ಕಷ್ಟವನ್ನು ಗಟ್ಟಿ ಮನಸ್ಸಿನಿಂದ ಎದುರಿಸಿ : ರಾಣಿ ಮಾಚಯ್ಯ

KannadaprabhaNewsNetwork | Published : Feb 8, 2024 1:35 AM

ಸಾರಾಂಶ

ಫೆ.8 ಮತ್ತು 9 ರಂದು ಶಿಬಿರ ಹಾಗೂ ಗಾಲಿ ಕುರ್ಚಿ ಜಾಥಾ ನಡೆಯಲಿದೆ. ಕಾರ್ಯಕ್ರಮದಲ್ಲಿ ಅರ್ಹ 5 ಫಲಾನುಭವಿಗಳಿಗೆ ಗಾಲಿಕುರ್ಚಿ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ ಜೀವನದಲ್ಲಿ ಯಾವುದೇ ಕಷ್ಟ ಎದುರಾದರೂ ಅದನ್ನು ಗಟ್ಟಿ ಮನಸ್ಸಿನಿಂದ ಎದುರಿಸಬೇಕು ಎಂದು ವಿಕಾಸ ಜನಸೇವಾ ಟ್ರಸ್ಟ್ ಗೌರವಾಧ್ಯಕ್ಷೆ ರಾಣಿ ಮಾಚಯ್ಯ ಸಲಹೆ ನೀಡಿದರು. ಸೇವಾ ಭಾರತಿ-ಸೇವಾ ಧಾಮ ಆಶ್ರಯದಲ್ಲಿ ವಿಕಾಸ್ ಜನಸೇವಾ ಟ್ರಸ್ಟ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ ಸಹಯೋಗದಲ್ಲಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿರುವ 3 ದಿನಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೇವಾಧಾಮದ ಸಂಸ್ಥಾಪಕ ವಿನಾಯಕ್ ರಾವ್ ಮಾತನಾಡಿ, ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.ಅಪಘಾತ, ಎತ್ತರದಿಂದ ಬೀಳುವುದು ಹಾಗೂ ಸೋಂಕಿನಿಂದಲೂ ಅಂಗವೈಕಲ್ಯತೆ ಉಂಟಾಗುತ್ತದೆ. ಬೆನ್ನುಹುರಿ ಅಪಘಾತದಿಂದ ವ್ಯಕ್ತಿಯು ಸ್ಪರ್ಶ ಜ್ಞಾನ ಮತ್ತು ನಿಯಂತ್ರಣ ಕಳೆದುಕೊಳ್ಳುತ್ತಾನೆ. ಗಾಲಿ ಕುರ್ಚಿಯಲ್ಲೇ ಕುಳಿತುಕೊಳ್ಳಬೇಕಿರುವುದರಿಂದ ಗಾಯ, ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕಾಲುಗಳ ಸೆಳೆತ, ಬಿಗಿತನ ಮುಂತಾದ ಸಮಸ್ಯೆಗಳಿಗೆ ತುತ್ತಾಗಿ ಸಂಪೂರ್ಣ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಶಿಬಿರದಲ್ಲಿ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಮೂಡಿಸಿ, ಎಲ್ಲರಂತೆ ಬದುಕಲು ಧೈರ್ಯ ತುಂಬುವ ಮೂಲಕ ವ್ಯಕ್ತಿಯನ್ನು ಶಕ್ತಿಯಾಗಿಸುವ ಕೆಲಸಕ್ಕೆ ಸಂಸ್ಥೆ ಮುಂದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಅರ್ಹ 5 ಫಲಾನುಭವಿಗಳಿಗೆ ಗಾಲಿಕುರ್ಚಿ ವಿತರಿಸಲಾಯಿತು. ವಿಕಾಸ್ ಜನಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಕೆ ಮಂಜುನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ, ಅಶ್ವಿನಿ ಆಸ್ಪತ್ರೆಯ ಕಾರ್ಯದರ್ಶಿ ರಾಜಪ್ಪ, ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ ಟ್ರಸ್ಟಿ ಮೋಹನ್‌ದಾಸ್ ಸೇರಿದಂತೆ ಮತ್ತಿತರರು ಇದ್ದರು. ಫೆ.8 ಮತ್ತು 9 ರಂದು ಶಿಬಿರ ಹಾಗೂ ಗಾಲಿ ಕುರ್ಚಿ ಜಾಥಾ ನಡೆಯಲಿದೆ.

Share this article