ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ರೋಟರಿ ಕ್ಲಬ್ ಕೆ. ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮಕ್ಕಳ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಶಿಕ್ಷಣವೆಂಬುದು ಅಂಕಗಳ ಕೇಂದ್ರಿತವಾಗಿದೆ. ಸರ್ವತೋಮುಖ ಬೆಳವಣಿಗೆ, ವ್ಯಕ್ತಿತ್ವ ವಿಕಸನ ಮತ್ತು ಲೋಕಜ್ಞಾನ ವಿಸ್ತರಣೆಯ ಅವಕಾಶದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಜಾತಿ, ಧರ್ಮದ ಗೊಂದಲಗಳೊಂದಿಗೆ ಅಲ್ಪ ಮಾನವರಾಗಿ ಬೆಳೆಯುತ್ತಿರುವ ಮಕ್ಕಳನ್ನು ವಿಶ್ವ ಮಾನವರನ್ನಾಗಿಸುವುದು ಶಿಕ್ಷಣದ ಕರ್ತವ್ಯವಾಗಿದೆ. ಸಮುದಾಯದೊಂದಿಗೆ ಪ್ರೀತಿ, ವಿಶ್ವಾಸ ಸೌಹಾರ್ದತೆ ಇಲ್ಲದೆ ವಿದ್ಯಾರ್ಥಿಗಳು ಸ್ವಾರ್ಥ ಹಾಗೂ ಪ್ರತ್ಯೇಕತೆಯ ಮನೋಭಾವ ರೂಢಿಸಿಕೊಳ್ಳುತ್ತಿರುವುದು ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ. ದೇಶದ ಬಗ್ಗೆ ಚಿಂತನೆ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಯೋಚನೆ ಮಾಡದಿದ್ದರೆ ನಿಜವಾದ ಅರ್ಥದಲ್ಲಿ ಪ್ರಜೆಗಳಾಗಲು ಸಾಧ್ಯವಿಲ್ಲ. ಶಿಕ್ಷಕರು ಪಠ್ಯಕ್ಕನುಗುಣವಾಗಷ್ಟೇ ಪಾಠ ಮಾಡದೆ ಮಕ್ಕಳಲ್ಲಿ ಭವಿಷ್ಯಕ್ಕೆ ಬೇಕಾದ ಮೌಲ್ಯಗಳನ್ನು ಸಂಸ್ಕೃತಿಯನ್ನು ತುಂಬಬೇಕು ಎಂದರು. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಕ್ಕಳ ನಾಟಕೋತ್ಸವ ಹಮ್ಮಿಕೊಂಡಿರುವ ರೋಟರಿ ಸಂಸ್ಥೆಯನ್ನು ಶ್ಲಾಘಿಸಿದರು. ಸಾಮಾಜಿಕ ಕಾರ್ಯಕರ್ತ ಹಾಗೂ ಶಿವಶಕ್ತಿ ಕಲಾವಿದರ ತಂಡದ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್ ಮಾತನಾಡಿ, ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೇವಲ ಸಿನಿಮಾ ಹಾಡಿನ ಅಬ್ಬರವೇ ತುಂಬಿರುತ್ತದೆ. ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಪೌರಾಣಿಕ ಪ್ರಸಂಗವನ್ನು ಆಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ನಮ್ಮ ಇತಿಹಾಸ, ಪರಂಪರೆಯ ದರ್ಶನ ಮಾಡಿಸಬೇಕು ಎಂದು ಹಲವು ಪೌರಾಣಿಕ ಪ್ರಸಂಗಗಳ ಸನ್ನಿವೇಶವನ್ನು ಪ್ರದರ್ಶಿಸಿದರು. ರೋಟರಿ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ಜಯರಾಮ್ ಮಾತನಾಡಿ ಕಲೆ ಮನುಷ್ಯನ ಸಹನಶೀಲತೆ ಮತ್ತು ಜೀವನ್ಮುಖಿ ಬದುಕಿನ ಮಾರ್ಗಗಳನ್ನು ಪ್ರೇರೇಪಿಸುತ್ತದೆ. ಹಾಗಾಗಿ ಮಕ್ಕಳಲ್ಲಿ ಕಲೆಯ ಬಗ್ಗೆ ಅಭಿರುಚಿ ಮೂಡಿಸುವ ಪ್ರಯತ್ನ ನಡೆಯಬೇಕು ಎಂದರು. ಸಮಾರಂಭದಲ್ಲಿ ಡಾ.ಭೈರಮಂಗಲ ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ೧೧ ಶಾಲೆಯ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ಆಧಾರಿತ ನಾಟಕಗಳನ್ನು ಪ್ರದರ್ಶಿಸಿದರು. ಪ್ರಿಯಾ ಆಂಗ್ಲಶಾಲೆಯ ವಿದ್ಯಾರ್ಥಿಗಳು ಪ್ರಥಮ, ಇಂಡಿಯನ್ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಎಇಎಸ್ (ಗ್ಲೋಬಲ್ ಎಂಬೆಸಿ) ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದರು. ಲಲಿತರಾಮಚಂದ್ರ, ಶಿವಾನಂದ್, ಮಾಸ್ಟರ್ ಆದರ್ಶ್ ತೀರ್ಪುಗಾರರಾಗಿದ್ದರು. ಕಸಾಪ ಗೌರವಾಧ್ಯಕ್ಷ ಟಿ.ಎಸ್. ಬೋರೇಗೌಡ ಸಮಾರೋಪ ಭಾಷಣ ಮಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ವಿ.ಆರ್. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಪ್ರಕಾಶಗುಪ್ತ, ರೋಟರಿ ಅಸಿಸ್ಟೆಂಟ್ ಗೌರ್ನರ್ ಜಿ. ಪ್ರಭುಸ್ವಾಮಿ ಬಹುಮಾನ ಪ್ರಾಯೋಜಕರಾದ ಅಭಿನೇತ್ರಿ ನರಸಿಂಹಮೂರ್ತಿ, ಡಾ. ಚೌದ್ರಿ ನಾಗೇಶ್, ಕಿರಣ್‌ಕುಮಾರ್ (ಬಾಳೇಕಾಯಿ), ಕಾರ್ಯದರ್ಶಿ ಸಿ.ಆರ್.ಸುನಿಲ್, ಖಜಾಂಚಿ ಎಸ್. ಪ್ರಸನ್ನಕುಮಾರ್, ಬರಹಗಾರ ತುರುವೇಕೆರೆ ಪ್ರಸಾದ್, ಟಿ.ರಾಮಚಂದ್ರು, ಸಾ.ಶಿ.ದೇವರಾಜ್, ಅರಳೀಕೆರೆ ಲೋಕೇಶ್, ಸತ್ಯನಾರಾಯಣ್ ಉಪಸ್ಥಿತರಿದ್ದರು. ಸಂತೋಷ್ ವಂದಿಸಿದರು. ಮೋಹನ್ ಕಾರ್ಯಕ್ರಮ ನಿರೂಪಿಸಿದರು.