ಶಿವಕುಮಾರ ಕುಷ್ಟಗಿ
ಗದಗ: ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ಜಿಲ್ಲೆಯ ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಿರೇಕೆರೆಯು ರಾಜರ ಕಾಲದಲ್ಲಿ 135 ಎಕರೆ ಪ್ರದೇಶವನ್ನು ಹೊಂದಿತ್ತು. ಕಾಲಾಂತರದಲ್ಲಿ ಒತ್ತುವರಿಯಾಗುತ್ತಲೇ ಬಂದಿದೆ. ಸಧ್ಯ ಸರ್ಕಾರದಲ್ಲಿನ ದಾಖಲೆಗಳ ಪ್ರಕಾರ (ಡ, ಉತಾರ) 69.22 ಎಕರೆ ಇರಬೇಕಿತ್ತು. ನಿರಂತರ ಒತ್ತುವರಿಯಿಂದಾಗಿ ಈಗ 29.22 ಎಕರೆ ಮಾತ್ರ ಉಳಿದಿದೆ!ಹಿರೇಕೆರೆಯ ಸರ್ವೇ ನಂ, 130, 131/ಎ ಮತ್ತು 131/ಬಿ ವ್ಯಾಪ್ತಿಯು ಕಳೆದ ಕೆಲ ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ ಅತಿಕ್ರಮಣಕ್ಕೊಳಗಾಗಿದೆ. ವಿವಿಧ ವ್ಯಕ್ತಿಗಳು ಮತ್ತು ಧಾರ್ಮಿಕ ಸಂಸ್ಥೆಗಳ ಹೆಸರಿನಲ್ಲಿ ಭಾಗಶಃ ಕೆರೆಯ ಪ್ರದೇಶಗಳನ್ನು ಹಂಚಿಕೊಂಡಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ.
1954ರ ದಾಖಲೆ ಪ್ರಕಾರ ಕೆರೆಯ ವ್ಯಾಪ್ತಿಯಲ್ಲಿಯೇ ಇರುವ ಸರ್ವೇ ನಂಬರ್ 130/ಎ, 130/ಎ/1, 130/ಸಿ/1, 130/ಸಿ/2, 130ಡಿ, 130/ಇ, 130/ಎಫ್, 130ಜಿ, 131/ಬಿ, 131/ಎ1/1ಬಿ/1, 131/ಎ1/1ಬಿ/2, 131/ಎ1/1ಬಿ/3, 131/ಎ1/2ಬಿ, 131/ಎ/2, ಒಟ್ಟು 14 ಜನರಿಂದ 40 ಎಕರೆ ಜಾಗ ಕಬಳಿಕೆಯಾಗಿದೆ. ಈ ಭೂಮಿ ಕೋಟ್ಯಂತರ ಬೆಲೆಬಾಳುತ್ತದೆ.ಡಿಸಿಗೆ ದಾಖಲೆಗಳ ಸಲ್ಲಿಕೆ: ಸಾಮಾಜಿಕ ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಲಿಖಿತ ಮನವಿಯಲ್ಲಿ ಕೆರೆಯ ಒತ್ತುವರಿ ಕುರಿತು ಉಲ್ಲೇಖಿಸಿದ್ದಲ್ಲದೇ, 1954ರಲ್ಲಿನ ಕೆರೆಯ ಡ ಉತಾರ, ಕೆರೆಯ ಒಟ್ಟು ಅಳತೆಯ ಪಿಟಿ ಶೀಟ್, ಪ್ರತಿಯೊಂದು ಸರ್ವೇ ನಂಬರಿನ ಉತಾರದ ಪ್ರತಿಗಳು, ಕೆರೆ ಒತ್ತುವರಿ ಮಾಡಿ ನಿರ್ಮಿಸಿರುವ ಸರ್ಕಾರಿ ಕಟ್ಟಡಗಳು ಸೇರಿದಂತೆ ಒತ್ತುವರಿ ಕುರಿತ ಛಾಯಾಚಿತ್ರಗಳು ಸೇರಿದಂತೆ ಜಿಲ್ಲಾಡಳಿತ ಕೂಡಲೇ ತನಿಖೆ ನಡೆಸಲು ಬೇಕಾಗುವ ಎಲ್ಲ ಅಗತ್ಯ ದಾಖಲೆಗಳು ಸಲ್ಲಿಕೆಯಾಗಿವೆ.
ಕಾನೂನು ಏನು ಹೇಳುತ್ತವೆ?: 1974ರ ನೀರು ಮಾಲಿನ್ಯ ನಿಯಂತ್ರಣ ಕಾಯ್ದೆ, 1980ರ ಪರಿಸರ ಸಂರಕ್ಷಣಾ ಕಾಯ್ದೆ, 2001ರ ರಾಷ್ಟ್ರೀಯ ಕೆರೆ ಸಂರಕ್ಷಣಾ ಕಾಯ್ದೆ ಹಾಗೂ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2014, ಅಷ್ಟೇ ಅಲ್ಲದೆ, ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಕೆರೆ ಪ್ರದೇಶದ ಸುತ್ತಮುತ್ತ 30 ಮೀಟರ್ (100 ಅಡಿ) ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ಕಾಮಗಾರಿಗಳನ್ನು ನಿಷೇಧಿಸಿರುವ ತೀರ್ಪು ನೀಡಿವೆ. ಆದರೆ ಸ್ಥಳೀಯ ಮಟ್ಟದಲ್ಲಿ ಈ ಕಾನೂನುಗಳು ಪಾಲನೆಯಾಗದೇ, ಅಧಿಕಾರಿಗಳ ಮೌನ, ಚುನಾಯಿತ ಪ್ರತಿನಿಧಿಗಳ ದಬ್ಬಾಳಿಕೆಯಿಂದಾಗಿ ಅಕ್ರಮ ಒತ್ತುವರಿ ವ್ಯಾಪಕವಾಗಿ ನಡೆದಿದೆ. ಪರಿಸರ ರಕ್ಷಣೆ ಸಂವಿಧಾನಿಕ ಕರ್ತವ್ಯಭಾರತೀಯ ಸಂವಿಧಾನದ ವಿಧಿ 51(ಎ) ಪ್ರಕಾರ ಪ್ರತಿಯೊಬ್ಬ ಪ್ರಜೆಯೂ ಪರಿಸರ, ಕಾಡು, ಕೆರೆ ಮತ್ತು ಜೀವಿಗಳನ್ನು ರಕ್ಷಿಸುವ ಕರ್ತವ್ಯ ಹೊಂದಿದ್ದಾನೆ. ವಿಧಿ 48(ಎ) ಪ್ರಕಾರ ಸರ್ಕಾರವೂ ಪರಿಸರ ಸಂರಕ್ಷಣೆಗೆ ಬದ್ಧವಾಗಿದೆ. ಈ ಹಿನ್ನೆಲೆ, ಹಿರೇಕೆರೆಯಂತಹ ಐತಿಹಾಸಿಕ ನೀರಿನ ಮೂಲಗಳನ್ನು ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರಿಲ್ಲಿ ಸರ್ಕಾರಿ ಇಲಾಖೆಗಳೇ ಒತ್ತುವರಿ ಮಾಡಿದ್ದು ಆಶ್ಚರ್ಯದ ಸಂಗತಿಯಾಗಿದೆ. ಲಿಖಿತ ದೂರು: ಹಿರೇಕೆರೆಯಲ್ಲಿ ಆಗಿರುವ ಭಾರೀ ಪ್ರಮಾಣದ ಒತ್ತುವರಿಯ ಬಗ್ಗೆ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಲಿಖಿತವಾಗಿ ದೂರು ಸಲ್ಲಿಸಿ, ಕೂಡಲೇ ತನಿಖೆ ನಡೆಸಿ ಎಲ್ಲಾ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದೇನೆ. ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಕೆರೆ ಸಂರಕ್ಷಣಾ ಪ್ರಾಧಿಕಾರ ಸೇರಿದಂತೆ ಅಗತ್ಯ ತನಿಖಾ ಸಂಸ್ಥೆಗಳಿಗೂ ದೂರು ಸಲ್ಲಿಸುತ್ತೇನೆ ಎಂದು ಹೋರಾಟಗಾರ ಹಾಗೂ ಹಿರೇಕೆರೆಯ ಒತ್ತುವರಿ ದೂರುದಾರ ಚಂ.ಅಂ. ಹಿರೇಮಠ ತಿಳಿಸಿದರು.