ಭಟ್ಕಳ: ಎಂಡೋಸಲ್ಫಾನ್ ಪೀಡಿತರು ಸರ್ಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗಬಾರದು. ಸರ್ಕಾರದ ಸೌಲಭ್ಯದಿಂದ ಬಿಟ್ಟು ಹೋದ ಪೀಡಿತರೂ ಮಾಸಾಶನ, ಆಸ್ಪತ್ರೆ ವೆಚ್ಚ ಸೇರಿದಂತೆ ಎಲ್ಲ ಅನುಕೂಲ ಪಡೆಯಲು ಅರ್ಹರಿದ್ದು, ಅಂಥವರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ಶಿರಾಲಿಯಲ್ಲಿ ಎಂಡೋಸಲ್ಫಾನ್ ಪೀಡಿತರಿಗೆ ಚಿಕಿತ್ಸೆ ಮತ್ತು ಸರ್ಕಾರದ ಸೌಲಭ್ಯ ಬಗ್ಗೆ ಮಾಹಿತಿ ನೀಡುವ ಶಿಬಿರ ಉದ್ಘಾಟಿಸಿ ಮಾತನಾಡಿ, ಎಂಡೋಸಲ್ಪಾನ್ ಪೀಡಿತರನ್ನು ಅವರ ಪಾಲಕರು ಪೋಷಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗಬೇಕು ಎಂದು ಮಂಕಿಯಲ್ಲಿ ಇವರಿಗಾಗಿಯೇ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣದ ನಿರ್ಣಯ ಕೈಗೊಂಡಿದ್ದೇವೆ. ಈಗಲೂ ಕೆಲವು ಎಂಡೋಸಲ್ಪಾನ್ ಪೀಡಿತರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ.ರಾಜ್ಯದಲ್ಲಿ ಎಲ್ಲಿಯೂ, ಯಾರೂ ಸರ್ಕಾರದ ಅನುಕೂಲಗಳಿಂದ ವಂಚಿತರಾಗಬಾರದು. ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ದೊರೆಯಬೇಕು ಎನ್ನುವ ಹಿನ್ನೆಲೆ ಅವರಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ. 1985ರಿಂದ ಬೆಳಕೆಯಲ್ಲಿ ಸತತವಾಗಿ 5 ವರ್ಷ ಎಂಡೋಸಲ್ಫಾನ್ ದ್ರಾವಣವನ್ನು ಸಿಂಪಡಿಸಲಾಗಿತ್ತು. ಎಂಡೋಸಲ್ಪಾನ್ ಪೀಡಿತರು ನಿಜವಾದ ಬಡವರಾಗಿದ್ದಾರೆ. ಅವರಿಗೆ ಸರ್ಕಾರದ ಸೌಲಭ್ಯ ಸಿಗಬೇಕು ಎಂದರು.
ಶಿಬಿರದಲ್ಲಿ ಒಟ್ಟು 416 ಎಂಡೋ ಸಲ್ಫಾನ್ ಪೀಡಿತರನ್ನು ವೈದ್ಯರು ತಪಾಸಣೆ ನಡೆಸಿದ್ದು, ಮಾನಸಿಕ ತಜ್ಞರು 137, ಕೀಲುಮೂಳೆ ತಜ್ಞರು 139, ಕಿವಿಮೂಗು ಗಂಟಲು ತಜ್ಞರು 70, ನೇತ್ರ ತಜ್ಞರು 57, ಫಿಜಿಶಿಯನ್ 13 ಪೀಡಿತರನ್ನು ಪರೀಕ್ಷೆ ನಡೆಸಿದರು. ಸಂಪನ್ಮೂಲ ವ್ಯಕ್ತಿ ಡಾ. ಸತೀಶ ಶೇಟ್ ಅವರು ಎಂಡೋಸಲ್ಫಾನ್ ಕುರಿತ ಸಮಗ್ರ ಮಾಹಿತಿ ನೀಡಿ, ಪರಿಹಾರಕ್ಕೆ ಯಾರು ಅರ್ಹರು ಎನ್ನುವ ಕುರಿತು ತಿಳಿಸಿದರು.ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ, ಶಿರಾಲಿ ಗ್ರಾಪಂ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮುಂತಾದವರಿದ್ದರು. ಅಕ್ರಮ ಕಟ್ಟಡ ತೆರವಿಗೆ ಲೋಕಾ ಮೊರೆ
ಗೋಕರ್ಣ: ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾವಿಕೊಡ್ಲ ಗ್ರಾಮದ ದುಬ್ಬನಸಶಿ, ಗಂಗೆಕೊಳ್ಳ, ಕಡಲತೀರದಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಿರುವ ರೆಸಾರ್ಟ್, ಹೋಟೆಲ್‌ಗಳನ್ನು ತೆರವುಗೊಳಿಸಲು ಸಂಬಂಧಿಸಿದ ಇಲಾಖೆ ಇನ್ನೊಂದು ವಾರ ಗಡುವು ನೀಡಿ, ಅದರೊಳಗೆ ಕ್ರಮ ಕೈಗೊಳ್ಳದಿದ್ದರೆ, ಲೋಕಾಯುಕ್ತ ನ್ಯಾಯಾಲಯದಲ್ಲಿ ದಾವೆ ಹೂಡಲು ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ನಿರ್ಧರಿಸಿದ್ದಾರೆ.ಈ ಕುರಿತು ಬುಧವಾರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಗೌಡ ಮಾತನಾಡಿ, ಗೋಮಾಳ ಸೇರಿದಂತೆ ಸರ್ಕಾರಿ ಜಾಗವನ್ನು ರಕ್ಷಿಸಲು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಕ್ರಮ ಕಟ್ಟಡ ತೆರವಿಗೆ ಠರಾವು ಮಾಡಿ ಜಿಲ್ಲಾಧಿಕಾರಿಗಳಿಗೆ ಹಲವು ತಿಂಗಳ ಹಿಂದೆ ಮನವಿ ನೀಡಲಾಗಿತ್ತು.ಆದರೆ ಯಾವುದೇ ಕ್ರಮವಾಗಿರಲಿಲ್ಲ. ಪುನಃ ಈ ಕುರಿತು ಕುಮಟಾ ಉಪವಿಭಾಗಾಧಿಕಾರಿಯವರಿಗೆ ಮನವಿ ನೀಡಿ ವಿವರಿಸಲಾಗಿದೆ. ಆದರೆ ಒಮ್ಮೆ ಸ್ಥಳಕ್ಕೆ ಬಂದಿರುವುದು ಬಿಟ್ಟರೆ ಯಾವುದೇ ಕಾರ್ಯವಾಗುತ್ತಿಲ್ಲ. ಇದಕ್ಕಾಗಿ ಮುಂದಿನ ಹೆಜ್ಜೆ ಕುರಿತು ಸದಸ್ಯರು ಸೇರಿ ಒಂದು ವಾರದಲ್ಲಿ ಸರ್ವೆ ಮಾಡಿ ತ್ವರಿತ ಕ್ರಮ ಕೈಗೊಳ್ಳದಿದ್ದಲ್ಲಿ ಲೋಕಾಯುಕ್ತರ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದರು.
ನಮ್ಮ ಸ್ವಂತ ಜಾಗದ ಕುರಿತು ಯಾವುದೇ ಕಾರ್ಯ ಮಾಡುತ್ತಿಲ್ಲ. ಸರ್ಕಾರದ ಆಸ್ತಿ ರಕ್ಷಣೆಗೆ ಪಂಚಾಯಿತಿ ಪಣ ತೊಟ್ಟಿದ್ದು, ಇದಕ್ಕೆ ಸರ್ಕಾರಿ ಅಧಿಕಾರಿಗಳೇ ಸಹಕಾರ ನೀಡಬೇಕು ಎಂದಿದ್ದಾರೆ. ಈ ವೇಳೆ ಗ್ರಾಪಂ ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.