ಪೊಲೀಸರ ಬೆಂಗಾವಲಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ

KannadaprabhaNewsNetwork | Published : Feb 26, 2025 1:00 AM

ಸಾರಾಂಶ

ವಿಜಯಪುರ: ರೈತರು ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು ಇಟ್ಟಿದ್ದ ಬೆಳೆಗಳನ್ನೂ ಲೆಕ್ಕಿಸದೆ, ರೈತರಿಗೆ ಒಂದೇ ಒಂದು ನೋಟೀಸನ್ನೂ ನೀಡದೆ, ಪೊಲೀಸರ ಬೆಂಗಾವಲಲ್ಲಿ ಬಂದು ಏಕಾಏಕಿ ಜೆಸಿಬಿಗಳಿಂದ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಅನುಸರಿಸುವ ಕ್ರಮದಲ್ಲಿ ನ್ಯಾಯವಾಗಿದೆಯೇ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ: ರೈತರು ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು ಇಟ್ಟಿದ್ದ ಬೆಳೆಗಳನ್ನೂ ಲೆಕ್ಕಿಸದೆ, ರೈತರಿಗೆ ಒಂದೇ ಒಂದು ನೋಟೀಸನ್ನೂ ನೀಡದೆ, ಪೊಲೀಸರ ಬೆಂಗಾವಲಲ್ಲಿ ಬಂದು ಏಕಾಏಕಿ ಜೆಸಿಬಿಗಳಿಂದ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಅನುಸರಿಸುವ ಕ್ರಮದಲ್ಲಿ ನ್ಯಾಯವಾಗಿದೆಯೇ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ೫೦ ವರ್ಷಗಳಿಂದ ಈ ಜಾಗದಲ್ಲಿ ಅನುಭವದಲ್ಲಿದ್ದೇವೆ. ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡು ಮನೆಗಳಲ್ಲಿದ್ದ ಒಡವೆ ಗಿರವಿಟ್ಟು ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ, ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ದ್ರಾಕ್ಷಿ, ದಾಳಿಂಬೆ, ತೊಂಡೆ, ಸೀಬೆ, ಹೂವು ಸೇರಿದಂತೆ ಹಲವಾರು ಬೆಳೆಗಳನ್ನು ನಾಟಿ ಮಾಡಿಕೊಂಡಿದ್ದೇವೆ. ಫಸಲು ಕೈಗೆ ಬಂದಿದೆ. ಆದರೆ, ಒಂದು ಮಾಹಿತಿಯನ್ನೂ ನೀಡದೆ ಅರಣ್ಯ ಇಲಾಖೆರು ಒತ್ತುವರಿ ಕಾರ್ಯಾಚರಣೆ ಎಂದು ಜೆಸಿಬಿಗಳಿಂದ ಬೆಳೆ ನಾಶ ಮಾಡಿದ್ದಾರೆ. ಇದರಿಂದ ರೈತರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಮಗೆ ಸಮಯ ಕೊಡಿ, ಕೈಗೆ ಬಂದಿರುವ ಬೆಳೆ ತೆಗೆದುಕೊಳ್ಳುತ್ತೇವೆ. ನಂತರ ನಾವೇ ಖಾಲಿ ಮಾಡಿಕೊಡುತ್ತೇವೆ ಎಂದರೂ, ಪೊಲೀಸರೊಂದಿಗೆ ಬಂದು ರೈತರ ಮೇಲೆ ದೌರ್ಜನ್ಯ ಮಾಡಿ, ಬಲವಂತವಾಗಿ ಬೆಳೆ ನಾಶ ಮಾಡಿದ್ದಾರೆ ಎಂದು ರೈತರು ಅಧಿಕಾರಿಗಳ ಧೋರಣೆಯನ್ನು ಖಂಡಿಸಿದ್ದಾರೆ.

ರೈತ ಸಂತೋಷ್ ಮಾತನಾಡಿ, ನಮ್ಮ ತಾತ ಮುತ್ತಾತನವರ ಕಾಲದಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನು, ಪೋಡಿಯಾಗಿದೆ. ೨೦೧೫ ರಲ್ಲಿ ಲ್ಯಾಂಡ್ ಗ್ರಾಬಿಂಗ್‌ನಲ್ಲಿ ಕೇಸು ಹಾಕಿದ್ದಾರೆ. ಜಂಟಿ ಸರ್ವೆ ಮಾಡಿದ್ದೇವೆ ಎಂದು ಹೇಳಿ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ತಹಸೀಲ್ದಾರ್ ಒತ್ತುವರಿ ತೆರವು ಮಾಡಲು ಆದೇಶ ಮಾಡಿದ್ದಾರೆ. ನಾನು ಈ ಜಾಗವನ್ನು ಬಿಡುವುದಿಲ್ಲವೆಂದು ಹೇಳಲಿಲ್ಲ. ಮಂಡಿಬೆಲೆಯ ಅರಣ್ಯ ಇಲಾಖೆಯ ಜಮೀನಿನ ಅಂಚಿನಲ್ಲಿರುವ ರೈತರು ಅರಣ್ಯ ಇಲಾಖೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದೀರಿ ಎಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಒಂದು ನೊಟೀಸ್ ಕೊಡದೇ ಯಾವ ಆದೇಶದ ಮೇರೆಗೆ ಒತ್ತುವರಿ ತೆರವು ಕಾರ್ಯ ಮಾಡುತ್ತಿದ್ದೀರಿ ಎಂದು ರೈತರು ಕೇಳಿದ್ರೂ ಯಾವುದಕ್ಕೂ ಉತ್ತರ ಕೊಡದೆ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಆರೋಪಿಸಿದರು.

ಸರ್ಕಾರ ರೈತರ ಪರವಾಗಿದೆ ಎಂದು ಹೇಳಿಕೊಂಡು, ಬರಗಾಲದಲ್ಲೂ ಸಾಲ ಮಾಡಿ, ಬೆಳೆ ಬೆಳೆದು ದೇಶಕ್ಕೆ ಅನ್ನ ಕೊಡುವ ರೈತರ ಮೇಲೆ ಈ ರೀತಿ ಪೊಲೀಸರನ್ನು ಬಿಟ್ಟು ದೌರ್ಜನ್ಯ ಮಾಡಿಸುವುದು ಸರಿಯಲ್ಲ. ರೈತರನ್ನು ನಡೆಸಿಕೊಳ್ಳುವ ರೀತಿ ಇದೇನಾ ಎಂದು ರೈತರಾದ ಕೃಷ್ಣಪ್ಪ, ಲಕ್ಷ್ಮಮ್ಮ ಇತರರು ಪ್ರಶ್ನಿಸಿದ್ದಾರೆ.

ಕೋಟ್ ............

ಮಂಡಿಬೆಲೆ, ಧರ್ಮಪುರ ಗ್ರಾಮಗಳಿಗೆ ಸೇರಿದ ಸುಮಾರು ೩೦ ಹೆಕ್ಟೇರ್‌ನಷ್ಟು ಒತ್ತುವರಿಯಾಗಿದ್ದ ಭೂಮಿಯನ್ನು ತೆರವುಗೊಳಿಸಿದ್ದೇವೆ. ೧೫ ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಈಗ ನ್ಯಾಯಾಲಯದ ಆದೇಶದ ಮೇರೆಗೆ ಜಂಟಿ ಸರ್ವೆ ನಡೆಸಿದ ನಂತರವೆ ನಾವು ತೆರವು ಕಾರ್ಯಾಚರಣೆ ನಡೆಸಿದ್ದೇವೆ. ಯಾವುದೇ ರೈತರ ಮೇಲೆ ಕೇಸು ದಾಖಲಾಗಿಲ್ಲ. ರೈತರಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ.

- ಅಭಿಷೇಕ್‌, ಡಿಸಿಎಫ್‌, ಅರಣ್ಯ ಇಲಾಖೆ

(ಫೋಟೋ ಕ್ಯಾಪ್ಷನ್‌)

ವಿಜಯಪುರ ಹೋಬಳಿ ಮಂಡಿಬೆಲೆ, ಧರ್ಮಪುರ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಒತ್ತುವರಿ ಕಾರ್ಯಾಚರಣೆ ವೇಳೆ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ನಾಶ ಮಾಡುತ್ತಿರುವುದು.

Share this article