ತರಕಾರಿ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಹೆಚ್ಚಿದ ಹೊರೆ

KannadaprabhaNewsNetwork |  
Published : Sep 28, 2026, 02:00 AM IST
ಶಿರಹಟ್ಟಿ ಪಟ್ಟಣದಲ್ಲಿ ಭಾನುವಾರ ಸಂತೆ ದಿನವಾಗಿದ್ದು, ವಿವಿಧ ಗ್ರಾಮಗಳಿಂದ ರೈತರು ತಂದ ತರಕಾರಿ ಮಾರಾಟ ಮಾಡುತ್ತಿರುವುದು. | Kannada Prabha

ಸಾರಾಂಶ

ಈ ಬಾರಿ ಬರದ ಪರಿಸ್ಥಿತಿ ತೀವ್ರವಾಗಿರುವ ಪರಿಣಾಮ ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಿರುವುದರಿಂದ ಸಾಮಾನ್ಯ ಜನರ ಅಡುಗೆ ಮನೆಯ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ತರಕಾರಿಗಳ ದರವೂ ಹೆಚ್ಚಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಸಾಮಾನ್ಯ ಜನರ ಅಡುಗೆ ಮನೆಯ ಬಜೆಟ್ ಹೆಚ್ಚಳ

ಮಾರುಕಟ್ಟೆಗಳಿಗೆ ಬರುವ ತರಕಾರಿ ಪ್ರಮಾಣವೂ ಕಡಿಮೆ

ಮಹದೇವಪ್ಪ ಎಂ. ಸ್ವಾಮಿ

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಈ ಬಾರಿ ಬರದ ಪರಿಸ್ಥಿತಿ ತೀವ್ರವಾಗಿರುವ ಪರಿಣಾಮ ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಿರುವುದರಿಂದ ಸಾಮಾನ್ಯ ಜನರ ಅಡುಗೆ ಮನೆಯ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ತರಕಾರಿಗಳ ದರವೂ ಹೆಚ್ಚಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಮಾರುಕಟ್ಟೆಗಳಿಗೆ ಬರುವ ತರಕಾರಿ ಪ್ರಮಾಣವೂ ಕಡಿಮೆಯಾಗುತ್ತಿದೆ. ಇದರ ಬೆನ್ನಲ್ಲೇ ಹಲವು ತರಕಾರಿಗಳ ದರ ಏರಿಕೆಯಾಗಿದ್ದು, ಈರುಳ್ಳಿ, ಆಲೂಗಡ್ಡೆ, ಬದನೆಕಾಯಿ, ಕ್ಯಾರೆಟ್, ಸೌತೆಕಾಯಿ, ಬೆಂಡಿಕಾಯಿ, ಬೀಟ್ರೂಟ್ ಸೇರಿದಂತೆ ವಿವಿಧ ತರಕಾರಿಗಳ ದರ ಕೆಜಿಗೆ 35-40 ಇದ್ದದ್ದು, ₹60-70ಕ್ಕೆ ಏರಿಕೆಯಾಗಿದೆ. ಕೊತ್ತಂಬರಿ, ದಪ್ಪ ಮೆಣಸಿನಕಾಯಿ, ಟೊಮೆಟೊ, ನಿಂಬೆಹಣ್ಣಿನ ದರವೂ ಹೆಚ್ಚಳವಾಗಿದ್ದು, ಹಸಿರು ತರಕಾರಿಗಳ ಬೆಲೆಯೂ ಗ್ರಾಹಕರ ಕೈಗೆಟುಕದಂತಾಗಿದೆ. ಬೆಲೆ ಏರಿಕೆಯಿಂದಾಗಿ ಕೆಲವರು ದುಬಾರಿ ತರಕಾರಿಗಳನ್ನು ಬಿಟ್ಟು ಕಡಿಮೆ ದರದ ತರಕಾರಿಗಳತ್ತ ಮುಖ ಮಾಡುತ್ತಿದ್ದಾರೆ. ಮಳೆ ಪ್ರಮಾಣದಲ್ಲಿನ ಏರಿಳಿತ, ಬೆಳೆ ಹಾನಿ, ಸಾಗಾಟ ವೆಚ್ಚ, ಇಂಧನ ದರ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ-ಪೂರೈಕೆಯ ವ್ಯತ್ಯಾಸ ಸೇರಿದಂತೆ ಹಲವು ಕಾರಣಗಳಿಂದ ತರಕಾರಿ ಬೆಲೆಗಳಲ್ಲಿ ಏರಿಳಿತ ಉಂಟಾಗುತ್ತಿದೆ. ರೈತರಿಂದ ಮಾರುಕಟ್ಟೆಗೆ ತರಕಾರಿ ತಲುಪುವವರೆಗೆ ಮಧ್ಯವರ್ತಿಗಳ ಹಂತಗಳು ಹೆಚ್ಚಾಗುವುದರಿಂದ ಗ್ರಾಹಕರು ಹೆಚ್ಚಿನ ದರ ಪಾವತಿಸಬೇಕಾಗುತ್ತಿದೆ ಎಂಬುದು ಗ್ರಾಹಕರ ಆರೋಪವಾಗಿದೆ.

ಮಾರುಕಟ್ಟೆ ಪರಿಶೀಲನೆ ಅಗತ್ಯ:

ತರಕಾರಿ ಬೆಲೆ ಏರಿಕೆಗೆ ನಿಖರ ಕಾರಣವೇನು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ರೈತರಿಂದ ಖರೀದಿಸುವ ದರ ಮತ್ತು ಗ್ರಾಹಕರಿಗೆ ಮಾರಾಟವಾಗುವ ದರದ ನಡುವಿನ ವ್ಯತ್ಯಾಸದ ಮೇಲೂ ನಿಗಾ ವಹಿಸಬೇಕಾಗಿದೆ. ಅನಧಿಕೃತ ಬೆಲೆ ಏರಿಕೆ ಹಾಗೂ ಕೃತಕ ಅಭಾವ ಸೃಷ್ಟಿಯಾಗದಂತೆ ಮಾರುಕಟ್ಟೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತರಕಾರಿ ಬೆಲೆ ಏರಿಕೆಯಿಂದ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳ ಮಾಸಿಕ ಖರ್ಚು ಹೆಚ್ಚಾಗಿದೆ. ಈಗಾಗಲೇ ಅಡುಗೆ ಅನಿಲ, ದಿನಸಿ ಸೇರಿ ವಿವಿಧ ಅಗತ್ಯ ವಸ್ತುಗಳ ಖರ್ಚು ಹೆಚ್ಚಿರುವ ಸಂದರ್ಭದಲ್ಲಿ ತರಕಾರಿ ಬೆಲೆಯೂ ಏರಿಕೆಯಾಗಿರುವುದು ಕುಟುಂಬಗಳ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬೆಲೆ ಸ್ಥಿರತೆಗೆ ಕ್ರಮ ಅಗತ್ಯ:

ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಗ್ರಾಹಕರಿಗೂ ನ್ಯಾಯಯುತ ದರದಲ್ಲಿ ತರಕಾರಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಮಾರುಕಟ್ಟೆಗಳಲ್ಲಿ ದರಪಟ್ಟಿ ಪ್ರದರ್ಶಿಸುವುದು, ದರಗಳ ಮೇಲೆ ಅಧಿಕಾರಿಗಳು ನಿಗಾ ವಹಿಸುವುದು ಹಾಗೂ ರೈತರಿಂದ ನೇರವಾಗಿ ಗ್ರಾಹಕರಿಗೆ ತರಕಾರಿ ಮಾರಾಟವಾಗುವ ವ್ಯವಸ್ಥೆ ಕಲ್ಪಿಸುವುದರಿಂದ ಮಧ್ಯವರ್ತಿಗಳ ಹಾವಳಿಯನ್ನು ಕಡಿಮೆ ಮಾಡಬಹುದು.

ತರಕಾರಿ ಬೆಲೆ ಏರಿಕೆಯಿಂದ ಜನಸಾಮಾನ್ಯರ ಅಡುಗೆ ಮನೆಯ ಲೆಕ್ಕಾಚಾರವೇ ಬದಲಾಗಿದ್ದು, ಗ್ರಾಹಕರ ಜೇಬಿಗೆ ಹೊರೆ ಹೆಚ್ಚಿಸುವ ಬೆಲೆ ಏರಿಕೆಗೆ ಕಡಿವಾಣ ಹಾಕಿ, ಅಗತ್ಯ ವಸ್ತುಗಳು ಕೈಗೆಟುಕುವ ದರದಲ್ಲಿ ದೊರೆಯುವಂತೆ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಅಲ್ಲಲ್ಲಿ ಅಲ್ಪಸ್ವಲ್ಪ ತರಕಾರಿ ಬೆಳೆದ ರೈತರು ಭಾನುವಾರ ಬೆಳಗ್ಗೆಯೇ ಮಾರುಕಟ್ಟೆಗೆ ತಂದಿದ್ದರು. ಅಲ್ಲಿ ಮಧ್ಯವರ್ತಿಗಳ ಕಾಟದಿಂದ ನೇರವಾಗಿ ತರಕಾರಿ ಅಂಗಡಿಗಳಿಗೆ ಕೊಡಲು ಹೋದರೆ ಅದು ಸಾಧ್ಯವಾಗುತ್ತಿಲ್ಲ. ಬಹುತೇಕ ತರಕಾರಿ ಬೆಲೆ ₹೬೦ಕ್ಕೂ ಹೆಚ್ಚಿದೆ. ಈ ದರ ರೈತರಿಗೆ ಸಿಗುತ್ತಿಲ್ಲ. ಮಧ್ಯವರ್ತಿಗಳಿಗೆ ಕಮಿಷನ್ ಕೊಡದೇ ಗತಿಯೇ ಇಲ್ಲ. ಇದು ರೈತರ ಜೀವ ಹಿಂಡುವ ಸ್ಥಿತಿಯಾಗಿದೆ ಎನ್ನುತ್ತಾರೆ ರೈತ ತೋಟಪ್ಪ ಸೊನ್ನದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತರಿಗೆ ನೆಲೆಗಟ್ಟು ಕಲ್ಪಿಸಿದ ಶರಣರ ಕಾಯಕ ತತ್ವ
ಕಲ್ಯಾಣ ಕರ್ನಾಟಕ ಪ್ರತಿಭಾವಂತ ಕಲಾದವಿದರು