ಕನ್ನಡಪ್ರಭ ವಾರ್ತೆ ಮಂಡ್ಯ
ಕಿಸಾನ್ ಮೋರ್ಚಾ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರು ಮತ್ತು ಕೃಷಿ ವಲಯವನ್ನು ಸರ್ಕಾರಗಳು ದೀರ್ಘಕಾಲದವರೆಗೆ ನಿರ್ಲಕ್ಷಿಸಿವೆ. ಕೃಷಿ ವಲಯವು ಭಾರತದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಕೋವಿಡ್-೧೯ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಕಾರ್ಖಾನೆಗಳು ಮುಚ್ಚಲ್ಪಟ್ಟಾಗಲೂ ಕೃಷಿ ವಲಯವು ಶೇ.೩.೬ ದರದಲ್ಲಿ ಬೆಳೆಯುತ್ತಿತ್ತು. ಕೃಷಿ ವಲಯ ಮತ್ತು ರೈತರ ಭವಿಷ್ಯವನ್ನು ಸರ್ಕಾರಗಳು ಸುಧಾರಿಸಬೇಕು ಎಂದು ಆಗ್ರಹಿಸಿದರು.
೨೦೧೧ರಲ್ಲಿ ಗ್ರಾಹಕ ವ್ಯವಹಾರಗಳ ಕಾರ್ಯಕಾರಿ ಗುಂಪಿನ ಅಧ್ಯಕ್ಷರಾಗಿದ್ದ ಪ್ರಸ್ತುತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಆಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು, ಬೆಳೆ ಖರೀದಿಗೆ ಸಂಬಂಧಿಸಿದ ರೈತ ಮತ್ತು ಖರೀದಿದಾರರ ನಡುವಿನ ವಹಿವಾಟು ಸರ್ಕಾರ ಘೋಷಿಸಿದ ಎಂಎಸ್‌ಪಿಗಿಂತ ಕಡಿಮೆ ಇರಬಾರದು ಎಂದು ಶಾಸನಬದ್ದ ನಿಬಂಧನೆಗಳ ಮೂಲಕ ಖಚಿತಪಡಿಸಿಕೊಳ್ಳಲು ಶಿಫಾರಸು ಮಾಡಿದ್ದರು. ಅದನ್ನು ಈಗ ಮರೆತಿದ್ದೀರಾ ಎಂದು ಪ್ರಶ್ನಿಸಿದರು.ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಮತ್ತು ಕೃಷಿ ಕ್ಷೇತ್ರದ ಸ್ಥಿತಿಯನ್ನು ಸುಧಾರಿಸಲು ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುತ್ತೇವೆಂದು ಹೇಳಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಾತು ತಪ್ಪಿದೆ. ೨೦೧೮ ರಲ್ಲಿ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಸಾಮಾಜಿಕ ನಾಯಕ ಅಣ್ಣಾ ಹಜಾರೆ ಅವರು ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಲು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಆಗ ಆರು ತಿಂಗಳಲ್ಲಿ ಜಾರಿಗೆ ತರುತ್ತೇವೆಂದು ಹೇಳಿ ಇನ್ನೂ ಜಾರಿಗೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ನಾಯಕರಾದ ಪಂಜಾಬ್‌ನ ಜಗಜಿತ್ ಸಿಂಗ್ ದಲ್ಲೆವಾಲ್, ಹರಿಯಾಣ ಅಭಿಮಾನ್ ಕೊಹಾರ್, ಹರ್ಕಲೀಂದರ್ ಸಿಂಗ್ ಧಿಲ್ಲೋನ್, ಮುಖಂಡರಾದ ರಾಮಲಿಂಗೇಗೌಡ, ಬೂದನೂರು ಪುಟ್ಟಸ್ವಾಮಿ, ಹೆಮ್ಮಿಗೆ ಚಂದ್ರಶೇಖರ್, ಕೋಣನಹಳ್ಳಿ ಜವರಪ್ಫ, ಶಿವಳ್ಳಿ ಚಂದ್ರು ಇತರರು ಭಾಗವಹಿಸಿದ್ದರು.