ಖಾಸಗಿ ವ್ಯಕ್ತಿಗಳಿಂದ ಮಳೂರು ಕೆರೆ ಒತ್ತುವರಿ

KannadaprabhaNewsNetwork |  
Published : Jun 01, 2025, 03:57 AM IST
1.ಮಳೂರು ಕೆರೆ | Kannada Prabha

ಸಾರಾಂಶ

ಕೆರೆ ಜಾಗ ಮಾತ್ರವಲ್ಲದೆ ಗುಂಡುತೋಪನ್ನು ಕೆಲವರು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರಜಿಲ್ಲೆಯಲ್ಲಿ ಅತಿದೊಡ್ಡ ಕೆರೆಗಳ ಪೈಕಿ ಒಂದಾಗಿರುವ ಚನ್ನಪಟ್ಟಣ ತಾಲೂಕಿನಲ್ಲಿರುವ ಮಳೂರು ಕೆರೆಯನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ.ಮಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಳೂರು ಗ್ರಾಮದ ಸರ್ವೆ 805ರಲ್ಲಿ ಮಳೂರು ಕೆರೆ ಸುಮಾರು 426 ಎಕರೆ 4 ಗುಂಟೆಯಷ್ಟು ಹರಡಿಕೊಂಡಿದೆ. ಕೆರೆ ಜಾಗ ಮಾತ್ರವಲ್ಲದೆ ಗುಂಡುತೋಪನ್ನು ಕೆಲವರು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.ಫೆನ್ಸಿಂಗ್ ಹಾಕಲು ಹಿಂದೇಟು:ಭೂ ಮಾಪನ ಇಲಾಖೆಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ಮಳೂರು ಕೆರೆ 426 ಎಕರೆ 4 ಗುಂಟೆ ಇದ್ದು, ಈಗಾಗಲೇ ಭೂ ಮಾಪನ ಇಲಾಖೆ ಅಧಿಕಾರಿಗಳು ಕೆರೆ ವಿಸ್ತೀರ್ಣದ ಸರ್ವೆ ಕಾರ್ಯದಲ್ಲಿ ಒತ್ತುವರಿ ಜಾಗ ಗುರುತಿಸಿ ವರದಿ ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ವರದಿ ಸಲ್ಲಿಸಿದ್ದಾರೆ.ಸರ್ವೆ ಕಾರ್ಯದಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು 1 ಎಕರೆ 17 ಗುಂಟೆ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಲಾಗಿದೆ. ಆದರೆ, ಇದುವರೆಗೆ ಆ ಒತ್ತುವರಿ ಜಾಗವನ್ನು ತೆರವುಗೊಳಿಸಿ ಫೆನ್ಸಿಂಗ್ ಹಾಕುವ ಕೆಲಸ ಮಾಡದೆ ಸಣ್ಣ ನೀರಾವರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ.ಬಲಾಢ್ಯರಾಗಿರುವ ಖಾಸಗಿ ವ್ಯಕ್ತಿಗಳು ಒತ್ತುವರಿ ಜಾಗ ಬಿಟ್ಟು ಕೊಡದೆ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಕೋಟಮಾರನಹಳ್ಳಿ ಸೇರಿದಂತೆ ಸುತ್ತಮುತ್ತಲ್ಲ ಗ್ರಾಮಗಳ ಅಂಚಿನಲ್ಲಿ ಕೆರೆ ಜಾಗ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.ಈ ಹಿಂದೆ ಮಳೂರು ಕೆರೆಗೆ ಕಣ್ವ ಜಲಾಶಯದಿಂದ ನೀರು ಹರಿಯುತ್ತಿತ್ತು. ನೀರಾವರಿ ಯೋಜನೆ ಅನುಷ್ಠಾನಗೊಂಡ ಬಳಿಕ ಮಳೂರು ಕೆರೆ ಭರ್ತಿಯಾದ ನೀರು ಕಣ್ವ ಜಲಾಶಯಕ್ಕೆ ಹರಿಯುತ್ತಿದೆ. ಇಗ್ಗಲೂರು ಜಲಾಶಯದಿಂದ ಮತ್ತಿಕೆರೆ ಗ್ರಾಮದ ಕೆರೆ ತುಂಬಿ ಶೆಟ್ಟಹಳ್ಳಿ ಕೆರೆಗೆ ಹರಿಯಲಿದೆ. ಅಲ್ಲಿಂದ ಹೊಸೂರು ದೊಡ್ಡಕೆರೆ, ಮುಕುಂದು ಕೆರೆ ಭರ್ತಿಯಾಗಿ ಕೋಡಿ ಬಿದ್ದ ನೀರು ಮಳೂರು ಕೆರೆ ಒಡಲು ಸೇರುತ್ತದೆ.ಈ ಕೆರೆ ನೀರಿನಿಂದ ವಳಗೆರೆ ದೊಡ್ಡಿ, ದೇವರಹಳ್ಳಿ, ದೊಡ್ಡಮಳೂರು, ಬೈರಾಪಟ್ಟಣ ಹಾಗೂ ಕೋಟ ಮಾರನಹಳ್ಳಿ ಬಯಲು ಪ್ರದೇಶಗಳಲ್ಲಿ ಬತ್ತ ಮತ್ತು ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಅಲ್ಲದೆ, ಸುತ್ತಮುತ್ತಲ ಗ್ರಾಮಗಳ ಅಂತರ್ಜಲವೂ ವೃದ್ಧಿಯಾಗುತ್ತದೆ.ಆದ್ದರಿಂದ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸುವ ಜೊತೆಗೆ ಹೂಳೆತ್ತುವ ಕೆಲಸವನ್ನೂ ಮಾಡಬೇಕು. ಈ ಬಗ್ಗೆ ತಾಲೂಕು ಆಡಳಿತ ಗಮನ ಹರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ....ಬಾಕ್ಸ್ ...

ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ನಡೆದಿಲ್ಲಬಯಲುಸೀಮೆ ಜಿಲ್ಲೆಯಾಗಿರುವ ಬೆಂಗಳೂರು ದಕ್ಷಿಣದಲ್ಲಿ ಕೆರೆಗಳೇ ಪ್ರಮುಖ ಜಲಮೂಲಗಳು. ಆದರೆ, ಕೆರೆಗಳು ಮಾತ್ರ ಸಂರಕ್ಷಣೆಗೆ ಕಾಯುತ್ತಿವೆ. ಈಗಾಗಲೇ ಪೂರ್ವ ಮುಂಗಾರು ಎಂಟ್ರಿ ಕೊಟ್ಟಿದೆ. ಆದರೆ, ಮುಂಗಾರಿಗೆ ಮಳೂರು ಕೆರೆ ಮಾತ್ರವಲ್ಲದೆ ಜಿಲ್ಲೆಯ ಯಾವುದೇ ಕೆರೆಗಳು ಮಾತ್ರ ಸಿದ್ಧವಾಗಿಲ್ಲ. ಕೆರೆಗಳ ಸೂಕ್ತ ನಿರ್ವಹಣೆಯಲ್ಲಿ ಹಿನ್ನಡೆಯಾಗಿದ್ದು, ಈ ವರ್ಷದ ದೊಡ್ಡ ಕೆರೆಗಳ ಪರಿಸ್ಥಿತಿ ಏನೆಂಬ ಬಗ್ಗೆ ಆತಂಕ ವ್ಯಕ್ತವಾಗಿದೆ.ವಾರದಿಂದ ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಬಹುತೇಕ ಬರಿದಾಗಿದ್ದ ಕೆರೆಗಳಲ್ಲಿ ಮತ್ತೆ ನೀರು ಬರುವ ಸಾಧ್ಯತೆ ಹೆಚ್ಚಾಗಿದೆ. ಈ ವರ್ಷದಲ್ಲಿ ಮುಂಗಾರು ಮಳೆ ಹೆಚ್ಚಾಗಿರಲಿದೆ ಎಂಬ ಮಾಹಿತಿ ಇದೆ. ಆದರೆ, ಜಿಲ್ಲೆಯ ಕೆರೆಗಳು ಮಾತ್ರ ಮುಂಗಾರಿನ ಹಂಗಾಮಿಗೆ ಸಿದ್ಧವಾಗಿಲ್ಲ. ನಾನಾ ಇಲಾಖೆಗಳ ಕೆರೆಗಳಲ್ಲಿ ಕಳೆದ ವರ್ಷದ ಬರದಿಂದ ನೀರಿನ ಅಭಾವ ಇದ್ದರೂ ಕೂಡ ಕೆರೆಗಳಲ್ಲಿ ಹೂಳೆತ್ತು ಕಾರ್ಯ ಬಹುತೇಕ ಕಡೆಗಳಲ್ಲಿ ಆಗಿಲ್ಲ.

...ಬಾಕ್ಸ್ ...

ಮಳೂರು ಕೆರೆ ವಿವರ :ಮಳೂರು ಕೆರೆ ಜಲಾವೃತ ಪ್ರದೇಶ - 94.40 ಹೆಕ್ಟೇರ್ ನೀರಿನ ಶೇಖರಣಾ ಸಾಮರ್ಥ್ಯ - 41.09 ಮೆಟ್ರಿಕ್ ಕ್ಯೂಬಿಕ್ ಫೀಟ್ ಅಚ್ಚುಕಟ್ಟು ಪ್ರದೇಶ - 426 ಎಕರೆ 4 ಗುಂಟೆ...ಕೋಟ್ ...ಚನ್ನಪಟ್ಟಣ ತಾಲೂಕು ಮಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಳೂರು ಕೆರೆ ಸರ್ವೆ ಕಾರ್ಯ ಪೂರ್ಣಗೊಳಿಸಿದ್ದೇವೆ. ಕೆರೆ ವಿಸ್ತೀರ್ಣ ಹಾಗೂ ಒತ್ತುವರಿಯನ್ನು ಗುರುತಿಸಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿಗೆ ವರದಿ ಸಲ್ಲಿಸಿದ್ದೇವೆ. ಒತ್ತುವರಿ ತೆರವು ಮತ್ತು ಫೆನ್ಸಿಂಗ್ ಹಾಕುವ ಕಾರ್ಯದತ್ತ ಸಣ್ಣ ನೀರಾವರಿ ಇಲಾಖೆ ಗಮನ ಹರಿಸಬೇಕು.- ಹನುಮೇಗೌಡ, ಉಪನಿರ್ದೇಶಕರು, ಭೂ ದಾಖಲೆಗಳ ಇಲಾಖೆ, ರಾಮನಗರ....ಕೋಟ್ ...

ಮಳೂರು ಕೆರೆ ಒಂದೆರೆಡು ಕಡೆ ಮಾತ್ರವಲ್ಲ ಸುತ್ತಲೂ ಒತ್ತುವರಿಯಾಗಿದೆ. ಕೋಟಮಾರನಹಳ್ಳಿ ಮತ್ತು ಮೈಲನಾಯಕನಹಳ್ಳಿ ಭಾಗದಲ್ಲಿ ಹೆಚ್ಚಿನ ಒತ್ತುವರಿಯಾಗಿದೆ. ಭೂ ಮಾಪಕರು ನೆಪಮಾತ್ರಕ್ಕೆ ಸರ್ವೆ ಮಾಡಿ ಹೋಗಿದ್ದಾರೆ. ಕೂಡಲೇ ಒತ್ತುವರಿ ತೆರವುಗೊಳಿಸುವ ಕೆಲಸ ಆಗಬೇಕಿದೆ.- ಕೆಂಪೇಗೌಡ, ರೈತ, ಮಳೂರು ಗ್ರಾಮ.31ಕೆಆರ್ ಎಂಎನ್ 1,2.ಜೆಪಿಜಿ1.ಮಳೂರು ಕೆರೆ2.ಒತ್ತುವರಿಯಾಗಿರುವ ಕೆರೆ ಜಾಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ