ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಸಾಲು ಸಾಲು ರಜೆ ಹಾಗೂ ವರ್ಷಾಂತ್ಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇದರಿಂದ 2024ರ ಜ. 1ರ ವರೆಗೆ ಕೂಡ ಕೊಡಗು ಜಿಲ್ಲೆ ಹೌಸ್‌ಫುಲ್ ಆಗಲಿದೆ. ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ಪ್ರವಾಸಿಗರು ಹೋಂಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.
ವರ್ಷಾಂತ್ಯದ ಸಂದರ್ಭ ಪುಟ್ಟ ಜಿಲ್ಲೆ ಕೊಡಗಿಗೆ ಹೆಚ್ಚಿನ ಪ್ರವಾಸಿಗರ ಆಗಮನದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳು ಕೂಡ ತುಂಬಲಿವೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟು, ದುಬಾರೆ, ಕಾವೇರಿ ನಿಸರ್ಗಧಾಮ, ಅಬ್ಬಿ ಜಲಪಾತ ಸೇರಿ ಹಲವೆಡೆ ಪ್ರವಾಸಿಗರು ಭೇಟಿ ನೀಡಲಿದ್ದಾರೆ. ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಹೋಂಸ್ಟೇಗಳಲ್ಲಿ 35 ಸಾವಿರ ರೂಂ, ರೆಸಾರ್ಟ್ ಹಾಗೂ ಹೋಟೇಲ್‌ಗಳಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ರೂಂಗಳಿದ್ದು, ಬಹುತೇಕ ಭರ್ತಿಯಾಗಿದೆ ಎನ್ನಲಾಗುತ್ತಿದೆ. ಡಿ.24 ಹಾಗೂ 25ಕ್ಕೆ ಹೆಚ್ಚು ರೂಂಗಳು ಬುಕ್ ಆಗಿದೆ. ನಂತರ ಜನವರಿ 1ರ ವರೆಗೆ ಕೂಡ ಪ್ರವಾಸಿಗರಿಂದ ಕೊಡಗು ತುಂಬಿರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನದಿಂದಾಗಿ ಜಿಲ್ಲೆಯಲ್ಲಿ ವಿವಿಧ ಉದ್ಯಮಗಳಿಗೆ ಆದಾಯ ಏರಿಕೆ ಕಾಣಲಿದೆ. ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಗಳಿಗೆ ಭರ್ಜರಿ ಆದಾಯ ನಿರೀಕ್ಷಿಸಲಾಗಿದೆ. ಇದಲ್ಲದೆ ಜಿಲ್ಲೆಯಲ್ಲಿ ಮದ್ಯ ಮಾರಾಟ, ಮಾಂಸ ಕೂಡ ಹೆಚ್ಚಾಗಿ ವ್ಯಾಪಾರ ಆಗಲಿದೆ. ಪ್ರವಾಸೋದ್ಯಮವನ್ನು ಅವಂಲಭಿಸಿದ್ದವರಿಗೆ ವರ್ಷಾಂತ್ಯದಲ್ಲಿ ಹೆಚ್ಚಿನ ಆದಾಯ ಕೈಸೇರಲಿದೆ. ಮಡಿಕೇರಿ ತಾಲೂಕಿನ ಭಾಗಮಂಡಲ ರಸ್ತೆಯ ಉಡೋತ್ ಮೊಟ್ಟೆ ಸಮೀಪದಲ್ಲಿ ಗ್ಲಾಸ್ ಬ್ರಿಡ್ಜ್ ಇದ್ದು, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಯಿತು. ಇದರಿಂದ ರಸ್ತೆ ಸಂಚಾರಕ್ಕೆ ತೊಡಕು ಎದುರಾಯಿತು. ಪ್ರವಾಸಿಗರ ಆಗಮನದಿಂದಾಗಿ ಸ್ಥಳೀಯ ಸಾರ್ವಜನಿಕರು ತೊಂದರೆ ಅನುಭವಿಸಿದರು.2023 ಮುಕ್ತಾಯದ ಹಂತದಲ್ಲಿದ್ದು, ಪ್ರವಾಸಿಗರು ಕೂಡ ಹೊಸ ವರ್ಷ ಆಚರಣೆ ಸಂಭ್ರಮಿಸಲು ಕೊಡಗಿನತ್ತ ಮುಖ ಮಾಡುತ್ತಿದ್ದಾರೆ. ಮೈಸೂರು- ಮಡಿಕೇರಿ, ಮೈಸೂರು -ಗೋಣಿಕೊಪ್ಪ ರಸ್ತೆಯಲ್ಲಿ ಮೂರು ಕಿಲೋಮೀಟರ್ ಗಳಿಗೂ ಹೆಚ್ಚು ಸರದಿ ಸಾಲು ಏರ್ಪಟ್ಟು ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ, ಸ್ಥಳೀಯರು ಪರದಾಡುವಂತಾಗಿತ್ತು.ಶನಿವಾರ ಹಾಗೂ ಭಾನುವಾರ ರಾಜ್ಯದ ಹಾಗೂ ದೇಶದ ವಿವಿಧಡೆಗಳ ಕಾರುಗಳು ಗೋಣಿಕೊಪ್ಪದಿಂದ ಮೂರು ಕಿಲೋಮೀಟರ್ ದೂರದವರೆಗೆ ಸರದಿ ಸಾಲಿನಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು. ದಕ್ಷಿಣ ಕೊಡಗಿನ ಗೋಣಿಕೊಪ್ಪ ಕುಟ್ಟ ಶ್ರೀಮಂಗಲ, ಕಾನೂರು, ವಿರಾಜಪೇಟೆ, ಕಕ್ಕಬೆ, ಎಲ್ಲಾ ಭಾಗದಲ್ಲೂ ಕೂಡ ಪ್ರವಾಸಿಗರ ವಾಹನಗಳೇ ಕಾಣಸಿಗುತ್ತದೆ. ಒಟ್ಟಿನಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಕೊಡಗಿನತ್ತ ಪ್ರವಾಸಿಗರ ಚಿತ್ತ ಹರಿಯುತ್ತಿರುವಂತೆ ಕಾಣುತ್ತಿದೆ. ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಕಿರಿದಾದ ರಸ್ತೆಗಳಿದ್ದು, ಪ್ರವಾಸಿಗರ ಆಗಮನ ಹಿನ್ನೆಲ್ಲೆಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿದ ಪರಿಣಾಮ ಪೊಲೀಸರು ಹರಸಾಹಸ ಪಡಬೇಕಾಯಿತು. ಮಾಸ್ಕ್ ಧರಿಸದ ಪ್ರವಾಸಿಗರು, ಕೋವಿಡ್ ಆತಂಕ
ಕೋವಿಡ್ ರೂಪಾಂತರಿ ತಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರಿಂದ ಆತಂಕ ಉಂಟಾಗಿದೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲ ರಾಜ್ಯಗಳಿಂದ ಕೊಡಗಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಸರ್ಕಾರ 60 ವರ್ಷ ದಾಟಿದವರು ಮಾಸ್ಕ್ ಹಾಕುವುದು ಕಡ್ಡಾಯಗೊಳಿಸಿದೆ. ಆದರೆ ಪ್ರವಾಸಿ ತಾಣಗಳಲ್ಲಿ ಯಾರೊಬ್ಬರೂ ಕೂಡ ಮಾಸ್ಕ್ ಧರಿಸದೆ ಉಲ್ಲಂಘನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಎಲ್ಲ ಹೋಟೆಲ್, ರೆಸಾರ್ಸ್, ರೆಸ್ಟೋರೆಂಟ್ ಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊಡಗು ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡಲು ಯಾವುದೇ ಆತಂಕದ ಅಗತ್ಯವಿಲ್ಲ. ಕೊಡಗಿನ ಎಲ್ಲ ಪ್ರವಾಸಿ ತಾಣಗಳು ಪ್ರವಾಸಿಗರ ಭೇಟಿಗೆ ಮುಕ್ತವಾಗಿದ್ದು ಸುರಕ್ಷಿತವಾಗಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೆ ಕೊಡಗು ಸಿದ್ಧವಾಗಿದೆ ಎಂದು ಕೊಡಗು ಜಿಲ್ಲಾ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ತಿಳಿಸಿದೆ.