ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದರ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ
ಕೊಪ್ಪಳ: ಸಂಗೀತಕ್ಕೆ ಅಪಾರ ಶಕ್ತಿಯಿದ್ದು, ಅದನ್ನು ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಹಾಗೂ ಉಲ್ಲಾಸ ದೊರೆಯುತ್ತದೆ ಎಂದು ಹಿರಿಯ ವೈದ್ಯ ಡಾ.ಕೆ.ಜಿ. ಕುಲಕರ್ಣಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಸಂಜೆ ಸಾಂಸ್ಕೃತಿಕ, ಕ್ರೀಡಾ ಹಾಗೂ ತರಬೇತಿ ಸಂಸ್ಥೆಯಿಂದ ಆಯೋಜಿಸಿದ್ದ ಗೀತ್ ಮತ್ತು ಗಜಲ್ ಮನಮುಟ್ಟುವ ಸುಮಧುರ ಗಾಯನಗಳ ಒಂದು ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದರ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಆಸಕ್ತಿಯಿಂದ ಸಂಗೀತ ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ್ ಮಾತನಾಡಿ, ಗಜಲ್ ಅತ್ಯಂತ ಜನಪ್ರಿಯ ಹಾಗೂ ಭಾವನಾತ್ಮಕ ಸಾಹಿತ್ಯ ಪ್ರಕಾರವಾಗಿದೆ. ಅರಬಿ ಮತ್ತು ಉರ್ದು ಭಾಷೆಗಳಿಂದ ಆರಂಭವಾದ ಗಜಲ್ ಇಂದು ಕನ್ನಡದಲ್ಲಿಯೂ ಜನಪ್ರಿಯವಾಗಿರುವುದು ಸಂತಸದ ಸಂಗತಿ ಎಂದರು.ಡಾ. ಕಸ್ತೂರಿ ಕರಮುಡಿ ಮಾತನಾಡಿ, ಸಂಗೀತಕ್ಕೆ ಅಪಾರ ಶಕ್ತಿಯಿದ್ದು, ಅದನ್ನು ಆಲಿಸುವುದರಿಂದ ಆರೋಗ್ಯ ಹಾಗೂ ಮನಸ್ಸಿಗೆ ಚೈತನ್ಯ ದೊರೆಯುತ್ತದೆ ಎಂದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದಭಾವಿ ಮಾತನಾಡಿ, ಸಂಗೀತಕ್ಕೆ ಭಾಷೆಯ ಗಡಿ ಇಲ್ಲ. ಎಲ್ಲ ಭಾಷೆಗಳಲ್ಲೂ ಸಂಗೀತವಿದ್ದು, ಅದು ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದರು.ಕಾರ್ಯಕ್ರಮದಲ್ಲಿ ರಾಯಚೂರಿನ ಹಿರಿಯ ಉರ್ದು ಸಾಹಿತಿ ಹಾಗೂ ಕವಿ ಡಾ. ಇಫ್ತೇಕಾರ ಶಕೀಲ್, ಸಂಸ್ಥೆಯ ಮಹಮ್ಮದ್ ಏಜಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾಹಿತಿ ಹಾಗೂ ವಾಗ್ಮಿ ಎಂ. ಬದಿಯುದ್ದೀನ್ ಅಹಮದ್ ನವೀದ್ ನಿರೂಪಿಸಿದರು.
ನಂತರ ರಾಯಚೂರಿನ ಗಜಲ್ ಗಾಯಕ ಅಖಿಲ್ ಯಾವರ್ ಅವರ ಗೀತ್, ಗಜಲ್ ಹಾಗೂ ದೇಶಭಕ್ತಿ ಗೀತೆಗಳ ಗಾಯನ ಪ್ರೇಕ್ಷಕರನ್ನು ರಂಜಿಸಿತು. ಖಾಜಾ ಪಾಶಾ, ರಾಘವೇಂದ್ರ ಆಶಾಪುರ ಹಾಗೂ ವೆಂಕಟೇಶ ಸಾಥ್ ನೀಡಿದರು.