ಕನ್ನಡಪ್ರಭ ವಾರ್ತೆ, ತುರುವೇಕೆರೆ
ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದ ಸುಮಾರು 22 / 11 ಅಡಿಗೂ ಹೆಚ್ಚು ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಘಟನೆ ನಡೆದಿದೆ.ಅಂಬೇಡ್ಕರ್ ಭವನದ ಹಿಂಭಾಗದಲ್ಲಿ ಸುಮಾರು 22 / 11 ಅಡಿಯಷ್ಟು ಜಾಗವನ್ನು ದಲಿತ ಸಮುದಾಯಕ್ಕೆ ಸೇರಿದ ದೇವರಾಜ್ ಎಂಬುವವರು ಮೂರು ವರ್ಷಗಳಿಂದ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡಿದ್ದಾರೆಂದು ಜಗದೀಶ್ ಮತ್ತು ಪ್ರಸಾದ್ ರವರು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಪಟ್ಟಣ ಪಂಚಾಯಿತಿ ಹಾಗೂ ತಹಸೀಲ್ದಾರ್ ಸೇರಿದಂತೆ ಹಲವಾರು ಮಂದಿಗೆ ದೂರು ಸಲ್ಲಿಸಿದ್ದರು. ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸ್ಥಳ ಮಹಜರು ಮಾಡಿದ ಸಂಧರ್ಭದಲ್ಲಿ ಅಂಬೇಡ್ಕರ್ ಭವನದ ಭೂಮಿ ಒತ್ತುವರಿ ಆಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಪಟ್ಟಂತೆ ಕಳೆದ ಮೂರು ವರ್ಷಗಳ ಹಿಂದೆಯೇ ಅಕ್ರಮ ಕಟ್ಟಡ ತೆರವುಗೊಳಿಸಿ ಎಂದು ಕಟ್ಟಡ ನಿರ್ಮಿಸಿರುವ ದೇವರಾಜು ರವರಿಗೆ ಸ್ಥಳೀಯ ಪಟ್ಟಣ ಪಂಚಾಯ್ತಿಯಿಂದ ನೋಟೀಸ್ ನೀಡಲಾಗಿದೆ. ಆದರೂ ಸಹ ಕಟ್ಟಡ ತೆರವುಗೊಳಿಸಿಲ್ಲ. ಅಕ್ರಮ ಕಟ್ಟಡ ತೆರವುಗೊಳಿಸಬೇಕೆಂದು ಸಾಕಷ್ಟು ಬಾರಿ ಹೋರಾಟ ಮಾಡಿದರು ಸಹ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್‌ರವರೂ ಸಹ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಿ ಎಂದು ಆದೇಶಿಸಿದ್ದರೂ ಸಹ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಜಗದೀಶ್ ಹಾಗೂ ಪ್ರಸಾದ್ ರವರು ದೂರಿದ್ದಾರೆ.
ಅಂಬೇಡ್ಕರ್ ಭವನದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವವರೂ ಸಹ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದು ವಿಷಾದನೀಯ ಎಂದು ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದದ ತಾಲೂಕು ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗರವರು ವಿಷಾದಿಸಿದ್ದಾರೆ. ಈ ಕೂಡಲೇ ಪಟ್ಟಣ ಪಂಚಾಯತಿ ಅಧಿಕಾರಿಗಳು ಒತ್ತುವರಿ ಮಾಡಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಿ, ಅಂಬೇಡ್ಕರ್ ಭವನಕ್ಕೆ ಉಳಿಕೆ ಭೂಮಿಯನ್ನು ಹಿಂತಿರುಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಭಾನುವಾರದೊಳಗೆ ಅಕ್ರಮ ಕಟ್ಟಡವನ್ನು ತೆರವುಗೊಳಿಸದಿದ್ದ ಪಕ್ಷದಲ್ಲಿ ತುರುವೇಕೆರೆ ತಾಲೂಕು ಛಲವಾದಿ ಮಹಾಸಭಾ ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ತುರುವೇಕೆರೆ ತಾಲೂಕು ಛಲವಾದಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕುಣಿಕೇನಹಳ್ಳಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಬಡಾವಣೆ ಶಿವರಾಜ್, ಸುನಿಲ್, ಶಶಿಧರ್, ಪ್ರಸಾದ್, ಜಗದೀಶ್, ರೈತ ಸಂಘದ ನಗರಘಟಕದ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.