ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭರ್ಜರಿ ನೃತ್ಯ

KannadaprabhaNewsNetwork |  
Published : Sep 28, 2026, 02:00 AM IST
ಫೋಟೋ ಮಹಿಳೆಯರು ಕುಣಿಯುತ್ತಿರುವುದು  ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಭರ್ಜರಿ ಡ್ಯಾನ್ಸ್ | Kannada Prabha

ಸಾರಾಂಶ

ಕೊಪ್ಪಳ ನಗರದಲ್ಲಿ ಶನಿವಾರ ರಾತ್ರಿ ನಡೆದ ಹಿಂದೂ ಮಹಾ ಮಂಡಳಿಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಡಿಜೆ ಅಬ್ಬರ, ಝಗಮಗಿಸುವ ವಿದ್ಯುತ್‌ ದೀಪಗಳ ಅಲಂಕಾರ ಹಾಗೂ ಪಟಾಕಿಗಳ ಸದ್ದು ಮತ್ತಷ್ಟು ಮೆರುಗು ನೀಡಿತು. ಮೆರವಣಿಗೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌ ಪಾಲ್ಗೊಂಡು ಡಿಜೆ ಹಾಡಿಗೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಕೊಪ್ಪಳ: ನಗರದಲ್ಲಿ ಶನಿವಾರ ರಾತ್ರಿ ನಡೆದ ಹಿಂದೂ ಮಹಾ ಮಂಡಳಿಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಡಿಜೆ ಅಬ್ಬರ, ಝಗಮಗಿಸುವ ವಿದ್ಯುತ್‌ ದೀಪಗಳ ಅಲಂಕಾರ ಹಾಗೂ ಪಟಾಕಿಗಳ ಸದ್ದು ಮತ್ತಷ್ಟು ಮೆರುಗು ನೀಡಿತು. ಮೆರವಣಿಗೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌ ಪಾಲ್ಗೊಂಡು ಡಿಜೆ ಹಾಡಿಗೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಹಿಂದೂ ಮಹಾ ಮಂಡಳಿಯಿಂದ ಪ್ರತಿಷ್ಠಾಪಿಸಲಾಗಿದ್ದ ಬೃಹದಾಕಾರದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ರಾತ್ರಿ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಗಣೇಶನ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ವಿದ್ಯುತ್‌ ದೀಪಗಳ ಅಲಂಕಾರ ಕಣ್ಮನ ಸೆಳೆಯುತ್ತಿತ್ತು. ಡಿಜೆ ಸಂಗೀತದ ಅಬ್ಬರಕ್ಕೆ ಯುವಕರು ಹೆಜ್ಜೆ ಹಾಕುತ್ತಿದ್ದರೆ, ಮತ್ತೊಂದೆಡೆ ಪಟಾಕಿಗಳ ಸದ್ದು ವಾತಾವರಣವನ್ನು ಮತ್ತಷ್ಟು ರಂಗೇರಿಸಿತು. ಗಣೇಶ ಮೂರ್ತಿಯ ಮೇಲೆ ಹೂವಿನ ಸುರಿಮಳೆಯೂ ನಡೆಯಿತು.

ಹೆಗಲ ಮೇಲೆ ಹೊತ್ತು ಕುಣಿಸಿದ ಅಭಿಮಾನಿಗಳು: ಮೆರವಣಿಗೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್‌ ಪಾಲ್ಗೊಂಡ ಸಂದರ್ಭದಲ್ಲಿ ಅವರ ಅಭಿಮಾನಿಗಳು ಶಾಸಕರನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಡಿಜೆ ಸಂಗೀತಕ್ಕೆ ಅಭಿಮಾನಿಗಳೊಂದಿಗೆ ಶಾಸಕರೂ ಹೆಜ್ಜೆ ಹಾಕಿ ಗಮನ ಸೆಳೆದರು.

ಶಾಸಕರು ಡಿಜೆ ಹಾಡಿಗೆ ನೃತ್ಯ ಮಾಡುತ್ತಿದ್ದಂತೆ ಸುತ್ತಲಿದ್ದ ಯುವಕರು ಹಾಗೂ ಅಭಿಮಾನಿಗಳು ಉತ್ಸಾಹದಿಂದ ಕುಣಿದು ಸಂಭ್ರಮಿಸಿದರು. ಕೆಲಕಾಲ ಮೆರವಣಿಗೆಯ ಕೇಂದ್ರಬಿಂದುವಾಗಿದ್ದ ಶಾಸಕರ ನೃತ್ಯವನ್ನು ಸಾರ್ವಜನಿಕರು ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ಶಾಸಕರೊಂದಿಗೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಸೇರಿಕೊಂಡು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದ ದೃಶ್ಯ ಮೆರವಣಿಗೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಮಹಿಳೆಯರಿಂದಲೂ ಉತ್ಸಾಹದ ನೃತ್ಯ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಸಾಗುತ್ತಿದ್ದಂತೆ ಡಿಜೆ ಸಂಗೀತಕ್ಕೆ ಮಹಿಳೆಯರು ಉತ್ಸಾಹದಿಂದ ನೃತ್ಯ ಮಾಡಿದರು. ಕೆಲವರು ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಪ್ರತಿ ವರ್ಷ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಬಾರಿಯೂ ನಗರದ ವಿವಿಧ ಬಡಾವಣೆಗಳಿಂದ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದರು.

ರಾತ್ರಿಯಿಡೀ ಸಂಭ್ರಮ: ಹಿಂದೂ ಮಹಾ ಮಂಡಳಿಯಿಂದ ಈ ಬಾರಿ ಬೃಹದಾಕಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗಣೇಶೋತ್ಸವದ ಅವಧಿಯಲ್ಲಿ ಭಕ್ತರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ದಿನಗಳಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಕೂಡ ಮಾಡಲಾಗಿತ್ತು.

ಶನಿವಾರ ನಡೆದ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಂಡುಬಂದಿತು. ಡಿಜೆ ಸಂಗೀತ, ಬಣ್ಣಬಣ್ಣದ ವಿದ್ಯುತ್‌ ದೀಪಗಳ ಅಲಂಕಾರ ಹಾಗೂ ಪಟಾಕಿಗಳ ಸದ್ದು ರಾತ್ರಿಯಿಡೀ ಮುಂದುವರಿಯಿತು.

ಮೆರವಣಿಗೆ ಸಾಗುವ ಮಾರ್ಗದಲ್ಲಿ ಭಕ್ತರು ಗಣೇಶನಿಗೆ ಜೈಕಾರ ಹಾಕಿ, ಹೂವು ಅರ್ಪಿಸಿ ಭಕ್ತಿಭಾವ ಮೆರೆದರು. ಯುವ ಸಮೂಹದ ಉತ್ಸಾಹ, ಮಹಿಳೆಯರ ನೃತ್ಯ ಹಾಗೂ ವಿವಿಧ ರೀತಿಯ ವಿದ್ಯುತ್‌ ಅಲಂಕಾರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.

ಬಳಿಕ ನಿಗದಿತ ಸ್ಥಳದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನೆರವೇರಿಸಲಾಯಿತು. ಇದರೊಂದಿಗೆ ಹಲವು ದಿನಗಳಿಂದ ನಡೆಯುತ್ತಿದ್ದ ಗಣೇಶೋತ್ಸವಕ್ಕೆ ತೆರೆ ಬಿದ್ದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತರಿಗೆ ನೆಲೆಗಟ್ಟು ಕಲ್ಪಿಸಿದ ಶರಣರ ಕಾಯಕ ತತ್ವ
ಕಲ್ಯಾಣ ಕರ್ನಾಟಕ ಪ್ರತಿಭಾವಂತ ಕಲಾದವಿದರು