ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಶ್ವವಿದ್ಯಾಲಯದವರು ಸೃಷ್ಟಿಸುವ ಅವಾಂತರಗಳಿಗೆ ಕೊನೆಯೇ ಇಲ್ಲ. ಎಂ.ಎ.ಅರ್ಥಶಾಸ್ತ್ರ ವಿಭಾಗದ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಇಂಗ್ಲೀಷ್ ಭಾಷೆಯಲ್ಲಿ ನೀಡಿರುವುದು ಹೊಸದೊಂದು ಗೊಂದಲ, ಅವಾಂತರಕ್ಕೆ ಕಾರಣವಾಗಿದೆ.ಶುಕ್ರವಾರದಂದು ಅರ್ಥಶಾಸ್ತ್ರ ಎರಡನೇ ಸೆಮಿಸ್ಟರ್‌ನ ಪರೀಕ್ಷೆ ಇತ್ತು. ಪರೀಕ್ಷೆಗೆ ೧೫ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಅರ್ಥಶಾಸ್ತ್ರ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡಲಾಗಿತ್ತು. ಕನ್ನಡದಲ್ಲಿ ಉತ್ತರ ಬರೆಯುವುದಕ್ಕೆ ವಿದ್ಯಾರ್ಥಿಗಳು ಸಿದ್ಧರಾಗಿ ಬಂದಿದ್ದರು. ಆದರೆ, ಪ್ರಶ್ನೆಪತ್ರಿಕೆ ಇಂಗ್ಲೀಷ್‌ನಲ್ಲಿರುವುದನ್ನು ಕಂಡು ಕಂಗಾಲಾದರು.
ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿಲ್ಲ:ಅರ್ಥಶಾಸ್ತ್ರ ವಿಷಯದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಇಂಗ್ಲೀಷ್ ಭಾಷೆಯ ಪ್ರಶ್ನೆಪತ್ರಿಕೆ ನೀಡಲಾಗಿತ್ತು ಎನ್ನುವುದು ವಿವಿ ಆಡಳಿತಮಂಡಳಿಯವರ ವಾದ. ಆ ಮಾದರಿಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಬೇಕಾದರೆ ಇಂಗ್ಲೀಷ್ ಭಾಷೆಯಲ್ಲಿ ಉತ್ತರ ಬರೆಯುವಷ್ಟರ ಮಟ್ಟಿಗೆ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರೇ ಎಂದು ಕೇಳಿದರೆ ಅದಕ್ಕೆ ಉತ್ತರವೇ ಇಲ್ಲ.
ವಿದ್ಯಾರ್ಥಿಗಳ ಮನವಿ ಮೂಲೆಗುಂಪು:ಕಳೆದ ಬಾರಿ ಮೊದಲನೇ ಸೆಮಿಸ್ಟರ್‌ನ ಅರ್ಥಶಾಸ್ತ್ರದ ವಿಷಯಕ್ಕೂ ಇಂಗ್ಲೀಷ್ ಪ್ರಶ್ನೆಪತ್ರಿಕೆಯನ್ನೇ ನೀಡಲಾಗಿತ್ತು. ಆಗ ವಿದ್ಯಾರ್ಥಿಗಳು ಕನ್ನಡದಲ್ಲಿ ಪ್ರಶ್ನೆಪತ್ರಿಕೆ ನೀಡುವಂತೆ ಮನವಿ ಮಾಡಿದ್ದರು. ಆ ಸಮಯದಲ್ಲೇ ವಿದ್ಯಾರ್ಥಿಗಳ ಕುಲಸಚಿವರಿಗೆ ನೀಡಿದ್ದ ಮನವಿಯನ್ನು ಮಂಡ್ಯ ವಿವಿ ಕುಲಪತಿ ಹಾಗೂ ಪರೀಕ್ಷಾಂಗ ಕುಲಸಚಿವರು ಮೈಸೂರು ವಿಶ್ವವಿದ್ಯಾಲಯದ ಬೋರ್ಡ್ ಆಫ್ ಎಕ್ಸಾಮಿನೇಷನ್ ಅವರ ಗಮನಕ್ಕೆ ತರಬೇಕಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಎರಡೂ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆ ನೀಡುವಂತೆ ಕೋರಿಕೆ ಸಲ್ಲಿಸಬೇಕಿತ್ತು.
ಬೌದ್ಧಿಕ ಮಟ್ಟವನ್ನು ಮೈಸೂರು ವಿವಿ ಗಮನಕ್ಕೆ ತರಲಿಲ್ಲ:ಈ ಹಂತದಲ್ಲಿ ಜವಾಬ್ದಾರಿಯನ್ನು ಮರೆತು ವಿದ್ಯಾರ್ಥಿಗಳು ಕೊಟ್ಟ ಮನವಿಯನ್ನು ಮೂಲೆಗೆಸೆದು ಮೌನ ವಹಿಸಿದರು. ಮಂಡ್ಯ ವಿವಿಯಲ್ಲಿ ಅಧ್ಯಯನ ಮಾಡುವ ಎಂಎ ಅರ್ಥಶಾಸ್ತ್ರ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹಾಗೂ ಬೌದ್ಧಿಕ ಮಟ್ಟವನ್ನು ಮೈಸೂರು ವಿಶ್ವವಿದ್ಯಾಲಯದ ಗಮನಕ್ಕೆ ತರಲಿಲ್ಲವಾದ ಕಾರಣ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮುದ್ರಣವಾಗುತ್ತಿದ್ದ ಪ್ರಶ್ನೆಪತ್ರಿಕೆ ಈ ಬಾರಿ ಮೈಸೂರು ವಿವಿಗೆ ಅನುಗುಣವಾಗಿ ತಯಾರಾದ ಇಂಗ್ಲೀಷ್ ಭಾಷೆ ಪ್ರಶ್ನೆಪತ್ರಿಕೆ ಮಂಡ್ಯಕ್ಕೂ ಬಂದಿದೆ. ಇದು ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗುವುದಕ್ಕೆ ಮೂಲ ಕಾರಣವಾಯಿತು.
ವಿದ್ಯಾರ್ಥಿಗಳ ಅಳಲು:ಮೊದಲನೇ ಸೆಮಿಸ್ಟರ್ ಪ್ರಶ್ನೆಪತ್ರಿಕೆ ಇಂಗ್ಲೀಷ್ ಭಾಷೆಯಲ್ಲಿದ್ದುದರಿಂದ ಉತ್ತರಿಸಲಾಗದೆ ಹಲವು ವಿದ್ಯಾರ್ಥಿಗಳು ವ್ಯಾಸಂಗವನ್ನೇ ನಿಲ್ಲಿಸಿದ್ದಾರೆ. ನಾವು ಕೂಡ ಈ ಬಾರಿ ಅನುತ್ತೀರ್ಣರಾದರೆ ವ್ಯಾಸಂಗವನ್ನೇ ನಿಲ್ಲಿಸುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ, ಮನೆಯಲ್ಲಿ ಪೋಷಕರು ಸಾಲ ಮಾಡಿ ಕಾಲೇಜಿನ ಶುಲ್ಕ ಪಾವತಿ ಮಾಡಿದ್ದಾರೆ. ಅವರಿಗೇನು ಹೇಳುವುದು ಎಂದು ವಿದ್ಯಾರ್ಥಿಗಳಾದ ಎಚ್.ಜೆ.ನರೇಂದ್ರ, ಎಂ.ವಿನುತಾ, ಮನೋಜ್, ಜಯಶೇಖರ್ ಅಳಲು ವ್ಯಕ್ತಪಡಿಸಿದರು.
ದ್ವಿತೀಯ ಸೆಮಿಸ್ಟರ್ ಪ್ರಶ್ನೆಪತ್ರಿಕೆಯನ್ನು ಇಂಗ್ಲೀಷ್‌ನಲ್ಲಿ ನೀಡಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಾರೆ, ಒಟ್ಟಾರೆ ವಿದ್ಯಾರ್ಥಿಗಳ ಜೀವನದಲ್ಲಿ ಮಂಡ್ಯ ವಿವಿ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ. ಇದು ನಮಗೆ ಪ್ರಾಣಸಂಕಟವನ್ನು ತಂದೊಡ್ಡಿದೆ ಎಂದು ವಿದ್ಯಾರ್ಥಿಗಳಾದ ಎಚ್.ಎಸ್.ನಂಜುಂಡಸ್ವಾಮಿ, ದರ್ಶನ್, ಕುಮಾರ್, ಮನೋಜ್, ಪ್ರಜ್ವಲ್, ಕೆ.ಎಂ.ಸುಚಿತ್ರಾ, ಪೂರ್ಣಿಮಾ, ಜಯಶೀಲ ಆಕ್ರೋಶ ವ್ಯಕ್ತಪಡಿಸಿದರು.ಆ.೫ರಂದು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ: ಮಂಜುನಾಥ್
ಮೈಸೂರು ವಿವಿ ಹಾಳಾಗಲು ಕುಲಪತಿ, ಪರೀಕ್ಷಾಂಗ ಸಚಿವರೇ ಕಾರಣ. ಕನ್ನಡ ಭಾಷೆಯಲ್ಲಿ ವಿಷಯವನ್ನು ಓದಿ ಅರ್ಥೈಸಿಕೊಂಡ ವಿದ್ಯಾರ್ಥಿಗಳು ಇಂಗ್ಲೀಷ್ ಪ್ರಶ್ನೆಪತ್ರಿಕೆಯಲ್ಲಿರುವ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಇಂಗ್ಲೀಷ್ ಭಾಷೆಯನ್ನು ಅರ್ಥೈಸಿಕೊಂಡು ಉತ್ತರ ಬರೆಯುವಷ್ಟರ ಮಟ್ಟಿಗೆ ಮಂಡ್ಯ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಳವಾಗಿಲ್ಲ. ಮೊದಲ ಸೆಮಿಸ್ಟರ್ ಸಮಯದಲ್ಲೇ ವಿದ್ಯಾರ್ಥಿಗಳು ಕೊಟ್ಟಿದ್ದ ಮನವಿಯನ್ನು ಮೈಸೂರು ವಿವಿ ಬೋರ್ಡ್ ಆಫ್ ಎಕ್ಸಾಮಿನೇಷನ್ ಗಮನಕ್ಕೆ ತರಬೇಕಿತ್ತು. ಆಡಳಿತ ಮಂಡಳಿಯವರ ಬೇಜವಾಬ್ದಾರಿತನದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ಕವಿದಿದೆ. ಇದನ್ನು ಸರಿಪಡಿಸದೇ ಹೋದರೆ ಮುಂದಿನ ನಾಲ್ಕು ವಿಷಯಗಳ ಪರೀಕ್ಷೆಯನ್ನು ನಿಷಿದ್ಧ ಮಾಡಿ ಮರು ಪರೀಕ್ಷೆ ಮಾಡುವಂತೆ ಒತ್ತಾಯಿಸಿ, ಆ.೫ ರಂದು ವಿದ್ಯಾರ್ಥಿಗಳ ಜೊತೆ ಪ್ರತಿಭಟನೆ ಮಾಡಲಾಗುವುದು ಎಂದು ಕನ್ನಡ ಸೇನೆ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.------
‘ಮಂಡ್ಯ ವಿಶ್ವವಿದ್ಯಾಲಯಕ್ಕೆ ಇನ್ನೂ ಸಂಪೂರ್ಣ ಸ್ವಾಯತ್ತತೆ ಸಿಕ್ಕಿಲ್ಲ. ಹಾಗಾಗಿ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾ ಕ್ರಮವನ್ನು ಅನುಸರಿಸಲಾಗುತ್ತಿದೆ. ಮೈಸೂರು ವಿವಿಯಿಂದ ಇಂಗ್ಲೀಷ್ ಪ್ರಶ್ನೆಪತ್ರಿಕೆ ಬಂದಿದೆ. ಅದನ್ನು ನಾವು ಕೊಟ್ಟಿದ್ದೇವೆ. ಮುಂದೆ ಈ ಗೊಂದಲವನ್ನು ಸರಿಪಡಿಸಲಾಗುವುದು.’-ಎಚ್.ಜಿ.ರಂಗರಾಜು, ಕುಲ ಪರೀಕ್ಷಾಂಗ ಸಚಿವ, ಮಂಡ್ಯ ವಿವಿ
‘ಎರಡನೇ ಸೆಮಿಸ್ಟರ್‌ನ ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧನೆ ಮಾಡಲಾಗಿದೆ. ಅವರಿಗೆ ನೀಡುವ ಪ್ರಶ್ನೆಪತ್ರಿಕೆ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಇರಬೇಕಿತ್ತು. ಈ ಬಾರಿ ಮೈಸೂರು ವಿಶ್ವವಿದ್ಯಾಲಯ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಪ್ರಶ್ನೆಪತ್ರಿಕೆ ಮುದ್ರಿಸಿ ಕಳುಹಿಸಿದೆ. ಅದನ್ನೇ ಕೊಟ್ಟಿದ್ದೇವೆ. ಈ ವಿಷಯವಾಗಿ ಬೋರ್ಡ್ ಆಫ್ ಎಕ್ಸಾಮಿನೇಷನ್ ಛೇರ್ಮನ್ ಜೊತೆ ಮಾತುಕತೆ ನಡೆಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಹಾಗೂ ಮುಂದೆ ಈ ರೀತಿ ಸಮಸ್ಯೆಯಾಗದಂತೆ ಎಚ್ಚರ ವಹಿಸುತ್ತೇವೆ.’
-ಡಾ.ಪುಟ್ಟರಾಜು, ಕುಲಪತಿ, ಮಂಡ್ಯ ವಿವಿ.