ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಅರಣ್ಯ ಸಂರಕ್ಷಣೆಯ ಜೊತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಿ ಎಂದು ಶಾಸಕ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಕೇಂದ್ರದ ಆವರಣದಲ್ಲಿ ೭೦ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಿನಿ ಮ್ಯಾರಥಾನ್, ಅಥ್ಲೆಟಿಕ್, ಕಬಡ್ಡಿ, ವಾಲಿಬಾಲ್‌ನಲ್ಲಿ ವಿಜೇತರಿಗೆ ಬಹುಮಾನ ಹಾಗೂ ಟ್ರೋಫಿ ವಿತರಿಸಿ ಮಾತನಾಡಿ, ಸಚಿವರು ಬಂದಾಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೇಕಾದ ಕೆಲಸಗಳಿಗೆ ಬೇಡಿಕೆ ಇಡೋಣ ಎಂದರು.ಅರಣ್ಯ ಸಿಬ್ಬಂದಿ ಅರಣ್ಯ ಸಂರಕ್ಷಣೆಗೆ ಒತ್ತು ನೀಡುತ್ತಿದ್ದಾರೆ. ವನ್ಯಜೀವಿಗಳ ರಕ್ಷಣೆಗೂ ಶ್ರಮಿಸುತ್ತಿದ್ದಾರೆ. ಸಿಬ್ಬಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ದೇಹದ ಶಕ್ತಿ ವೃದ್ಧಿಯಾಗಲಿದೆ ಎಂದರು. ಬಂಡೀಪುರ ಸಂರಕ್ಷಣೆಗೆ ಒತ್ತು ನೀಡುವ ಸಲುವಾಗಿ ಅತೀ ಶೀಘ್ರದಲ್ಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಬಂಡೀಪುರಕ್ಕೆ ಭೇಟಿಗೆ ಮನವಿ ಮಾಡಿದ್ದೇನೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿಗೆ ಅರಣ್ಯ ರಕ್ಷಣೆಯ ಜವಬ್ದಾರಿ ನಿಮ್ಮ ಮೇಲಿದೆ ನಾನು ಕೂಡ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಒತ್ತು ನೀಡುತ್ತೇನೆ ಎಂದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ನಿರ್ದೇಶಕ ಎಸ್. ಪ್ರಭಾಕರನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಕ್ರೀಡಾಂಗಣದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ಆರ್‌ಎಫ್‌ಒ ಕೆ.ಪಿ.ಸತೀಶ್ ಕುಮಾರ್ ಸಾರಥ್ಯದಲ್ಲಿ ಎರಡು ದಿನಗಳ ಕಾಲ ಕ್ರೀಡಾಕೂಟ ಆಯೋಜಿಸಿದ್ದರು. ಕ್ರೀಡಾಕೂಟ ಹಾಗೂ ವನ್ಯಜೀವಿ ಸಪ್ತಾಹದ ಅಂಗವಾಗಿ ಕ್ರೀಡಾಕೂಟ ಹಾಗೂ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ ನಡೆಯಿತು. ಸಮಾರಂಭದಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಬಂಡೀಪುರ ಎಸಿಎಫ್ ಎನ್.ಪಿ.ನವೀನ್ ಕುಮಾರ್, ಗುಂಡ್ಲುಪೇಟೆ ಎಸಿಎಫ್ ಸುರೇಶ್, ಹೆಡಿಯಾಲ ಎಸಿಎಫ್ ಸತೀಶ್, ಗೋಪಾಲಸ್ವಾಮಿ ಬೆಟ್ಟ ಆರ್‌ಎಫ್‌ಒ ಬಿ.ಎಂ.ಮಲ್ಲೇಶ್, ಬಂಡೀಪುರ ಆರ್‌ಎಫ್‌ಒ ಮಹದೇವು, ಮದ್ದೂರು ಆರ್‌ಎಫ್‌ಒ ಪುನೀತ್ ಕುಮಾರ್, ಓಂಕಾರ ಆರ್‌ಎಫ್‌ಒ ಕೆ.ಪಿ. ಸತೀಶ್ ಕುಮಾರ್, ಮೂಲೆಹೊಳೆ ಆರ್‌ಎಫ್‌ಒ ನಿಸಾರ್ ಅಹಮದ್, ಸೇರಿದಂತೆ ಆರ್‌ಎಫ್‌ಒಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಕುಟುಂಬಸ್ಥರು ಹಾಜರಿದ್ದರು.