ಮಂಜುನಾಥ ಕೆ.ಎಂ.
ಸರ್ಕಾರದ ಮಹತ್ವಾಕಾಂಕ್ಷಿ ಶಿಕ್ಷಣ ಯೋಜನೆಯ ಭಾಗವಾಗಿ ಒಂದರಿಂದ ಐದನೇ ತರಗತಿವರೆಗೆ ಕನ್ನಡದ ಜತೆಗೆ ಇಂಗ್ಲೀಷ್ ಮಾಧ್ಯಮದ ಕಲಿಕೆಗೆ ಅವಕಾಶ ನೀಡಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೊಂಡಿದೆ. ಬಳ್ಳಾರಿ ತಾಲೂಕಿನ ಪೂರ್ವ ವಲಯದ 143 ಕಿರಿಯ, ಹಿರಿಯ, ಪ್ರೌಢಶಾಲೆಗಳು ಹಾಗೂ ಸಂಡೂರು ತಾಲೂಕಿನ 153 ಶಾಲೆಗಳು ದ್ವಿಭಾಷಾ ಶಿಕ್ಷಣ ಪದ್ಧತಿ ಯೋಜನೆಗೆ ಒಳಗಾಗಿವೆ. ಈ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಗುಣಮಟ್ಟದ ಇಂಗ್ಲೀಷ್ ಬೋಧನೆ ಜತೆ ಸರ್ಕಾರದ ಎಲ್ಲ ಶೈಕ್ಷಣಿಕ ಉಚಿತ ಯೋಜನೆಗಳು ಅನ್ವಯವಾಗಲಿವೆ.
ವಿದ್ಯಾರ್ಥಿಗಳನ್ನು ಸೆಳೆಯಲು ಯತ್ನ:ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ ದಾಖಲಾತಿ ಹೆಚ್ಚಿಸುವ ಪ್ರಯತ್ನ ನಡೆದಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ದ್ವಿಭಾಷಾ ಶಿಕ್ಷಣ ವ್ಯವಸ್ಥೆಗೆ ಚಾಲನೆ ನೀಡಿರುವುದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಶಾವಾದ ಮೂಡಿಸಿದೆ. ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದ ಪೋಷಕರನ್ನು ಮತ್ತೆ ಸರ್ಕಾರಿ ಶಾಲೆಗಳತ್ತ ಸೆಳೆಯುವ ಪ್ರಯತ್ನಕ್ಕೂ ಇದು ಪೂರಕವಾಗಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಸೌಕರ್ಯ, ಶಿಕ್ಷಕರ ನಿಯೋಜನೆ:
ಇದರ ಜತೆಗೆ ಬಳ್ಳಾರಿ ಪಶ್ಚಿಮ ವಲಯ, ಸಿರುಗುಪ್ಪ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಎಂಶ್ರೀ, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿಯೂ ದ್ವಿಭಾಷಾ ಶಿಕ್ಷಣವೂ ಈ ಬಾರಿ ಜಾರಿಗೊಂಡಿದೆ. ಈ ಶಾಲೆಗಳಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಇಂಗ್ಲೀಷ್ ಕಲಿಕೆಯ ವಿಸ್ತರಣೆಗೆ ಪೂರಕ ನೆಲೆಯಾಗಿ ಪರಿಣಮಿಸಿವೆ.