ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಒತ್ತುವರಿ ತೆರವು; ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

KannadaprabhaNewsNetwork | Published : Jul 2, 2025 11:50 PM
2ಕೆಎಂಎನ್ ಡಿ18 | Kannada Prabha

ಸಾರಾಂಶ

ಮದ್ದೂರು ಪಟ್ಟಣದ ಮದ್ದೂರಮ್ಮ ಬಡಾವಣೆಯಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಅಡ್ಡಿಯಾಗಿದ್ದ ಒತ್ತುವರಿಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬುಧವಾರ ತೆರವುಗೊಳಿಸಿದರು. ಒತ್ತುವರಿ ತೆರವು ವೇಳೆ ಅಧಿಕಾರಿಗಳು ಮತ್ತು ಒತ್ತುವರಿದಾರರ ನಡುವೆ ಮಾತಿನ ಚಕಮಕಿಯೂ ಜರುಗಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಮದ್ದೂರಮ್ಮ ಬಡಾವಣೆಯಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಅಡ್ಡಿಯಾಗಿದ್ದ ಒತ್ತುವರಿಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬುಧವಾರ ತೆರವುಗೊಳಿಸಿದರು. ಒತ್ತುವರಿ ತೆರವು ವೇಳೆ ಅಧಿಕಾರಿಗಳು ಮತ್ತು ಒತ್ತುವರಿದಾರರ ನಡುವೆ ಮಾತಿನ ಚಕಮಕಿಯೂ ಜರುಗಿತು.

ಪುರಸಭೆ ವ್ಯಾಪ್ತಿಯ 21ನೇ ವಾರ್ಡ್‌ಗೆ ಸೇರಿದ ಮದ್ದೂರಮ್ಮ ಬಡಾವಣೆಯಲ್ಲಿ ಕೆಲವು ವ್ಯಕ್ತಿಗಳು ರಾಜ ಕಾಲುವೆ ಮತ್ತು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿವೇಶನ ಮತ್ತು ಮನೆಗಳ ಕಾಂಪೌಂಡ್ ನಿರ್ಮಿಸಿಕೊಂಡಿದ್ದರು. ಇದರಿಂದ ಬಡಾವಣೆ ನಿವಾಸಿಗಳಿಗೆ ರಸ್ತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ತೊಂದರೆಯಾಗಿತ್ತು.

ಈ ಸಮಸ್ಯೆ ಬಗ್ಗೆ ಬಡಾವಣೆ ನಿವಾಸಿಗಳು ಶಾಸಕ ಕೆ.ಎಂ.ಉದಯ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಮದ್ದೂರಮ್ಮ ಬಡಾವಣೆ ಅಭಿವೃದ್ಧಿಗೆ 5 ಕೋಟಿ ರು. ಅನುದಾನದ ಜೊತೆಗೆ ಹೆಚ್ಚುವರಿಯಾಗಿ ಎರಡು ಕೋಟಿ ಅನುದಾನವನ್ನು ಕಾವೇರಿ ನೀರಾವರಿ ನಿಗಮದ ಮೂಲಕ ಬಿಡುಗಡೆ ಮಾಡಿಸಿದ್ದರು.

ಆ ನಂತರ ರಸ್ತೆ ಅಭಿವೃದ್ಧಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಾಣ ಹಾಗೂ ಸಂಪರ್ಕ ರಸ್ತೆಗಳಿಗೆ ಡೆಕ್ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕಾಮಗಾರಿ ಪ್ರಾರಂಭಕ್ಕೆ ಮುನ್ನಾ ಒತ್ತುವರಿ ನಿವೇಶನ ಮತ್ತು ಕಟ್ಟಡಗಳನ್ನು ತೆರವುಗೊಳಿಸಿ ಕಾಮಗಾರಿ ಪ್ರಾರಂಭಿಸುವಂತೆ ಶಾಸಕ ಉದಯ್ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

ಅದರಂತೆ ಕಾವೇರಿ ನೀರಾವರಿ ನಿಗಮದ ಎಇಇ ಎಸ್.ಎನ್.ನಾಗರಾಜು, ಪುರಸಭೆ ಕಂದಾಯ ವಿಭಾಗದ ಅಧಿಕಾರಿಗಳಾದ ಪುಟ್ಟಸ್ವಾಮಿ ಮತ್ತು ಪುಟ್ಟಸ್ವಾಮಿ ಸೇರಿದಂತೆ ಪುರಸಭೆ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಜೆಸಿಬಿಗಳ ಸಹಾಯದಿಂದ ಒತ್ತುವರಿ ತೆರವುಗೊಳಿಸಿದರು.

ಈ ವೇಳೆ ಕೆಲವು ಒತ್ತುವರಿದಾರರು ಅಧಿಕಾರಿಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿ ಮಾತಿನ ಚಕಮಕಿ ನಡೆಸಿದರು. ಯಾವುದೇ ಕಾರಣಕ್ಕೂ ಕಟ್ಟಡ ಒಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಅಧಿಕಾರಿಗಳು ನೀವೇ ಸ್ವಯಂ ಪ್ರೇರಿತವಾಗಿ ನಿಮ್ಮ ಮನೆಗಳ ಒತ್ತುವರಿ ತೆರವು ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಇಲ್ಲವಾದಲ್ಲಿ ಬಲವಂತವಾಗಿ ತೆರುವು ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ನಾಳೆಯೂ ಸಹ ಅಕ್ರಮ ಒತ್ತುವರಿ ತೆರವು ಕಾರ್ಯ ಮುಂದುವರೆಯಲಿದೆ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ನಾಗರಾಜು ಕನ್ನಡಪ್ರಭ,ಕ್ಕೆ ತಿಳಿಸಿದ್ದಾರೆ.

PREV