ಬೆಂಗಳೂರು : ಪಾದಚಾರಿಗಳ ಸುಗಮ ಸಂಚಾರಕ್ಕೆ ಪಾಲಿಕೆ ಕೈಗೆತ್ತಿಕೊಂಡಿರುವ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆ 18ನೇ ದಿನವಾದ ಶನಿವಾರವೂ ಮುಂದುವರಿದಿದ್ದು, ದಕ್ಷಿಣ, ಉತ್ತರ, ಕೇಂದ್ರ ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 16.80 ಕಿ.ಮೀ. ಫುಟ್‌ಪಾತ್ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ.
ಜಯನಗರ ವಿಭಾಗದ ಸಾರಕ್ಕಿ ಮಾರುಕಟ್ಟೆ ಇಂದಿರಾಗಾಂಧಿ ವೃತ್ತದ ವ್ಯಾಪ್ತಿಯಲ್ಲಿ 1.20 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ. ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ 10 ಸಾವಿರ ರು. ದಂಡ ವಿಧಿಸಲಾಗಿದೆ.
ಬಿಟಿಎಂ ಲೇಔಟ್ ವಿಭಾಗದಲ್ಲಿ ಹೊಸೂರು ರಸ್ತೆಯಲ್ಲಿ ಒಟ್ಟು 3.10 ಕಿ.ಮೀ. ಪಾದಚಾರಿ ರಸ್ತೆ, ಎಚ್.ಎಸ್.ಆರ್ ಲೇಔಟ್ ವಿಭಾಗದಲ್ಲಿ 80 ಅಡಿ ರಸ್ತೆಯಲ್ಲಿ 0.80 ಮೀ, 22ನೇ ಕ್ರಾಸ್ ರಸ್ತೆಯಲ್ಲಿ 1 ಕಿ.ಮೀ. ಸೇರಿದಂತೆ ಒಟ್ಟು 1.80 ಕಿ.ಮೀ. ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಆಯುಕ್ತ ಕೆ.ಎನ್.ರಮೇಶ್ ತಿಳಿಸಿದ್ದಾರೆ.
ಪುಲಿಕೇಶಿನಗರ ವಿಭಾಗದ ಟ್ಯಾನರಿ ರಸ್ತೆ, ಪೆರಿಯಾರ್ ವೃತ್ತದಿಂದ ವೆಂಕಟೇಶ್ವರ ದೇವಸ್ಥಾನದವರೆಗೆ ಸುಮಾರು 1 ಕಿ.ಮೀ. ಯಲಹಂಕ ವಿಭಾಗದಲ್ಲಿ ಎಂಎಸ್ ಪಾಳ್ಯದಲ್ಲಿ (16ನೇ ಅಡ್ಡರಸ್ತೆ) ಸುಮಾರು 1 ಕಿ.ಮೀ, ದಾಸರಹಳ್ಳಿ ವಿಭಾಗದ ಕುಮ್ಮಾರನಹಳ್ಳಿ ಮುಖ್ಯರಸ್ತೆಯಲ್ಲಿ ಸುಮಾರು 0.80 ಕಿ.ಮೀ ಒಟ್ಟು 2.80 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ತೆರವು ಮಾಡಲಾಗಿದೆ ಎಂದು ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರ ಆರು ವಿಭಾಗಗಳ ವ್ಯಾಪ್ತಿಯ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳ ವಿವಿಧ ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಒಟ್ಟು 4.90 ಕಿಲೋ ಮೀಟರ್ ಪಾದಚಾರಿ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ. ಸರ್.ಸಿ.ವಿ.ರಾಮನ್ ನಗರ ವಿಭಾಗದ ಕಗ್ಗದಾಸಪುರ ಮುಖ್ಯ ರಸ್ತೆ 0.50 ಕಿ.ಮೀ ರಸ್ತೆ, ಶಾಂತಿನಗರ ವಿಭಾಗದ ರೀನಿಯಸ್ ಸ್ಟ್ರೀಟ್, ಗಾಂಧಿನಗರ ವಿಭಾಗದಲ್ಲಿ ಎಂ.ಡಿ. ಬ್ಲಾಕ್ ರಸ್ತೆ, ಶಿವಾಜಿನಗರ ವಿಭಾಗದಲ್ಲಿ ರಸೆಲ್ ಮಾರುಕಟ್ಟೆ, ಚಾಂದಿನಿ ಚೌಕ್ ವೃತ್ತ, ಚಾಮರಾಜಪೇಟೆ ವಿಭಾಗದಲ್ಲಿ, ಟಿ.ಆರ್.ಮಿಲ್ ರಸ್ತೆ, ಚಿಕ್ಕಪೇಟೆ ವಿಭಾಗದ ಸಿದ್ದಾಪುರ ರಸ್ತೆ ಅಶೋಕ ಪಿಲ್ಲರ್ – ಸಿದ್ದಾಪುರ ಜಂಕ್ಷನ್ ಪ್ರದೇಶ ರಸ್ತೆಗಳ ಪಾದಚಾರಿ ರಸ್ತೆಯಲ್ಲಿದ್ದ ಪೆಟ್ಟಿಗೆ ಅಂಗಡಿ, ಮೆಟ್ಟಿಲು ಹಾಗೂ ಇತರೆ ಅಡೆತಡೆಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ ಎಂದು ಆಯುಕ್ತ ಜಗದೀಶ್ ಜಿ. ತಿಳಿಸಿದ್ದಾರೆ.
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರ 3 ಕಿ.ಮೀ. ತೆರವುಗೊಳಿಸಲಾಗಿದೆ. ಪಾಲಿಕೆಯ ಬಸವನಗುಡಿ ವಿಭಾಗದ ದೊಡ್ಡಗಣಪತಿ ದೇವಾಲಯದ ಲಕ್ಷ್ಮೀಪುರ ಮುಖ್ಯ ರಸ್ತೆ, ಜಿಂಕೆ ಪಾರ್ಕ್, ಬಂಡೆ ಮಹಾಕಾಳಿಯಮ್ಮ ದೇವಸ್ಥಾನವರೆಗೆ, ವಿಜಯನಗರ ವಿಭಾಗದ ಮೈಸೂರು ರಸ್ತೆಯಿಂದ ಸ್ಯಾಟಲೈಟ್ ಬಸ್ ಸ್ಟಾಪ್ ರಸ್ತೆವರೆಗೆ, ಯಡಿಯೂರು ವಿಭಾಗದ ಕಾಮಾಕ್ಯ ಮುಖ್ಯರಸ್ತೆ, ಹೆಗ್ಗನಹಳ್ಳಿ ವಿಭಾಗದಲ್ಲಿ ಕರೀಂ ಸಾಬ್ ಲೇಔಟ್ ಮುಖ್ಯ ರಸ್ತೆವರೆಗೆ 6 ಪೆಟ್ಟಿ ಅಂಗಡಿ. 15 ತಳ್ಳುಗಾಡಿ, 11 ಎಸಿ ಶೀಟ್ಸ್ ತೆರವುಗೊಳಿಸಲಾಗಿದೆ ಎಂದು ಆಯುಕ್ತ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.