ಮಿಶ್ರಿಕೋಟಿ ರಸ್ತೆಯ ಅತಿಕ್ರಮಣ ತೆರವು

KannadaprabhaNewsNetwork |  
Published : Jul 03, 2025, 11:52 PM ISTUpdated : Jul 03, 2025, 11:53 PM IST
ಮಿಶ್ರಿಕೋಟಿಯಲ್ಲಿ ಅತಿಕ್ರಮಣ ತೆರವುಗೊಳಿಸಿದ ಜೆಸಿಬಿ. | Kannada Prabha

ಸಾರಾಂಶ

ಗ್ರಾಮಸ್ಥರ ಬಹು ದಿನಗಳ ಬೇಡಿಕೆಗೆ ಕಿವಿಗೊಟ್ಟ ಲೋಕೋಪಯೋಗಿ ಇಲಾಖೆ ಪೇಟೆ ಬಸವೇಶ್ವರ ಮಂದಿರದಿಂದ ದರ್ಗಾ ವರೆಗಿನ ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ಮತ್ತು ತಾಲೂಕು ಆಡಳಿತದ ಸಹಯೋಗದಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದೆ.

ಕಲಘಟಗಿ: ತಾಲೂಕಿನ ಮಿಶ್ರಿಕೋಟಿ ಗ್ರಾಮದ ಮುಖ್ಯರಸ್ತೆಯಲ್ಲಿ ಗುರುವಾರ ಬೆಳಂಬೆಳಗ್ಗೆ ಜೆಸಿಬಿಗಳು ಅಬ್ಬರಿಸಿದವು. ವಿರೋಧ, ಆಕ್ರಂದನದ ಮಧ್ಯೆ ಹೊಸ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮನೆಗಳ ಅತಿಕ್ರಮಣ ತೆರವುಗೊಳಿಸಿದವು.

ಗ್ರಾಮಸ್ಥರ ಬಹು ದಿನಗಳ ಬೇಡಿಕೆಗೆ ಕಿವಿಗೊಟ್ಟ ಲೋಕೋಪಯೋಗಿ ಇಲಾಖೆ ಪೇಟೆ ಬಸವೇಶ್ವರ ಮಂದಿರದಿಂದ ದರ್ಗಾ ವರೆಗಿನ ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.

ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ಮತ್ತು ತಾಲೂಕು ಆಡಳಿತದ ಸಹಯೋಗದಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದೆ. 30 ಅಡಿ ಅಗಲದ ಮೂಲ ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳನ್ನು ಗುರುತಿಸಿ ಸ್ವಯಂಪ್ರೇರಣೆಯಿಂದ ತೆರವುಗೊಳಿಸಿ, ಕಾಮಗಾರಿಗೆ ಅನುವು ಮಾಡುವಂತೆ ನೋಟೀಸ್‌ ನೀಡಲಾಗಿತ್ತು.

ಆದರೆ, ಈ ರಸ್ತೆಯ ಇಕ್ಕೆಲದ ನಿವಾಸಿಗಳು ಮೂಲ ರಸ್ತೆಯ ನಕ್ಷೆ ತೋರಿಸಿದರೆ ಮಾತ್ರ ಸ್ವಯಂಪ್ರೇರಿತರಾಗಿ ತೆರವು ಮಾಡುವುದಾಗಿ ಪಟ್ಟು ಹಿಡಿದಿದ್ದರು. ಈ ಮಧ್ಯೆ ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ ಕಾಮಗಾರಿ ನೆನೆಗುದಿಗೆ ಬೀಳುತ್ತದೆ ಎನ್ನುವ ಕಾರಣಕ್ಕೆ ತಾಲೂಕಾ ಆಡಳಿತ ಕಾನೂನು ಪ್ರಕಾರ ಮುಂದೆ ಪರಿಹಾರ ನೀಡಿದರಾಯ್ತು ಎಂದು ಇಂದು ಪೊಲೀಸ್‌ ಬಿಗಿ ಕಾವಲಿನೊಂದಿಗೆ ಎರಡು ಜೆಸಿಬಿ ಬಳಸಿ ಅತಿಕ್ರಮಣ ಎಂದು ಗುರುತಿಸಲಾಗಿದ್ದ 18 ಮನೆ, ಅಂಗಡಿಗಳ ಮುಂದಿನ ಭಾಗವನ್ನು ತೆರವುಗೊಳಿಸಿ, ತ್ಯಾಜ್ಯವನ್ನು ದೂರ ಸಾಗಿಸಿ ರಸ್ತೆ ಕಾಮಗಾರಿಗೆ ಅನುವು ಮಾಡಿಕೊಡಲಾಯಿತು.

ತಾಲೂಕಾ ಆಡಳಿತದ ಇಂದಿನ ದಿಟ್ಟ ಕ್ರಮದಿಂದ ಗ್ರಾಮದ ಬಹುದಿನದ ಬೇಡಿಕೆ ಶೀಘ್ರದಲ್ಲಿ ಕೈಗೂಡುವ ಎಲ್ಲ ಲಕ್ಷಣಗಳಿವೆ. ಆದರೆ, ಅತಿಕ್ರಮಣದ ಹೆಸರಲ್ಲಿ ತೆರವು ಮಾಡಲಾದ 18 ಮನೆ, ಅಂಗಡಿಗಳು ಬಡವರು, ಕೂಲಿಕಾರರಿಗೆ ಸೇರಿದವುಗಳಾಗಿವೆ. ಮುರಿದ ಮನೆಗಳ ಮುಂದೆ ನಿಂತು ಅವರು ರೋಧಿಸುತ್ತಿದ್ದ ಆಕ್ರಂದನ ಕರುಳು ಹಿಂಡುವಂತಿತ್ತು.

ರಸ್ತೆ ಅಭಿವೃದ್ಧಿ ಯೋಜನೆಗೆ ಸಹಕರಿಸಿ ತಮ್ಮ ಆಸ್ತಿ ಕಳೆದುಕೊಂಡಿರುವ ಈ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮದ ಪ್ರಮುಖರಾದ ಮುತ್ತು ಪಾಟೀಲ್‌ ಸರ್ಕಾರವನ್ನು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಡಿ ಮಕ್ಕಳಿಗೆ ಸೆಗಣಿ ತೆಗೆಯುವ ಕೆಲಸ!
ಮಂಜನಾಡಿ ಗುಡ್ಡ ಕುಸಿತ ಪ್ರಕರಣ: ತಾಂತ್ರಿಕ ತನಿಖೆ ಆರಂಭ