ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ದಸರಾ ವಿದ್ಯುತ್ ದೀಪಾಲಂಕಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸೆಸ್ಕ್ ವತಿಯಿಂದ ದಸರಾ ದೀಪಾಲಂಕಾರ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತಲೂ ಹೆಚ್ಚು ಆಕರ್ಷಣೀಯವಾಗಿ ಈ ಬಾರಿಯ ದೀಪಾಲಂಕಾರ ಕಂಗೊಳಿಸಲಿದೆ.ಮುಖ್ಯಮಂತ್ರಿಯವರು ಕೂಡ ಹೆಚ್ಚು ಆಕರ್ಷಕ ದೀಪಾಲಂಕಾರ ಮಾಡುವಂತೆ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಎಲ್ಲರೂ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುವ ಮೂಲಕ ದಸರೆಯನ್ನು ಆನಂದಿಸಬಹುದಾಗಿದ್ದು, ಇಂದಿನಿಂದ 21 ದಿನಗಳ ಕಾಲ ಸ್ಥಳೀಯರು ಹಾಗೂ ಪ್ರವಾಸಿಗರು ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದರು.
136 ಕಿಮೀ ದೀಪಾಲಂಕಾರ:
ದಸರಾ ಹಿನ್ನೆಲೆಯಲ್ಲಿ ಈ ಬಾರಿ ನಗರದ 136 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಇದರೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಎಲ್.ಇ.ಡಿ ಬಲ್ಬ್ ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳನ್ನು ಇರಿಸಲಾಗಿದೆ. ನಿಗದಿಯಂತೆ ಸೆ. 22 ರಿಂದ ಅ. 2 ರವರೆಗೆ ವಿದ್ಯುತ್ ದೀಪಾಲಂಕಾರ ನಡೆಯಲಿದ್ದು, ಇದರೊಂದಿಗೆ ಮುಖ್ಯಮಂತ್ರಿಗಳ ನಿರ್ದೇಶನದಂತೆ 10 ದಿನಗಳು ವಿಸ್ತರಣೆ ಮಾಡಿದ್ದು, ಒಟ್ಟು 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರಲಿದೆ. ಇದಕ್ಕಾಗಿ 300 ಕಿ.ಲೋ ವ್ಯಾಟ್ ಗಳ, 257520 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.ಕೊಲ್ಕತ್ತಾ ಲೈಟಿಂಗ್ ಮೆರಗು:
ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಬಾರಿ ಕೊಲ್ಕತ್ತಾ ಮಾದರಿ ಲೈಟಿಂಗ್ ಅಳವಡಿಸಲಾಗಿದೆ. ಇದರ ಮೂಲಕವಾಗಿ ನಗರದ ಹಲವು ಕಡೆಗಳಲ್ಲಿ ಬಣ್ಣಬಣ್ಣದ ದೀಪಗಳಿಂದ ಅಲಂಕರಿಸುವ ಮೂಲಕ ದಸರಾ ವಿದ್ಯುತ್ ದೀಪಾಲಂಕಾರದ ಮೆರಗು ಹೆಚ್ಚಿಸಲಾಗಿದೆ.ಕಂಗೊಳಿಸುತ್ತಿದೆ ಮೈಸೂರು:
ದಸರಾ ದೀಪಾಲಂಕಾರದ ಹಿನ್ನೆಲೆಯಲ್ಲಿ ಇಡೀ ಮೈಸೂರು ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪ್ರಮುಖವಾಗಿ ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆ.ಎಲ್.ಬಿ ರಸ್ತೆ, ಚಾಮರಾಜ ಜೋಡಿರಸ್ತೆ, ಹೊರ ವಲಯದಲ್ಲಿನ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ವೃತ್ತಗಳಿಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ ದೊಡ್ಡಕೆರೆ ಮೈದಾನ, ಕೆ.ಆರ್. ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್ ಹೌಸ್, ಎಲ್ಐಸಿ ವೃತ್ತ ಸೇರಿದಂತೆ ವಿವಿಧೆಡೆ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.ಅಗತ್ಯ ಸುರಕ್ಷತಾ ಕ್ರಮಗಳು:
ದಸರಾ ವಿದ್ಯುತ್ ದೀಪಾಲಂಕಾರದಲ್ಲಿ ಸೆಸ್ಕ್ ವತಿಯಿಂದ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಆ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮ ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಪ್ರಮುಖವಾಗಿ ದೀಪಾಲಂಕಾರ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಫೋಟೋ/ ವಿಡಿಯೋ ಶೂಟ್ ಮಾಡುವುದನ್ನು ತಪ್ಪಿಸುವುದು, ಮಳೆ ಸಂದರ್ಭದಲ್ಲಿ ವಿದ್ಯುತ್/ ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೆ ಎಚ್ಚರವಹಿಸುವುದು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಅಳವಡಿಸಿದ್ದು, ವಾಹನ ಸವಾರರು ಈ ಬಗ್ಗೆ ನಿಗಾವಹಿಸಿ ಸುರಕ್ಷಿತವಾಗಿ ಸಂಚರಿಸುವಂತೆ, ವಿದ್ಯುತ್ ಸಂಬಂಧಿತ ದೂರು/ ದೀಪಾಲಂಕಾರದಿಂದ ತೊಂದರೆ ಆದಲ್ಲಿ 24x7 ಸಹಾಯವಾಣಿ 1912 ಸಂಪರ್ಕಿಸುವಂತೆ ಕೋರಲಾಗಿದೆ.ಈ ವೇಳೆ ಸಚಿವ ಕೆ.ಜೆ. ಜಾರ್ಜ್ ಅವರ ಪತ್ನಿ ಸುಜಾ ಜಾರ್ಜ್, ಶಾಸಕ ತನ್ವೀರ್ ಸೇಠ್, ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಸೆಸ್ಕ್ ಎಂಡಿ ಕೆ.ಎಂ. ಮುನಿಗೋಪಾಲ್ ರಾಜು ಸೇರಿದಂತೆ ಸೆಸ್ಕ್ ಅಧಿಕಾರಿಗಳು ಮತ್ತು ಉಪ ಸಮಿತಿ ಸದಸ್ಯರು ಇದ್ದರು.