ಹುಲಿಗಿ ಗ್ರಾಮದಲ್ಲಿ ಸರ್ಕಾರದ ಆಸ್ತಿಯ ಕಬಳಿಕೆ

KannadaprabhaNewsNetwork |  
Published : Oct 14, 2025, 01:01 AM IST
ಹುಲಿಗಿ ಗ್ರಾಮದಲ್ಲಿ ಅತಿಕ್ರಮಣವಾದ ಸರ್ಕಾರಿ ಕಟ್ಟಡ. | Kannada Prabha

ಸಾರಾಂಶ

ಹುಲಿಗಿ ಗ್ರಾಮದಲ್ಲಿ ಸರ್ಕಾರಕ್ಕೆ ಹಾಗೂ ವ್ಯವಸಾಯ ಸೇವಾ ಸಂಘಕ್ಕೆ ಸೇರಿದ ಕೋಟ್ಯಂತರ ರುಪಾಯಿ ಬೆಲೆ ಜಮೀನನ್ನು ಕಬಳಿಸಿದ ಘಟನೆ ಗ್ರಾಮದ ಅನಧಿಕೃತ ಕಟ್ಟಡ ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಮುನಿರಾಬಾದ್: ಹುಲಿಗಿ ಗ್ರಾಮದಲ್ಲಿ ಸರ್ಕಾರಕ್ಕೆ ಹಾಗೂ ವ್ಯವಸಾಯ ಸೇವಾ ಸಂಘಕ್ಕೆ ಸೇರಿದ ಕೋಟ್ಯಂತರ ರುಪಾಯಿ ಬೆಲೆ ಜಮೀನನ್ನು ಕಬಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹುಲಿಗಿ ಗ್ರಾಮದಲ್ಲಿ ಹುಣ್ಣಿಮೆ ಪ್ರಯುಕ್ತ ನಡೆದ ಕಾಲ್ತುಳಿತದಿಂದ ಎಚ್ಚೆತ್ತು ಜಿಲ್ಲಾಡಳಿತವು ಗ್ರಾಮದ ಅನಧಿಕೃತ ಕಟ್ಟಡ, ಚರಂಡಿ ದಾಟಿ ಬಂದ ಕಟ್ಟಡಗಳನ್ನು ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಗ್ರಾಮದ ರೈಲ್ವೆ ಸ್ಟೇಷನ್ ಎದುರುಗಡೆ ಪಂಚಾಯಿತಿಗೆ ಹೋಗುವ ದಾರಿಯಲ್ಲಿ ರಸ್ತೆ ಪಕ್ಕದಲ್ಲಿ ಸರ್ಕಾರಿ ಸಿಬ್ಬಂದಿಗಾಗಿ (ಗ್ರಾಮ ಲೆಕ್ಕಾಧಿಕಾರಿ) ಆಗಿನ ಕಾಲದಲ್ಲಿ ಕಟ್ಟಡ ನಿರ್ಮಿಸಲಾಯಿತು. ತೆರವು ಕಾರ್ಯಾಚರಣೆ ವೇಳೆ ಈ ಕಟ್ಟಡ ಅತಿಕ್ರಮಣವಾಗಿರುವುದು ಕಂಡುಬಂದಿದೆ. ಇದಲ್ಲದೆ ಎದುರುಗಡೆ ರಸ್ತೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ಗೋದಾಮು ಇತ್ತು. ಅದನ್ನೂ ಅತಿಕ್ರಮಣ ಮಾಡಲಾಗಿದೆ. ಈಗ ಅಲ್ಲಿ ಗೋದಾಮು ಬದಲು ಎರಡು ಅಂತಸ್ತಿನ ಬೃಹತ್ ಬಂಗಲೆ ತಲೆ ಎತ್ತಿದೆ. ಈ ಎರಡೂ ಕಟ್ಟಡಗಳು ಪಂಚಾಯಿತಿ ಪಕ್ಕದಲ್ಲಿದೆ. ಪ್ರತಿನಿತ್ಯ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಈ ಜಾಗ ದಾಟಿಯೇ ಕಚೇರಿಗೆ ಹೋಗುತ್ತಾರೆ. ಅವರ ಕಣ್ಣಿಗೆ ಅತಿಕ್ರಮಣ ಕಂಡಿಲ್ಲವೇ ಎಂದು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಆಸ್ತಿ ಕಾಯಬೇಕಾದ ಪಿಡಿಒ ಹಾಗೂ ಕಾರ್ಯದರ್ಶಿ, ಈ ಕೆಲಸದಲ್ಲಿ ಸಾಥ್‌ ನೀಡಿದ್ದಾರೆ ಎಂದು ನಿವೃತ್ತ ಯೋಧ ಸಂಜೀವ ಆರೋಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಉಳ್ಳವರ ಪಾಲಾದ ಸರ್ಕಾರಿ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘದ ಭೂಮಿಯನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡಿದರೂ ಪಿಡಿಒ ಗುರುದೇವಮ್ಮ ಕರೆ ಸ್ವೀಕರಿಸಲಿಲ್ಲ.

ಭಕ್ತರಿಗೆ ಆಗದ ಪ್ರಯೋಜನ: ಅಮ್ಮನ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಹುಲಿಗಿ ಗ್ರಾಪಂನಿಂದ ಗುಲಗಂಜಿಯಷ್ಟೂ ಸಹಾಯವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಭಕ್ತರಿಗೆ ಶುದ್ಧವಾದ ಕುಡಿಯುವ ನೀರನ್ನು ಸಹ ಗ್ರಾಪಂ ಒದಗಿಸಿಲ್ಲ. ಭಕ್ತರಿಗಾಗಿ ಒಂದು ಶೌಚಾಲಯವನ್ನೂ ನಿರ್ಮಿಸಿಲ್ಲ. ಆದರೆ ಹುಲಿಗೆಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರಿಂದ ವಿವಿಧ ಶುಲ್ಕ ಸಂಗ್ರಹಿಸುತ್ತಿದೆ. ಪ್ರತಿ ಹುಣ್ಣಿಮೆ, ದಸರಾ ಮಹೋತ್ಸವ ಮತ್ತು ಅಮ್ಮನವರ ಜಾತ್ರೆ ಸಮಯದಲ್ಲಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹುಣ್ಣಿಮೆಯಂದು ಕನಿಷ್ಠ 30ರಿಂದ 40 ಸಾವಿರ ವಾಹನಗಳು ಹುಲಿಗಿ ಗ್ರಾಮಕ್ಕೆ ಆಗಮಿಸುತ್ತವೆ. ಈ ವಾಹನಗಳಿಗೆ ನಿಲುಗಡೆಗೆ ಗ್ರಾಪಂ ಯಾವುದೇ ವ್ಯವಸ್ಥೆ ಮಾಡಿಲ್ಲ. ಆದರೆ ಪ್ರತಿ ನಾಲ್ಕು ಚಕ್ರ ವಾಹನ ಸವಾರರಿಂದ ₹50 ವಸೂಲಿ ಮಾಡುತ್ತಿದೆ. ಹಣ ಸ್ವೀಕರಿಸಿದ ಬಳಿಕ ಗ್ರಾಪಂ ನೀಡಿದ ಚೀಟಿಯಲ್ಲಿ ಪಾವತಿ ಸಂಖ್ಯೆ ನಮೂದು ಆಗಿರುವುದಿಲ್ಲ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಜಿಲ್ಲಾಡಳಿತ ಉನ್ನತ ಮಟ್ಟದ ತನಿಖೆಯನ್ನು ನಡೆಸಿ ಅತಿಕ್ರಮಣವಾದ ಸರ್ಕಾರಿ ಹಾಗೂ ವ್ಯವಸಾಯ ಸೇವಾ ಸಂಘದ ಜಮೀನನ್ನು ಮರಳಿ ಪಡೆಯಬೇಕು ಹಾಗೂ ತಪ್ಪಿಸ್ಥರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತಿ ಯೋಧ ಸಂಜಯ್ ಆಗ್ರಹಿಸಿದ್ದಾರೆ.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ