ಇಂಗ್ಲಿಷ್, ಕಂಪ್ಯೂಟರ್‌ ಜ್ಞಾನ ಅನಿವಾರ್ಯ: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork |  
Published : Jan 13, 2025, 12:45 AM IST
ಯಲ್ಲಾಪುರ ಪಟ್ಟಣದ ಡಿ.ಟಿ. ರೋಡಿನಲ್ಲಿ ಸ್ಥಾಪನೆಗೊಂಡ ಕೇಂದ್ರ ಸರ್ಕಾರದ ಅನುಮೋದನೆ ಪಡೆದ ಇನ್‌ಸ್ಟಿಟ್ಯೂಟ್‌ ಫಾರ್‌ ಅಡ್ವಾನ್ಸಡ್ ಕಂಪ್ಯೂಟರ್ ಟೆಕ್ನಾಲಜಿ ಘಟಕವನ್ನು ಶನಿವಾರ ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಹಣ, ವ್ಯಕ್ತಿ ಅಥವಾ ಯಾವುದೇ ವಸ್ತುವನ್ನು ಬೇಕಾದರೂ ಕಳವು ಮಾಡಬಹುದು. ಆದರೆ ಜ್ಞಾನವನ್ನು ಎಂದೂ ಕಳವು ಮಾಡಲಾಗದು.

ಯಲ್ಲಾಪುರ: ಜಗತ್ತಿನಲ್ಲಿ ನಾವು ಬದುಕಲು ಇಂಗ್ಲಿಷ್‌ ಮತ್ತು ಕಂಪ್ಯೂಟರ್ ಜ್ಞಾನ ಅನಿವಾರ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಡಿ.ಟಿ. ರೋಡಿನಲ್ಲಿ ಸ್ಥಾಪನೆಗೊಂಡ ಕೇಂದ್ರ ಸರ್ಕಾರದ ಅನುಮೋದನೆ ಪಡೆದ ಇನ್‌ಸ್ಟಿಟ್ಯೂಟ್‌ ಫಾರ್‌ ಅಡ್ವಾನ್ಸಡ್ ಕಂಪ್ಯೂಟರ್ ಟೆಕ್ನಾಲಜಿ ಘಟಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಯಲ್ಲಾಪುರದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಇನ್‌ಸ್ಟಿಟ್ಯೂಟ್‌ ಫಾರ್ ಅಡ್ವಾನ್ಸಡ್ ಕಂಪ್ಯೂಟರ್ ಟೆಕ್ನಾಲಜಿ ಸ್ಥಾಪಿಸುವ ಮೂಲಕ ತಾಂತ್ರಿಕ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.ಹಣ, ವ್ಯಕ್ತಿ ಅಥವಾ ಯಾವುದೇ ವಸ್ತುವನ್ನು ಬೇಕಾದರೂ ಕಳವು ಮಾಡಬಹುದು. ಆದರೆ ಜ್ಞಾನವನ್ನು ಎಂದೂ ಕಳವು ಮಾಡಲಾಗದು. ಬಡವರಿಗೆ ಕಂಪ್ಯೂಟರ್ ಜ್ಞಾನ ತೀರಾ ಅಗತ್ಯವಾಗಿದೆ. ಒಬ್ಬ ಎಸ್‌ಎಸ್‌ಎಲ್‌ಸಿ ಓದಿದ ವ್ಯಕ್ತಿ ಪರಿಪೂರ್ಣ ಕಂಪ್ಯೂಟರ್ ಜ್ಞಾನ ಗಳಿಸಿಕೊಂಡರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ₹೫೦ ಸಾವಿರ ಸಂಬಳ ಪಡೆಯಬಹುದು ಎಂದರು.

ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ ಮಾತನಾಡಿದರು. ಪದವಿ ಪೂರ್ವ ಕಾಲೇಜುಗಳ ನಿವೃತ್ತ ಉಪನಿರ್ದೇಶಕ ಕೆ.ಟಿ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ದನಗರ ಗೌಳಿ ಸಮಿತಿ ಅಧ್ಯಕ್ಷ ದೇವು ಪಾಟೀಲ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಗಣಪತಿ ಮುದ್ದೇಪಾಲ, ಉನ್ನತಿ ಸಹಕಾರಿ ಸಂಘದ ಅಧ್ಯಕ್ಷ ಮಾಕು ಕೊಕ್ರೆ, ಸಂಸ್ಥೆಯ ಮಾಲಕ ಅಪ್ಪು ವರಕ್ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿ ವಿನುತಾ ಹೆಗಡೆ ಸ್ವಾಗತಿಸಿದರು. ಪತ್ರಕರ್ತ ಕೇಬಲ್ ನಾಗೇಶ ನಿರ್ವಹಿಸಿ, ವಂದಿಸಿದರು. ರಾಜ್ಯದ ೭೬ನೇ ಕೇಂದ್ರ ಇದಾಗಿದೆ.೧೪ರಂದು ಗಣೇಶಗುಡಿಯಲ್ಲಿ ಧಾರ್ಮಿಕ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ದೇಹಳ್ಳಿ ಗ್ರಾಪಂ ವ್ಯಾಪ್ತಿಯ ಕಟ್ಟಿಗೆಯ ಶ್ರೀ ಕ್ಷೇತ್ರ ಗಣೇಶಗುಡಿಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಜ. ೧೪ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಬೆಳಗ್ಗೆ ೯ ಗಂಟೆಗೆ ಅರ್ಚಕರ ಮನೆಯ ನೂತನ ಕಟ್ಟಡದ ಪಂಚಗವ್ಯ ಹೋಮ, ವಾಸ್ತು ಹೋಮ, ಮಧ್ಯಾಹ್ನ ೧೨ ಗಂಟೆಗೆ ಗೋಪಾಲಕೃಷ್ಣ ದೇವರ ದೇವಕಾರ್ಯ, ಮಹಾನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ಪ್ರಸಾದ ಭೋಜನ, ಮಧ್ಯಾಹ್ನ ೨ರಿಂದ ರಾಷ್ಟ್ರೀಯ ಸೇವಾ ಸಹಕಾರಿ ಸಂಘದ ಕಟ್ಟಿಗೆ ಶಾಖಾ ಸಂಕ್ರಾಂತಿ ಉತ್ಸವದಲ್ಲಿ ಶಿರಸಿಯ ನಾಗೇಶ ಅವರಿಂದ ಬೌದ್ಧಿಕ, ಮಧ್ಯಾಹ್ನ ೨.೩೦ರಿಂದ ೩.೩೦ರ ವರೆಗೆ ಆರೋಗ್ಯ ಭಾರತಿಯ ಶಿರಸಿ ವಿಭಾಗದ ಸಂಯೋಜಕ ಡಾ. ಮಂಜುನಾಥ ಅವರಿಂದ "ಆಹಾರ ಆರೋಗ್ಯ " ಎಂಬ ಕುರಿತು ಚಿಂತನೆ, ಮಧ್ಯಾಹ್ನ ೩.೩೦ರಿಂದ ಮಾಗೋಡಿನ ಶ್ರೀ ವೀರ ಮಾರುತಿ ಹವ್ಯಾಸಿ ತಾಳಮದ್ದಲೆ ಕೂಟದಿಂದ "ರುಕ್ಮಿಣಿ ಸ್ವಯಂವರ " ತಾಳಮದ್ದಲೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌