15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಆಂಗ್ಲ ಭಾಷೆ ಸಂಪೂರ್ಣ ಕಡೆಗಣನೆ!

KannadaprabhaNewsNetwork |  
Published : Aug 30, 2026, 01:45 AM IST
2018 ರಲ್ಲಿ ಆಂಗ್ಲ ಭಾಷೆಗೆ 3ನೇ ಪ್ರಿಫರೆನ್ಸ್ ಇತ್ತು, ಈಗ 5 ನೇ ಪ್ರಿಫರೆನ್ಸ್ ನೀಡಲಾಗಿದೆ.  | Kannada Prabha

ಸಾರಾಂಶ

ಮಂಜೂರಾಗಿರುವ 643 ಹುದ್ದೆಗಳಲ್ಲಿ ಬೆಂಗಳೂರು ನಗರವೊಂದಕ್ಕೇ 200ಕ್ಕೂ ಹೆಚ್ಚು ಹುದ್ದೆಗಳನ್ನು ಮೀಸಲಿಡಲಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ರಾಜ್ಯ ಸರ್ಕಾರಿ ಶಾಲೆಗಳನ್ನು ಉಳಿಸಲು ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆ) ಸ್ಥಾಪನೆ, ದ್ವಿಭಾಷಾ ನೀತಿ ಎಂದೆಲ್ಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಸರ್ಕಾರ, ವಾಸ್ತವದಲ್ಲಿ ಮಾತ್ರ ಆಂಗ್ಲ ಭಾಷಾ ಬೋಧನೆಯನ್ನೇ ನೇಪಥ್ಯಕ್ಕೆ ತಳ್ಳಿದೆ. ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ 6ರಿಂದ 8ನೇ ತರಗತಿ (ಜಿಪಿಟಿ) ಪ್ರಮುಖ ನೇಮಕಾತಿಯಲ್ಲೇ ಆಂಗ್ಲ ಭಾಷೆಗೆ ತೀವ್ರ ಅನ್ಯಾಯವೆಸಗಲಾಗಿದೆ. ರಾಜ್ಯಾದ್ಯಂತ ಸಾವಿರಾರು ಆಂಗ್ಲ ಶಿಕ್ಷಕ ಆಕಾಂಕ್ಷಿಗಳು ಕಂಗಾಲಾಗಿದ್ದಾರೆ.

ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಹೈಸ್ಕೂಲ್ ಶಿಕ್ಷಕರು (ಎಚ್‌ಎಸ್‌ಟಿ 8- 10), ಪ್ರೈಮರಿ ಶಿಕ್ಷಕರು (ಪಿಎಸ್‌ಟಿ 1- 5) ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ 6- 8) ಮೂರು ವಿಭಾಗಗಳಿವೆ. ಇದರಲ್ಲಿ ಜಿಪಿಟಿ ವಿಭಾಗದಲ್ಲೇ ಅತ್ಯಧಿಕ 9000 ಹುದ್ದೆಗಳಿವೆ. ಇದು ಬಹುತೇಕ ಶಿಕ್ಷಕ ಆಕಾಂಕ್ಷಿಗಳ ಪಾಲಿನ ಜೀವನಾಡಿಯಾಗಿದೆ. ಆದರೆ, ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ ಎರಡೂ ವಿಭಾಗ ಸೇರಿಸಿ ಈ 9000 ಹುದ್ದೆಗಳ ಪೈಕಿ ಇಂಗ್ಲಿಷ್ ಭಾಷೆಗೆ ನೀಡಿರುವುದು ಕೇವಲ 643 ಹುದ್ದೆಗಳನ್ನು ಮಾತ್ರ.

ರಾಜಧಾನಿಗೆ ಸೀಮಿತ: ಮಂಜೂರಾಗಿರುವ 643 ಹುದ್ದೆಗಳಲ್ಲಿ ಬೆಂಗಳೂರು ನಗರವೊಂದಕ್ಕೇ 200ಕ್ಕೂ ಹೆಚ್ಚು ಹುದ್ದೆಗಳನ್ನು ಮೀಸಲಿಡಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಹುದ್ದೆಗಳನ್ನು ನೀಡಲಾಗಿದ್ದರೆ, ಹಲವು ಜಿಲ್ಲೆಗಳಲ್ಲಿ ಆಂಗ್ಲ ಭಾಷೆಗೆ ಕೇವಲ ಶೂನ್ಯ ಹುದ್ದೆ ತೋರಿಸಲಾಗಿದೆ. ಪ್ರತಿ ಜಿಲ್ಲೆಗೆ ಕನಿಷ್ಠ 100 ಹುದ್ದೆಗಳ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಹಾಗೂ ಹಿಂದುಳಿದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಸರ್ಕಾರದ ಈ ನಡೆ ತೀವ್ರ ಆಘಾತ ತಂದಿದೆ.

ಪ್ರಿಫರೆನ್ಸ್ ಬದಲಿಸಿ ಅನ್ಯಾಯ: ನೇಮಕಾತಿ ನಿಯಮಾವಳಿಗಳಲ್ಲಿ ಹುದ್ದೆಗಳ ಹಂಚಿಕೆಗೆ ನಿಗದಿಪಡಿಸುವ ಪ್ರಿಫರೆನ್ಸ್ (ಆದ್ಯತೆ) ಸಂಖ್ಯೆಯಲ್ಲೇ ಇಲಾಖೆ ದೊಡ್ಡ ಕೈಚಳಕ ತೋರಿಸಿದೆ. 2018ರ ನಿಯಮಾವಳಿಯಂತೆ ಆಂಗ್ಲಭಾಷೆಗೆ 3ನೇ ಪ್ರಿಫರೆನ್ಸ್ ಇತ್ತು. ಅಂದರೆ 90 ಮಕ್ಕಳಿರುವ ಶಾಲೆಗೆ ಒಂದು ಇಂಗ್ಲಿಷ್ ಶಿಕ್ಷಕರ ಹುದ್ದೆ ಸೃಷ್ಟಿಯಾಗುತ್ತಿತ್ತು. ಆದರೆ, ಹೊಸ ನಿಯಮಗಳಲ್ಲಿ ಏಕಾಏಕಿ ಇಂಗ್ಲಿಷ್ ಭಾಷೆಯನ್ನು 3ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ತಳ್ಳಲಾಗಿದೆ. ಇದರ ಪರಿಣಾಮವಾಗಿ ಶಾಲೆಗಳಲ್ಲಿ 150 ವಿದ್ಯಾರ್ಥಿಗಳಿದ್ದರೆ ಮಾತ್ರ ಒಂದು ಇಂಗ್ಲಿಷ್ ಹುದ್ದೆ ಸಿಗುವಂತಾಗಿದೆ. ಈ ತಂತ್ರದಿಂದಾಗಿ ಶಾಲೆಗಳಲ್ಲಿ ಸೃಷ್ಟಿಯಾಗಬೇಕಿದ್ದ ಸಾವಿರಾರು ಆಂಗ್ಲ ಭಾಷಾ ಹುದ್ದೆಗಳು ಕಡಿತಗೊಂಡಿವೆ ಎಂಬುದು ಆಕಾಂಕ್ಷಿಗಳ ಆರೋಪ.

ಇಂಗ್ಲಿಷ್ ಅನಿವಾರ್ಯ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಅನಿವಾರ್ಯವಾಗಿದೆ. ಗುಣಮಟ್ಟದ ಆಂಗ್ಲ ಬೋಧನೆ ಸಿಗುತ್ತಿಲ್ಲ ಎಂಬ ಕಾರಣಕ್ಕೇ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಕರ ನೇಮಕಕ್ಕೆ ತಣ್ಣೀರೆರಚಿದರೆ ಸರ್ಕಾರಿ ಶಾಲೆಗಳು ಬದುಕುಳಿಯುವುದಾದರೂ ಹೇಗೆ? 2022ರಲ್ಲೂ ಇಂತದೇ ಅನ್ಯಾಯ ಮಾಡಲಾಗಿತ್ತು. ಪ್ರತಿ ಜಿಲ್ಲೆಗೆ ಕನಿಷ್ಠ 100 ಇಂಗ್ಲಿಷ್ ಹುದ್ದೆ ನೀಡುವಂತೆ ತಕ್ಷಣವೇ ಅಧಿಸೂಚನೆ ತಿದ್ದುಪಡಿ ಮಾಡಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.ಭವಿಷ್ಯ ಅತಂತ್ರ: ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ, ಕೆಪಿಎಸ್ ಶಾಲೆ ಎಂದು ಹೇಳುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ನೇಮಕಾತಿ ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ, ನಾನು ಈ ಹುದ್ದೆಯ ಜವಾಬ್ದಾರಿಯಲ್ಲಿ ಇಲ್ಲದ ವೇಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ ಈ ನಿರ್ಧಾರವಾಗಿದೆ, ಅವರನ್ನೇ ಕೇಳಿ ಎಂದು ಜಾರಿಕೊಂಡಿದ್ದಾರೆ. ಸರ್ಕಾರ ಮತ್ತು ಸಚಿವರ ಈ ಧೋರಣೆಯಿಂದ ಸಾವಿರಾರು ಅರ್ಹ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ಇಂಗ್ಲಿಷ್ ಶಿಕ್ಷಕ ಅರ್ಹತೆ ಇರುವ ವ್ಯಕ್ತಿ ಭೀಮನಗೌಡ ಸಂಕ್ಲೀಪರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಅನುಮತಿ