ಡಿಸೆಂಬರೊಳಗೆ ಆಸ್ಪತ್ರೆಗೆ ಸೇರಿದ ಜಾಗ ಒತ್ತುವರಿ ತೆರವು: ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Sep 16, 2026, 01:45 AM IST
15ಕೆಎಂಎನ್ ಡಿ11 | Kannada Prabha

ಸಾರಾಂಶ

ತಮಿಳು ಕಾಲೋನಿ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿರುವ ತಾತ್ಕಾಲಿಕ ತಡೆಯಾಜ್ಞೆ ತೆರವುಗೊಳಿಸಲು ಅಡ್ವೊಕೇಟ್ ಜನರಲ್ (ಎಜಿ) ಅವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಸಿ ನವೆಂಬರ್ ಅಥವಾ ಡಿಸೆಂಬರ್ ಅಂತ್ಯದೊಳಗೆ ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲಾಗುವುದು.

​ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಸೇರಿದ ಜಾಗ ಒತ್ತುವರಿಯನ್ನು ಡಿಸೆಂಬರ್ ವೇಳೆಗೆ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಸಚಿವ ಎನ್.ಚಲುವರಾಯಸ್ವಾಮಿ ಅವರು ನೀಡಿದ ಭರವಸೆ ಮೇರೆಗೆ ಹಿಂಪಡೆದಿದ್ದರು. ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಚಿವರು ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಮಿಳು ಕಾಲೋನಿ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿರುವ ತಾತ್ಕಾಲಿಕ ತಡೆಯಾಜ್ಞೆ ತೆರವುಗೊಳಿಸಲು ಅಡ್ವೊಕೇಟ್ ಜನರಲ್ (ಎಜಿ) ಅವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಸ್ಲಂ ಬೋರ್ಡ್, ನಗರಸಭೆ, ಕಾನೂನು ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಬೆಂಗಳೂರಿನಲ್ಲಿ ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಸಿ ನವೆಂಬರ್ ಅಥವಾ ಡಿಸೆಂಬರ್ ಅಂತ್ಯದೊಳಗೆ ನ್ಯಾಯಾಲಯದ ಮುಂದೆ ಸಮರ್ಥ ವಾದ ಮಂಡಿಸಿ ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲಾಗುವುದು ಎಂದು ಭರವಸೆ ನೀಡಿದರು.

ಮಿಮ್ಸ್ ಜಾಗ ಅತಿಕ್ರಮಣ ಮಾತ್ರವಲ್ಲದೇ ಸ್ಲಂ ಬೋರ್ಡ್ ವಸತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಅನಧಿಕೃತ ವಿದ್ಯುತ್ ಸಂಪರ್ಕ ಜಾಲದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಕೂಗಿಗೆ ಸಚಿವರು ಸ್ಪಂದಿಸಿ ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಗಡವು ನೀಡಿದರು.

ನಷ್ಟ ವಸೂಲಿಗೆ ಚೆಸ್ಕಾಂಗೆ ಅಧಿಕಾರಿಗಳ ಸೂಚನೆ:

ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟ ಉಂಟು ಮಾಡಿರುವ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಅಕ್ರಮ ಸಂಪರ್ಕ ಹೊಂದಿರುವವರಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಿ ಸಂಪರ್ಕ ಕಡಿತಗೊಳಿಸಲು ಹಾಗೂ ಸರ್ಕಾರಕ್ಕೆ ನಷ್ಟವಾಗಿರುವ ಸಂಪೂರ್ಣ ಮೊತ್ತವನ್ನು ಅವರಿಂದಲೇ ವಸೂಲಿ ಮಾಡಲು ಚೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು‌.

​ಸಿಐಡಿ ತನಿಖೆ ಬಗ್ಗೆ ಸಿಎಂ ಜೊತೆಗೆ ಚರ್ಚೆ:

ಮಿಮ್ಸ್ ವಿಚಾರದಲ್ಲಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಯೇ ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳಿಂದ ಪ್ರಾಥಮಿಕ ವರದಿ ಪಡೆದು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

1,000 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಸಂಕಲ್ಪ:

ಈ ಹಿಂದೆ ಆರೋಗ್ಯ ಸಚಿವನಾಗಿದ್ದಾಗಲೇ ಮಂಡ್ಯಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದು, ಈಗ ಇದನ್ನು 1,000 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಜಿಲ್ಲೆಯ ಎಲ್ಲ ಏಳು ಶಾಸಕರು ಹಾಗೂ ಮೂವರು ಎಂಎಲ್ಸಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಜೊತೆಗೆ ಅಗತ್ಯ ವೈದ್ಯರ ನೇಮಕಕ್ಕೆ ಆರೋಗ್ಯ ಸಚಿವರ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

​ಪರಿಹಾರಕ್ಕೆ ಒಂದು ವಾರದ ಗಡುವು:

ನಾನು ಕಾಲಹರಣ ಮಾಡಲು ಸಭೆ ನಡೆಸಿಲ್ಲ. ನನ್ನ ಮೇಲೆ ಭರವಸೆ ಇಟ್ಟು ಒಂದು ಅವಕಾಶ ಕೊಡಿ ಎಲ್ಲ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹರಿಸಲು ಒಂದು ವಾರದ ಕಾಲಾವಕಾಶ ಕೋರಿದ್ದು, ಶೀಘ್ರದಲ್ಲೇ ಸ್ಪಷ್ಟ ಡೆಡ್‌ಲೈನ್ ಪ್ರಕಟಿಸುವುದಾಗಿ ಪ್ರಕಟಿಸಿದರು.

​ಪ್ರಜಾಪ್ರಭುತ್ವದಲ್ಲಿ ಹೋರಾಟ ಎಲ್ಲರ ಹಕ್ಕು. ಪ್ರತಿಭಟನೆಗೆ ಅವಕಾಶ ನೀಡದ ರೀತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಸಂಘಟನೆಗಳೊಂದಿಗೆ ಮೈಷುಗರ್ ಕಾರ್ಖಾನೆ, ಅಚ್ಚುಕಟ್ಟು ಪ್ರದೇಶ ಹಾಗೂ ಕೆಆರ್‌ಎಸ್ ವ್ಯಾಪ್ತಿಯ ಜ್ವಲಂತ ಸಮಸ್ಯೆಗಳ ಕುರಿತು ಪ್ರತ್ಯೇಕ ಸುದೀರ್ಘ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಆಶ್ವಾಸನೆ ನೀಡಿದರು.

ಸಭೆಯಲ್ಲಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಡು ರಸ್ತೆಯಲ್ಲೇ ಗಣೇಶಮೂರ್ತಿ ಇಟ್ಟು ಯುವಕರ ಪ್ರತಿಭಟನೆ
ವಿಜೃಂಭಣೆಯಿಂದ ನಡೆದ 46ನೇ ವರ್ಷದ ಗಣಪತಿ ಪೂಜಾ ಮಹೋತ್ಸವ