ಕನ್ನಡಪ್ರಭ ವಾರ್ತೆ ದಾವಣಗೆರೆ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನವನ್ನೇ ಎಂಜಿನಿಯರ್ಸ್ ಡೇ ಆಗಿ ಆಚರಿಸುವುದಕ್ಕೆ ಅವರ ತಾಂತ್ರಿಕ ಜ್ಞಾನ ಮಾತ್ರವಲ್ಲದೇ, ಜವಾಬ್ದಾರಿ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸಮಾಜದ ಬಗ್ಗೆ ಹೊಂದಿದ್ದ ಬದ್ಧತೆಯೇ ಪ್ರಮುಖ ಕಾರಣವಾಗಿದೆ ಎಂದು ಎನ್‌ಟಿಸಿಎಸ್ಟಿ/ ಕೆಪಿಸಿಎಲ್ ಮಾಜಿ ನಿರ್ದೇಶಕ, ಚಾರ್ಟರ್ಡ್ ಎಂಜಿನಿಯರ್ ಹಾಗೂ ವಕೀಲ ಡಾ.ನಾಡಗೌಡ ತಿಳಿಸಿದರು.
ಪ್ರಾಂಶುಪಾಲ ಡಾ. ಡಿ.ಬಿ.ಗಣೇಶ್ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಗಳು ಪ್ರತಿಯೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿಗೂ ಪ್ರೇರಣೆಯಾಗಬೇಕು. ಅವರ ಸರಳತೆ, ಶಿಸ್ತು, ಸಮಯಪಾಲನೆ ಹಾಗೂ ನವೀನವಾಗಿ ಯೋಚಿಸುವ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಅವರ ಜೀವನ ಮತ್ತು ಸಾಧನೆಗಳ ಕುರಿತು ತಿಳಿದುಕೊಳ್ಳಬೇಕು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನೇ ಇಡಲಾಗಿದ್ದು, ಆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿ ಅವರ ಕೊಡುಗೆಗಳನ್ನು ತಿಳಿದುಕೊಳ್ಳುವುದು ನಮ್ಮ ಕರ್ತವ್ಯ ಎಂದರು.ಕೃಷ್ಣರಾಜ ಸಾಗರ ಅಣೆಕಟ್ಟು ಸೇರಿದಂತೆ ಹಲವು ಪ್ರಮುಖ ಯೋಜನೆಗಳಲ್ಲಿ ಅವರ ಎಂಜಿನಿಯರಿಂಗ್ ದೃಷ್ಟಿಕೋನ ಮತ್ತು ದೂರದೃಷ್ಟಿ ಕಾಣಬಹುದು. ಆ ಕಾಲದಲ್ಲಿ ಇಂದಿನಂತೆ ಇಂಟರ್‌ನೆಟ್, ಆಧುನಿಕ ಕಂಪ್ಯೂಟರ್ ತಂತ್ರಜ್ಞಾನ ಅಥವಾ ಕೃತಕ ಬುದ್ಧಿಮತ್ತೆಯಂತಹ ಸೌಲಭ್ಯಗಳು ಇರಲಿಲ್ಲ. ಆದರೂ ತಮ್ಮ ಜ್ಞಾನ, ಅನುಭವ ಮತ್ತು ಹೊಸತನದ ಚಿಂತನೆಯ ಮೂಲಕ ಅವರು ದೊಡ್ಡಮಟ್ಟದ ಯೋಜನೆಗಳನ್ನು ಯಶಸ್ವಿಯಾಗಿ ರೂಪಿಸಿದರು. ವಿಶ್ವೇಶ್ವರಯ್ಯ ಅವರು ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ತಮ್ಮ ತಾಂತ್ರಿಕ ಜ್ಞಾನ ಮತ್ತು ಸೇವೆಯಿಂದ ಗುರುತಿಸಿಕೊಂಡಿದ್ದರು. ಅವರ ಜೀವನವು ಒಬ್ಬ ವ್ಯಕ್ತಿಯ ದೃಢ ಸಂಕಲ್ಪದಿಂದ ದೊಡ್ಡ ಬದಲಾವಣೆ ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಆದ್ದರಿಂದ ಇಂದಿನ ಯುವ ಎಂಜಿನಿಯರ್‌ಗಳು ಅವರ ಜೀವನದಿಂದ ಪ್ರೇರಣೆ ಪಡೆದು ಹೊಸ ಆವಿಷ್ಕಾರಗಳತ್ತ ಹೆಜ್ಜೆ ಇಡಬೇಕು ಎಂದು ತಿಳಿಸಿದರು.