ಕನ್ನಡಪ್ರಭ ವಾರ್ತೆ ಬೆಂಗಳೂರು
ಸಹಕಾರ ಕ್ಷೇತ್ರದಿಂದಾಗಿ ಕೃಷಿ ಸೇರಿ ಹಲವು ಕ್ಷೇತ್ರಗಳಿಗೆ ದೊಡ್ಡ ಚೈತನ್ಯ ಸಿಕ್ಕಿದೆ. ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಸಹಕಾರ ಕ್ಷೇತ್ರ ಗಟ್ಟಿಯಾದರೆ ಆರ್ಥಿಕ ಹಾಗೂ ಸಾಮಾಜಿಕ ಚೈತನ್ಯ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಶುಕ್ರವಾರ ನಗರದ ಅರಮನೆ ಮೈದಾನ ಗಾಯತ್ರಿ ವಿಹಾರದಲ್ಲಿ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ, ಸಹಕಾರಿ ಕ್ಷೇತ್ರದ ಸಾಧಕರಿಗೆ ‘ಸಹಕಾರ ರತ್ನ’ ಪ್ರಶಸ್ತಿ ವಿತರಿಸಿ ಮಾತನಾಡಿದರು.
ರಾಜ್ಯದ ಗದಗ ಜಿಲ್ಲೆಯ ಕಣಗಿನಾಳ್‌ನಲ್ಲಿ ಮೊಟ್ಟ ಮೊದಲ ಸಹಕಾರ ಬ್ಯಾಂಕ್ ಸ್ಥಾಪನೆ ಆಗಿತ್ತು. ಹೀಗಾಗಿ ಕರ್ನಾಟಕವನ್ನು ಭಾರತದ ಸಹಕಾರ ಕ್ಷೇತ್ರದ ರಾಜಧಾನಿ ಎಂದು ಕರೆಯುತ್ತಾರೆ. ಗ್ರಾಮೀಣ ಭಾರತದ ಪ್ರಗತಿಗಾಗಿ ಸಹಕಾರ ಕ್ಷೇತ್ರ ಬಹಳ ಮುಖ್ಯವಾಗಿದ್ದು, ಸಹಕಾರಿ ಚಳವಳಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಮೂಲವಾಗಿದೆ. ನೆಹರೂ ಅವರು ಸಹಕಾರ ಕ್ಷೇತ್ರಕ್ಕೆ ಚೈತನ್ಯ ನೀಡಿದ್ದಾರೆ ಎಂದರು.ರಾಜ್ಯದಲ್ಲಿ ವಾರ್ಷಿಕ ವಹಿವಾಟು 25 ಸಾವಿರ ಕೋಟಿ ರು.ನೊಂದಿಗೆ ಪ್ರತಿ ದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಇದು ಸಹಕಾರಿ ಚಳವಳಿ ಮೂಲಕ ಬೆಳೆದ ಹಾಲು ಮಹಾ ಮಂಡಳಗಳ ಮಹತ್ ಸಾಧನೆ. ಹಾಲು ಉತ್ಪಾದಕರ ಸಂಘಗಳು ಚಳವಳಿ ಸ್ವರೂಪದಲ್ಲಿ ನಡೆದು ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ಹಾಲನ್ನು ನೇರವಾಗಿ ಉತ್ಪಾದಕರ ಸಂಘಗಳಿಗೆ ಸರಬರಾಜು ಮಾಡುವಂತಾಯಿತು ಎಂದರು.
ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ನೆಹರೂ ಅವರು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆ ಮೂಲಕ, ಸಹಕಾರ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ಮತ್ತು ನೆರವು ನೀಡಿದ್ದರು. ಸಹಕಾರ ಕ್ಷೇತ್ರ ಬಲಗೊಳಿಸಿದ ನೆಹರೂ ಅವರ ಸ್ಮರಣಾರ್ಥ ಅಖಿಲ ಭಾರತ ಸಹಕಾರ ಸಪ್ತಾಹ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರವು ಸಹಕಾರ ಸಂಘಗಳ ವಿಚಾರ ಪಠ್ಯಪುಸ್ತಕಗಳಿಗೆ ಸೇರ್ಪಡೆ ಮಾಡಿ ಯುವಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಕೆ.ಷಡಕ್ಷರಿ, ಪ್ರಕಾಶ್ ಕೋಳಿವಾಡ್ ಮತ್ತಿತರರು ಉಪಸ್ಥಿತರಿದ್ದರು.
ಪುತ್ತಳಿ ಅನಾವರಣರಾಜ್ಯ ಸಹಕಾರ ಮಹಾಮಂಡಳದ ಆವರಣದಲ್ಲಿ ಬಿ.ಎಸ್.ವಿಶ್ವನಾಥ್ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಇದೇ ವೇಳೆ ಯುವಪೀಳಿಗೆ ಬಿ.ಎಸ್.ವಿಶ್ವನಾಥ್ ಅವರ ಆದರ್ಶಗಳನ್ನು ಪಾಲಿಸಿ, ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
2013ರಲ್ಲಿ ಮುಖ್ಯಮಂತ್ರಿಯಾದ ನಂತರ ಪ್ರತಿ ಲೀಟರ್ ಹಾಲಿಗೆ 3 ರು. ಪ್ರೋತ್ಸಾಹ ಧನ ಘೋಷಿಸಿದ್ದೆ. ಬಳಿಕ ಪ್ರೋತ್ಸಾಹ ಧನವನ್ನು ಲೀಟರ್‌ಗೆ 5 ರು.ಗೆ ಹೆಚ್ಚಿಸಿದ್ದೇವೆ. ಪ್ರತೀ ದಿನ ಸರ್ಕಾರದಿಂದ 5 ಕೋಟಿ ರು. ಸಹಾಯಧನ ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ. 40 ಲಕ್ಷ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಸಹಾಯ ಧನ ಜಮೆ ಆಗುತ್ತಿದೆ. ಇದಕ್ಕೆಲ್ಲ ಹಾಲು ಮಹಾ ಮಂಡಳ ತಾಯಿಬೇರು ಇದ್ದಂತೆ ಎಂದು ಹೇಳಿದರು.ಯಾವುದೇ ಗ್ರಾಮ ಉದ್ಧಾರ ಆಗಬೇಕಾದರೆ ಆ ಗ್ರಾಮದಲ್ಲಿ ಒಂದು ಶಾಲೆ, ಒಂದು ಸಹಕಾರಿ ಸಂಘ, ಒಂದು ಆಸ್ಪತ್ರೆ ಇರಬೇಕು ಎನ್ನುವುದು ನೆಹರೂ ಅವರ ಸ್ಪಷ್ಟ ಕಲ್ಪನೆ. ಈ ಕಲ್ಪನೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಿ ಸಹಕಾರ ಚಳವಳಿಗೆ ನೆಹರೂ ಮತ್ತು ಮಹಾತ್ಮ ಗಾಂಧಿ ಅವರು ಶಕ್ತಿ ನೀಡಿದರು ಎಂದು ಸ್ಮರಿಸಿದರು.
ಇದೇ ವೇಳೆ ಸಹಕಾರಿ ಕ್ಷೇತ್ರದ ಸಾಧಕರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.