ್ಲಿ ಒಂದಷ್ಟನ್ನು ಇಲ್ಲಿನ ಜನರಿಗೆ ನೀಡಬೇಕೆಂಬ ಅವರ ಮನೋಭಿಲಾಷೆ ಮೆಚ್ಚುವಂತಹದು ಎಂದರು.

ಆದಿ ಜಾoಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಮಾತನಾಡಿ, ಇದು ವಿಶಿಷ್ಟ ರೀತಿಯ ಹುಟ್ಟುಹಬ್ಬ. ರಕ್ತದಾನ ಶಿಬಿರ, ಗರ್ಭಿಣಿ ಸ್ತ್ರೀಯರಿಗೆ ಬಾಗಿನ, ಅನಾರೋಗ್ಯ ಪೀಡಿತರಿಗೆ ಸಹಾಯದಂತಹ ಹಲವು ಜನೋಪಯೋಗಿ ಕಾರ್ಯಗಳನ್ನು ಇಲ್ಲಿ ಮಾಡಲಾಗುತ್ತಿದೆ. ಶ್ರೀಮಂತರುಗಳು ಇಂತಹ ಹುಟ್ಟುಹಬ್ಬಗಳನ್ನು ಆಚರಣೆ ಮಾಡೋದು ಅಪರೂಪ. ಆದರೆ ಬೊಮ್ಮನಹಳ್ಳಿ ಬಾಬುರವರು ಜನರ ನಡುವೆ ಸಾಮಾನ್ಯರಾಗಿ ನಿಂತಿದ್ದಾರೆ. ಜನರು ಸಹ ಪ್ರೀತಿಯಿಂದ ಅವರನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಮಾಜ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು.

ಪಕ್ಷೇತರ ಅಭ್ಯರ್ಥಿ ಬೊಮ್ಮನಹಳ್ಳಿ ಬಾಬು ಮಾತನಾಡಿ, ನಾನು ನಿಮ್ಮ ಮನೆ ಮಗನಾಗಿ ಬಂದಿದ್ದೇನೆ. ನಿಮ್ಮ ಕಷ್ಟ ಸುಖ ಕೇಳಲು ಬಂದಿದ್ದೇನೆ. ಈಗಾಗಲೇ ಎಲ್ಲರ ಮನೆ, ಮನ ಮುಟ್ಟುತ್ತಿದ್ದೇನೆ. ನಿಮ್ಮ ಸೇವೆ ಮಾಡುವ ಭಾಗ್ಯ ಕರುಣಿಸಿ. ಬಡವರ ನೋವಿಗೆ ಸ್ಪಂದಿಸೋ ರಾಜಕಾರಣ ನನ್ನದು. ನನ್ನಿಂದ ಸಾಧ್ಯವಾದಷ್ಟು ಬಡಜನರ, ಹಿಂದುಳಿದವರ ಸೇವೆ ಮಾಡುವುದೇ ನನ್ನ ಗುರಿಯಾಗಿದ್ದು ಬರುವ ದಿನಗಳಲ್ಲಿ ತಾಲೂಕಿನ ಜನರ ಆಶೀರ್ವಾದ ನನ್ನ ಮೇಲಿರಲಿ ಎಂದರು.


ಈ ಸಂದರ್ಭದಲ್ಲಿ ಶ್ರೀ ಶಿವಮುನಿ ಸ್ವಾಮೀಜಿ, ಡಾಬಾ ಚಿಕ್ಕಣ್ಣ, ಐಮಂಗಲ ಶಿವಣ್ಣ, ತಾರಕೇಶ್, ಜಾವಿದ್ , ಮಹೇಶ್, ಸಾಧಿಕ್, ರಜಿಯಾ ಸುಲ್ತಾನ್, ಸುಶೀಲಮ್ಮ, ಮಲಿಯಮ್ಮ, ಗುರುದತ್ ಮುಂತಾದವರು ಹಾಜರಿದ್ದರು.