ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮಹಿಳೆಯೊಬ್ಬರ ಬೆನ್ನುಮೂಳೆಯಲ್ಲಿದ್ದ ಮೂರು ಸೆಂ.ಮೀ. ಗಾತ್ರದ ಗೆಡ್ಡೆಯನ್ನು ಡಾ. ಮಹೇಶ್ ಕೆ. ಮತ್ತು ಡಾ. ಶತಾನಂದಪ್ರಸಾದ್ ರಾವ್ ನೇತೃತ್ವದ ತಜ್ಞವೈದ್ಯರ ತಂಡ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದು ಮಹಿಳೆಗೆ ಶಾಶ್ವತ ಪರಿಹಾರ ನೀಡಿದ್ದಾರೆ.ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ವಿಶ್ವದಲ್ಲೇ ಮೊದಲ ಬಾರಿ ಬೆನ್ನುಮೂಳೆಯ ಗೆಡ್ಡೆಯನ್ನು ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದ ವೈದ್ಯರು ಮತ್ತು ತಂಡವನ್ನು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭಾನುವಾರ ಗೌರವಿಸಿ ಅಭಿನಂದಿಸಿದರು.
ಶಸ್ತ್ರಚಿಕಿತ್ಸೆಯ ವಿಧಾನವನ್ನು ವೀಡಿಯೊ ಪ್ರದರ್ಶನದ ಮೂಲಕ ವೈದ್ಯರು ವಿವರಿಸಿದರು. ಶಿಶಿಲ ಗ್ರಾಮದ ೬೫ ವರ್ಷ ಪ್ರಾಯದ ಧರ್ಣಮ್ಮ ಎಂಬ ಮಹಿಳೆ ಬೆನ್ನುನೋವು ಚಿಕಿತ್ಸೆಗೆಂದು ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆಗೆ ಬಂದಿದ್ದರು. ಪರೀಕ್ಷಿಸಿದಾಗ ಬೆನ್ನುಮೂಳೆಯಲ್ಲಿ ೩ ಸೆಂ. ಮೀ. ಗಾತ್ರದ ಗೆಡ್ಡೆ ಕಂಡುಬಂತು. ಸತತ ಆರು ಗಂಟೆಗಳ ಕಾಲ ಎಂಡೋಸ್ಕೋಪಿಕ್ ತಂತ್ರಜ್ಞಾನ ಬಳಸಿ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಕೇವಲ ಒಂದು ಸೆಂ. ಮೀ. ಛೇದನದೊಂದಿಗೆ ಮೂರು ಸೆಂ. ಮೀ. ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಹೆಚ್ಚಿನ ರಕ್ತಸ್ರಾವವಾಗದಂತೆ ಹಾಗೂ ಇತರ ಅಂಗಾಂಗಗಳಿಗೆ ಹಾನಿಯಾಗದಂತೆ ನೋವುರಹಿತ ಶಸ್ತ್ರಚಿಕಿತ್ಸೆ ಮೂಲಕ ಆಕೆ ಈಗ ಪೂರ್ಣ ಆರೋಗ್ಯವನ್ನು ಹೊಂದಿದ್ದಾರೆ.ಡಾ. ಮಹೇಶ್ ಕೆ. ಮತ್ತು ಮೂಳೆ ಶಸ್ತ್ರಚಿಕಿತ್ಸಕರಾದ ಡಾ. ಶತಾನಂದಪ್ರಸಾದ್ ರಾವ್, ಅರೆವಳಿಕೆ ತಜ್ಞರಾದ ಉಜಿರೆಯ ಡಾ. ಚೈತ್ರಾ ಆರ್. ತಂಡ ಆಪರೇಶನ್ ಮಾಡಿದರು. ಅರೆವಳಿಕೆ ತಂತ್ರಜ್ಞರಾದ ರಂಜಿತ್ ಮತ್ತು ಅಮಿತಾ, ದಾದಿಯರಾದ ಜ್ಯೋತಿ ಮತ್ತು ಶ್ವೇತಲ್ ಸಹಕರಿಸಿದರು. ಕೇವಲ 1 ಲಕ್ಷದ 2 ಸಾವಿರ ರು. ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಡೆಹರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಬೆನ್ನುಮೂಳೆ ಶಸ್ತçಚಿಕಿತ್ಸಕರ ಸಮಾವೇಶದಲ್ಲಿ ಉಜಿರೆಯ ಯಶಸ್ವಿ ಶಸ್ತ್ರಚಿಕಿತ್ಸೆ ಬಗ್ಗೆ ಪ್ರಸ್ತಾಪಿಸಿದಾಗ ವಿಶ್ವದಲ್ಲೇ ಇದು ಮೊದಲ ಯಶಸ್ವಿ ಎಂಡೋಸ್ಕೋಪಿಕ್ ಇಂಟ್ರಾಡ್ಯೂರಲ್ ಬೆನ್ನುಮೂಳೆಯ ಗೆಡ್ಡೆ ಹೊರತೆಗೆಯುವ ಶಸ್ತ್ರಚಿಕಿಸ್ತೆ ಎಂದು ಎಲ್ಲರೂ ಅಭಿನಂದಿಸಿದ್ದಾರೆ. ಆಸ್ಪತ್ರೆಗೆ ಬೇಕಾದ ಹೊಸ ಎಂ.ಆರ್.ಐ. ಅಳವಡಿಸುವುದಾಗಿ ಹೆಗ್ಗಡೆರ ಭರವಸೆ ನೀಡಿದರು.ಹೇಮಾವತಿ ವೀ. ಹೆಗ್ಗಡೆ ವೈದ್ಯರ ಸೇವೆ, ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್ ಮತ್ತು ಅರೆವಳಿಕೆ ತಜ್ಞರಾದ ಉಜಿರೆಯ ಡಾ. ಚೈತ್ರಾ ಆರ್. ಉಪಸ್ಥಿತರಿದ್ದರು. ಗುಣಮುಖರಾದ ಶಿಶಿಲದ ಧರ್ಣಮ್ಮ ಉಪಸ್ಥಿತರಿದ್ದರು. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಜನಾರ್ದನ್ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಚಿದಾನಂದ ನಿರೂಪಿಸಿ, ವಂದಿಸಿದರು.