ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಡಿಡಿಪಿಯು
ವಿದ್ಯಾರ್ಥಿ ಜೀವನ ಬದುಕಿನ ಅತ್ಯಂತ ಮಹತ್ವದ ಘಟ್ಟ. ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ನಿರ್ಧರಿಸುವ ಪ್ರಮುಖ ಹಂತ. ಅನ್ಯ ವಿಷಯಗಳಿಗೆ ಗಮನಕೊಡದೇ ಏಕಾಗ್ರತೆಯಿಂದ ನಿರಂತರ ಅಧ್ಯಯನದಲ್ಲಿ ತೊಡಗಿದರೆ ಯಶಸ್ಸು ಶತಸಿದ್ಧ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಉಮೇಶಪ್ಪ ಎಚ್. ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ೨೦೨೩-೨೪ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನಿರ್ದಿಷ್ಟ ಗುರಿಯೊಂದಿಗೆ ಪರಿಶ್ರಮದ ಬೆವರು ಹರಿಸಿದರೆ ಸುಂದರ ಭವಿಷ್ಯ ಕಟ್ಟಿಕೊಳ್ಳಬಹುದು. ಆದ್ದರಿಂದ ವಿದ್ಯಾರ್ಥಿನಿಯರು ಸಿಗುವ ಸದಾವಕಾಶಗಳನ್ನು ಸಕರಾತ್ಮಕವಾಗಿ ಬಳಸಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಇಂದು ಜ್ಞಾನ ಜಗತ್ತನ್ನೇ ಆಳುತ್ತಿದೆ. ಜ್ಞಾನ ಪಡೆದವರು ದೊಡ್ಡ ಹುದ್ದೆ ಮತ್ತು ಅವಕಾಶಗಳನ್ನು ಪಡೆಯಲು ಸಾಧ್ಯವಿದೆ. ಜ್ಞಾನ ಮತ್ತು ಕೌಶಲ್ಯ ಹೊಂದಿದವರಿಗೆ ಜಗತ್ತಿನಲ್ಲಿ ಅವಕಾಶಗಳ ಬಾಗಿಲು ತೆರೆಯುತ್ತಿವೆ. ಆದ್ದರಿಂದ ವಿದ್ಯಾರ್ಥಿನಿಯರು ಜ್ಞಾನದ ಬಲದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮತ್ತೋರ್ವ ಅತಿಥಿ ಉದ್ಯಮಿ, ಸಮಾಜಸೇವಕ ಪ್ರಕಾಶ ಶೆಟ್ಟಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಾಧಕರನ್ನ ಗೌರವಿಸಲಾಯಿತು. ಎಲ್ಲಾ ಅತಿಥಿಗಳನ್ನ ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಕಲ್ಪನಾ ಎಂ.ಟಿ. ಪ್ರಾರ್ಥಿಸಿದರು. ಚೈತ್ರ ಹಳೇಮನಿ ಸ್ವಾಗತಿಸಿದರು. ಪ್ರಿಯಾ ಮಾಳದ್ಕರ್ ಮತ್ತು ದೀಕ್ಷಿತಾ ಕಳ್ಳಿಮನಿ ನಿರೂಪಿಸಿದರು. ನಿರ್ಮಲಾ ಎಲಿಗಾರ ವಂದಿಸಿದರು.