ಹೋರಾಟದ ದಿನವಾಗಿ ರೈತ ಹುತಾತ್ಮ ದಿನ ಆಚರಣೆ

KannadaprabhaNewsNetwork |  
Published : Jun 01, 2025, 03:51 AM IST
31ಎಚ್‌ವಿಆರ್1- | Kannada Prabha

ಸಾರಾಂಶ

ಬಿತ್ತನೆ ಬೀಜ, ಗೊಬ್ಬರ ಕೇಳಿದ ರೈತರ ಮೇಲೆ 2008ರಲ್ಲಿ ನಡೆದ ಗೋಲಿಬಾರ್ ಘಟನೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಹುತಾತ್ಮ ರೈತರ ಸ್ಮರಣಾರ್ಥ ಜೂ. 10ರಂದು ಆಚರಿಸುತ್ತಿದ್ದ ರೈತ ಹುತಾತ್ಮ ದಿನವನ್ನು ಹೋರಾಟದ ದಿನವನ್ನಾಗಿ ಆಚರಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿವೆ.

ಹಾವೇರಿ: ಬಿತ್ತನೆ ಬೀಜ, ಗೊಬ್ಬರ ಕೇಳಿದ ರೈತರ ಮೇಲೆ 2008ರಲ್ಲಿ ನಡೆದ ಗೋಲಿಬಾರ್ ಘಟನೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಹುತಾತ್ಮ ರೈತರ ಸ್ಮರಣಾರ್ಥ ಜೂ. 10ರಂದು ಆಚರಿಸುತ್ತಿದ್ದ ರೈತ ಹುತಾತ್ಮ ದಿನವನ್ನು ಹೋರಾಟದ ದಿನವನ್ನಾಗಿ ಆಚರಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿವೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಅಂದು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಜಿಲ್ಲೆಯಲ್ಲಿ ಗೋಲಿಬಾರ್‌ನಂತಹ ಕರಾಳ ಘಟನೆ ನಡೆದು ಜೂ.10ಕ್ಕೆ 18 ವರ್ಷಗಳಾಗುತ್ತದೆ. ಈ ಘಟನೆ ಬಗ್ಗೆ ವಿಷಾದವಿದೆ. ಈ ನಡುವೆ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಸಂಭವಿಸುವ ಪ್ರಕೃತಿ ವಿಕೋಪಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ, ರೈತರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ರೈತರ ನೆರವಿಗೆ ಬರಬೇಕಾದ ಆಳುವ ಸರ್ಕಾರಗಳು ತಲೆಕೆಡಿಸಿಕೊಳ್ಳದೇ ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಈ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೂ. 10ರಂದು ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಇರುವ ಹುತಾತ್ಮ ರೈತರ ವೀರಗಲ್ಲು ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.

ಬೇಡ್ತಿ ವರದಾ ನದಿ ಜೋಡಣೆಯಾಗಬೇಕು. ಹತ್ತಿ, ಮೆಕ್ಕೆಜೋಳ, ಭತ್ತ, ಸೂರ್ಯಕಾಂತಿ, ಸೋಯಾಬಿನ್ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರ ಸ್ಥಾಪಿಸಿ ಖರೀದಿಸಬೇಕು. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಘೋಷಣೆಯಾಗಬೇಕು, ಇಲ್ಲವೇ ಪ್ರಾದೇಶಿಕ ಕಚೇರಿಯಲ್ಲಿ ಶೂನ್ಯ ಬಡ್ಡಿ ದರದಲ್ಲಿ ₹5 ಲಕ್ಷ ವರೆಗೆ ಸಾಲ ನೀಡಬೇಕು. ಕುಂಟುತ್ತಾ ಸಾಗಿರುವ ವಿದ್ಯುತ್ ಗ್ರಿಡ್‌ಗಳನ್ನು ಅಪಗ್ರೇಡ್ ಮಾಡಿಸಿ ಲೋಕಾರ್ಪಣೆ ಮಾಡಬೇಕು. ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ನಿರ್ಮಿಸುವ ಕೃಷಿಹೊಂಡಗಳಿಗೆ ಸಹಾಯಧನ ಬಿಡುಗಡೆಯಾಗಬೇಕು. ಒಟಿಎಸ್‌ನಲ್ಲಿ ಸಾಲ ತೀರಿಸಿದ ರೈತರಿಗೆ ಸಿಬಿಲ್ ಅನ್ವಯಿಸದಂತೆ ಮರು ಕೃಷಿಸಾಲ ಕೊಡಬೇಕು. ಶುಂಠಿ ಬೆಳೆಗಾರರಿಗೆ ಕ್ವಿಂಟಲ್‌ಗೆ ₹10 ಸಾವಿರ ನಿಗದಿ ಮಾಡಬೇಕು. ಬೆಳೆವಿಮೆ ತಾರತಮ್ಯ ಸರಿಪಡಿಸುವುದು, ಅಕ್ರಮ-ಸಕ್ರಮ ಯೋಜನೆಯಡಿ ಪಂಪ್‌ಸೆಟ್ ಹೊಂದಿದ ರೈತರಿಗೆ ಟಿಸಿ, ವೈರ್, ಕಂಬ ವಿತರಣೆ ಹೀಗೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರದ ಅಭಾವ ಸಾಕಷ್ಟಿದೆ. ಅಧಿಕಾರಿಗಳು ನೀಡುವ ಅಂಕಿ ಅಂಶಗಳು ಹಾಗೂ ರಸಗೊಬ್ಬರ ವಿತರಣಾ ಕೇಂದ್ರದಲ್ಲಿ ಲಭ್ಯವಿರುವ ಅಂಕಿ-ಅಂಶಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಕಾಂಪ್ಲೆಕ್ಸ್ ಬಳಕೆ ಮಾಡುವಂತೆ ಅಧಿಕಾರಿಗಳು ಸೂಚಿಸುತ್ತಿರುವುದು ರೈತರನ್ನು ಗೊಂದಲಕ್ಕೀಡಾಗುವಂತೆ ಮಾಡಿದೆ. ಮಳೆ ವಿರಾಮ ನೀಡದಿದ್ದರೆ 2008ರ ಗೋಲಿಬಾರ್‌ ಮರುಕಳಿಸುವ ಸಾಧ್ಯತೆಯಿತ್ತು ಎಂದು ಹೇಳಿದರು.

ರೈತ ಮುಖಂಡರಾದ ಶಂಕ್ರಣ್ಣ ಶಿರಗಂಬಿ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಮುತ್ತಣ್ಣ ಗುಡಗೇರಿ, ಚನ್ನಪ್ಪ ಮರಡೂರ, ಅಬ್ಧುಲ್ ಬುಡಂದಿ, ಫಯಾಜ್ ದೊಡ್ಡಮನಿ, ಮಂಜನಗೌಡ ಸಣ್ಣಗೌಡ್ರ, ಎ.ಆರ್. ಮಣಕೂರ, ಮಲ್ಲನಗೌಡ ಮಾಳಗಿ ಇತರರು ಇದ್ದರು.

ಒಂದೇ ದರ ನಿಗದಿ ಮಾಡಿ: ಒಂದೊಂದು ಕಂಪನಿಯ ಮೆಕ್ಕೆಜೋಳ ಬಿತ್ತನೆ ಬೀಜದ ದರ ಒಂದೊಂದು ರೀತಿ ಇದೆ. 4 ಕೆಜಿ ಮೆಕ್ಕೆಜೋಳ ಬಿತ್ತನೆ ಬೀಜದ ಪ್ಯಾಕೆಟ್‌ ₹600ರಿಂದ ₹2400 ವರೆಗೂ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತಗಳು ಬಿತ್ತನೆ ಬೀಜದ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಖಾಸಗಿ ಕಂಪನಿಗಳು ಮನಬಂದಂತೆ ದರ ವಿಧಿಸುತ್ತಿದ್ದರೂ ಸರ್ಕಾರ ಕಡಿವಾಣ ಹಾಕುತ್ತಿಲ್ಲ. ಈ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಹತ್ತಿ ಬಿತ್ತನೆ ಬೀಜದ ರೀತಿಯಲ್ಲಿ ಮೆಕ್ಕೆಜೋಳ ಪ್ಯಾಕೆಟ್‌ಗೆ ಒಂದೇ ದರ ನಿಗದಿ ಮಾಡಬೇಕು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌