ಮುನಿರಾಬಾದ್: ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಹುಣ್ಣಿಮೆ ದಿನದಂದು ನಡೆದ ಕಾಲ್ತುಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಶನಿವಾರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯಿತು. ಬೆಳಗಿನ ಜಾವ 6 ಗಂಟೆಯಿಂದಲೇ ದೇವಸ್ಥಾನ ಹಾಗೂ ಗ್ರಾಮ ಪಂಚಾಯಿತಿ ಸ್ಥಳದಲ್ಲಿ ಅತಿಕ್ರಮಣ ಮಾಡಿರುವ ಅಂಗಡಿ, ಶೆಡ್‌ಗಳನ್ನು ತೆರವು ಮಾಡುವ ಕಾರ್ಯ ಆರಂಭಿಸಲಾಯಿತು.
ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ರಾಮ ಎಲ್. ಅರಸಿದ್ದಿ, ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಸಹಾಯಕ ಆಯುಕ್ತ ಮಹೇಶ್ ಮಾಲಗತ್ತಿ, ತಹಸೀಲ್ದಾರ್ ವಿಠ್ಠಲ ಚೌಗುಲೆ ಹಾಜರಿದ್ದರು.ಕಾರ್ಯಾಚರಣೆ ಸುಳಿವು ಮುಂಚಿತವಾಗಿ ನೀಡಿರಲಿಲ್ಲ. ಕ್ಷಿಪ್ರವಾಗಿ, ಶಿಸ್ತುಬದ್ಧವಾಗಿ ಕಾರ್ಯಾಚರಣೆ ಆರಂಭಿಸಿದರು. ಅಕ್ರಮ ಕಟ್ಟಡ ತೆರವುಗೊಳಿಸಲು ಎರಡನೇ ಶನಿವಾರ ಆಯ್ಕೆ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯಾಚರಣೆಯಲ್ಲಿ ಸುಮಾರು 10 ಜೆಸಿಬಿಗಳನ್ನು ಬಳಸಲಾಯಿತು. ಭಾರಿ ಪ್ರಮಾಣದಲ್ಲಿ ಪೊಲೀಸ್ ಪಡೆಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ಇನ್ನೂ 2-3 ದಿನಗಳ ವರೆಗೆ ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶನಿವಾರ ಮಧ್ಯಾಹ್ನದೊಳಗೆ ಹುಲಿಗಮ್ಮ ದೇವಸ್ಥಾನದ ರಾಜಬೀದಿಯಲ್ಲಿ ಹಾಗೂ ಗ್ರಾಮದಲ್ಲಿರುವ ಸುಮಾರು 150 ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ. ಅದರಲ್ಲಿ ದೇವಸ್ಥಾನಕ್ಕೆ ಸೇರಿದ 40 ಅಂಗಡಿ ಮುಂಗಟ್ಟು ಇದೆ. ದೇವಸ್ಥಾನದ ಅಂಗಡಿ ಮಾಲೀಕರು ತಮ್ಮ ಅಂಗಡಿ ಬಿಟ್ಟು 60 ಅಡಿ ಜಾಗ ಅತಿಕ್ರಮಣ ಮಾಡಿಕೊಂಡಿದ್ದರು. ಅವೆಲ್ಲವನ್ನೂ ತೆರವುಗೊಳಿಸಲಾಯಿತು.
ತುರ್ತುಸಭೆ: ಹುಣ್ಣಿಮೆ ದಿನ 6ರಿಂದ 8 ಲಕ್ಷ ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ಕಾಲ್ತುಳಿತ ಸಂಭವಿಸಿತು. ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಇದರಿಂದ ವಿಚಲಿತರಾದ ಸಂಸದ ರಾಜಶೇಖರ ದೇವಸ್ಥಾನದ ಸಭಾಂಗಣದಲ್ಲಿ ತುರ್ತುಸಭೆ ಕರೆದು, ಕಾಲ್ತುಳಿತವಾಗಲು ಕಾರಣ ಹಾಗೂ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಪಡೆದರು. ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದರ ಪರಿಣಾಮ ಕಾರ್ಯಾಚರಣೆ ಪ್ರಾರಂಭಗೊಂಡಿದೆ.ಕಾರ್ಯಾಚರಣೆಯನ್ನು ಹುಲಿಗೆ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ದೇವಸ್ಥಾನ ಸಮಿತಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ಸ್ವಾಗತಿಸಿದ್ದಾರೆ. ಹುಲಿಗಿ ಗ್ರಾಮ ಇಷ್ಟರಮಟ್ಟಿಗೆ ಬೆಳೆಯಲು ದೇವಸ್ಥಾನಕ್ಕೆ ಬರುವ ಭಕ್ತರೇ ಕಾರಣ. ಹುಣ್ಣಿಮೆ ದಿನ ಕಾಲ್ತುಳಿತ ಸಂಭವಿಸಿ ಭಕ್ತರಿಗೆ ತೊಂದರೆಯಾಯಿತು. ಅಮ್ಮನವರ ದರ್ಶನಕ್ಕೆ ಬಂದ ಭಕ್ತರು ಸುರಕ್ಷಿತವಾಗಿ ತಮ್ಮ ಊರುಗಳಿಗೆ ತಲುಪಬೇಕು. ಇದು ಗ್ರಾಮಸ್ಥರ ಬಯಕೆಯಾಗಿದೆ. ಭಕ್ತರ ಸುರಕ್ಷೆ ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ಮಾಡಲಾಗಿದೆ ಎಂದರು.