ಗುರುವಾರ ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ಕೈಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ/ಬಾಗಲಕೋಟೆ
ಗುರುವಾರ ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ಕೈಗೊಂಡಿದ್ದಾರೆ. ಚುನಾವಣಾ ಫಲಿತಾಂಶ ಸರ್ಕಾರದ ಉಳಿವಿಗಿಂತ ಹೆಚ್ಚಾಗಿ ರಾಜಕೀಯ ಪ್ರತಿಷ್ಠೆಯ ಕಣವಾಗಿದ್ದು, ಗ್ಯಾರಂಟಿ ಅಲೆ ಹಾಗೂ ಅನುಕಂಪದ ನಡುವೆ ಮತದಾರ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎಂಬುದು ಕುತೂಹಲ ಮೂಡಿಸಿದೆ.ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಬಾಗಲಕೋಟೆಯಲ್ಲಿ ಒಟ್ಟೂ 2,58,118 ಮತದಾರರಿದ್ದು, ಲಿಂಗಾಯತ ಮತದಾರರ ಪ್ರಾಬಲ್ಯವಿದೆ. ದಾವಣಗೆರೆ ದಕ್ಷಿಣದಲ್ಲಿ 2,32,564 ಮತದಾರರಿದ್ದು, ಮುಸ್ಲಿಂ ಮತದಾರರ ಪ್ರಾಬಲ್ಯವಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ದಾವಣಗೆರೆ ದಕ್ಷಿಣಕ್ಕೆ, ಎಚ್.ವೈ.ಮೇಟಿಯವರ ನಿಧನದಿಂದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಬಾಗಲಕೋಟೆಯಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠ ಮತ್ತು ಕಾಂಗ್ರೆಸ್‌ನ ಉಮೇಶ್ ಮೇಟಿ ಸೇರಿ 9 ಅಭ್ಯರ್ಥಿಗಳು ಕಣದಲ್ಲಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ನಿಂದ ಸಮರ್ಥ ಶಾಮನೂರು, ಬಿಜೆಪಿಯಿಂದ ಶ್ರೀನಿವಾಸ ದಾಸ ಕರಿಯಪ್ಪ ಸೇರಿ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡೂ ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿಯಿದೆ. ದಾವಣಗೆರೆ ದಕ್ಷಿಣದಲ್ಲಿ 12 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಬಂಡಾಯವಾಗಿ ಪಕ್ಷೇತರರಾಗಿ ಕಣದಲ್ಲಿ ಇರುವುದು ವಿಶೇಷ.
ಕಾಂಗ್ರೆಸ್‌ನಲ್ಲಿ ಈ ಉಪಚುನಾವಣೆ ಕೊಂಚ ಗೊಂದಲಕ್ಕೆ ಕಾರಣವಾಗಿದ್ದುದು ಟಿಕೆಟ್ ಹಂಚಿಕೆಯ ವಿಚಾರದಲ್ಲಿ. ಬಾಗಲಕೋಟೆಯಲ್ಲಿ ಮೇಟಿ ಅವರ ಮಕ್ಕಳೇ, ಟಿಕೆಟ್’ಗಾಗಿ ಫೈಟ್ ಮಾಡುತ್ತಿದ್ದರು. ಇನ್ನೊಂದು ಕಡೆ, ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ದೊಡ್ಡ ಡ್ರಾಮಾವೇ ನಡೆದು ಹೋಯಿತು. ಕೊನೆಗೆ, ಎರಡೂ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ, ಆಯಾಯ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಯಿತು.
ಎರಡೂ ಪಕ್ಷದಿಂದ ಘಟಾನುಘಟಿಗಳು ಬಹಿರಂಗ ಪ್ರಚಾರ ನಡೆಸಿದ್ದು, ಫಲಿತಾಂಶದ ಬಗ್ಗೆ ರಾಜ್ಯದ ಜನರಲ್ಲಿ ತೀವ್ರ ಕುತೂಹಲವಿದೆ.
ಈ ಮಧ್ಯೆ, ಮುನಿಸು ಮರೆತು ಸಚಿವ ಜಮೀರ್ ಪ್ರಚಾರ ನಡೆಸಿರುವುದು, ಸಿದ್ದು-ಡಿಕೆಶಿಯಾದಿಯಾಗಿ ಇಡೀ ಸಂಪುಟದ ಸದಸ್ಯರು ಪ್ರಚಾರ ನಡೆಸಿರುವುದು, ಸರ್ಕಾರದ ಗ್ಯಾರಂಟಿ ಯೋಜನೆಗಳು, ಆಡಳಿತ ಪಕ್ಷಕ್ಕಿರುವ ಲಾಭಗಳು ಕಾಂಗ್ರೆಸ್ ಜಯಕ್ಕೆ ಕಾರಣವಾಗಲಿವೆ ಎಂಬುದು ಕಾಂಗ್ರೆಸ್ ನಾಯಕರ ಆಶಯ.ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ಪ್ರಲ್ಹಾದ್ ಜೋಶಿ ಸೇರಿ ಬಿಜೆಪಿಯ ಹಿರಿಯ ನಾಯಕರು ಪ್ರಚಾರ ನಡೆಸಿರುವುದು, ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಚಾರಕ್ಕೆ ಆಗಮಿಸಿರುವುದು, ಬಾಗಲಕೋಟೆಯಲ್ಲಿ ಅಭ್ಯರ್ಥಿ ಚರಂತಿಮಠ, ಪಿ.ಎಚ್.ಪೂಜಾರ ಮುನಿಸು ಮರೆತು ಒಂದಾಗಿರುವುದು, ಚರಂತಿಮಠ ಪರ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ ಪ್ರಚಾರ ನಡೆಸಿರುವುದು, ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವುದು ಗೆಲುವಿಗೆ ಸಹಕಾರಿ ಎಂಬುದು ಬಿಜೆಪಿ ನಾಯಕರ ಆಶಯ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.