ಇಂಗ್ಲೀಷ್‌ ಶಿಕ್ಷಕರಿಗೇ ಇಂಗ್ಲೀಷ್‌ ವ್ಯಾಕರಣ ಅರಿವು ಇಲ್ಲ: ಇಂಗ್ಲೀಷ್‌ ಉಪನ್ಯಾಸಕ ಕುಮಾರಯ್ಯ

KannadaprabhaNewsNetwork | Published : Feb 26, 2024 1:32 AM

ಸಾರಾಂಶ

ಮಕ್ಕಳಿಗೆ ಉತ್ತಮವಾಗಿ ಇಂಗ್ಲೀಷ್‌ ಕಲಿಸಬೇಕಾದರೆ ಮೊದಲಿಗೆ ಉತ್ತಮವಾಗಿ ಕಲಿತಿರಬೇಕು ಎಂದು ಬೈಚನಹಳ್ಳಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ, ಇಂಗ್ಲೀಷ್ ಉಪನ್ಯಾಸಕ ಡಿ.ಕೆ. ಕುಮಾರಯ್ಯ ಸಲಹೆ ನೀಡಿದರು. ಹೊಳೆನರಸೀಪುರದಲ್ಲಿ ಹೇಳಿದರು.

ನ್ಯೂ ಕ್ಯಾಂಪಸ್ ಜಂಬೂರಿ ಕಾರ್ಯಕ್ರಮ

ಹೊಳೆನರಸೀಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಇಂದಿಗೂ ಕಬ್ಬಿಣದ ಕಡಲೆಯಾಗಿದೆ. 30 ವರ್ಷದಿಂದ ಇಂಗ್ಲೀಷ್‌ ಕಲಿಸುತ್ತಿರುವ ಶಿಕ್ಷಕರಿಗೇ ಇನ್ನೂ ಸರಿಯಾಗಿ ಇಂಗ್ಲೀಷ್‌ ವ್ಯಾಕರಣ ಬರುವುದಿಲ್ಲ. ಮಕ್ಕಳಿಗೆ ಉತ್ತಮವಾಗಿ ಇಂಗ್ಲೀಷ್‌ ಕಲಿಸಬೇಕಾದರೆ ಮೊದಲಿಗೆ ಉತ್ತಮವಾಗಿ ಕಲಿತಿರಬೇಕು ಎಂದು ಬೈಚನಹಳ್ಳಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ, ಇಂಗ್ಲೀಷ್ ಉಪನ್ಯಾಸಕ ಡಿ.ಕೆ. ಕುಮಾರಯ್ಯ ಸಲಹೆ ನೀಡಿದರು.

ಪಟ್ಟಣದ ವಾಸವಿ ವಿದ್ಯಾಸಂಸ್ಥೆ ಶನಿವಾರ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ನ್ಯೂ ಕ್ಯಾಂಪಸ್ ಜಂಬೂರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೈಸೂರು ಅರಮನೆಯ ಸುತ್ತ ಹಾಗೂ ಹಂಪೆಯಲ್ಲಿ ಕೆಲಸ ಮಾಡುವ ಬಡವರು ಇಂಗ್ಲೀಷ್‌ ಭಾಷೆಯನ್ನು ಸುಲಲಿತವಾಗಿ ಮಾತನಾಡುವುದರ ಜತೆಗೆ ಅನೇಕ ವಿದೇಶಿ ಭಾಷೆಗಳನ್ನೂ ಮಾತನಾಡುತ್ತಾರೆ. ಅವರಿಗೆ ವ್ಯಾಕರಣ ಗೊತ್ತಿರುವುದಿಲ್ಲ. ಆದರೆ ಮಾತನಾಡುವ ಕಲೆ ಗೊತ್ತಿರುತ್ತದೆ. ಅದೇ ಮಾದರಿಯಲ್ಲಿ ಈ ಮಕ್ಕಳಿಗೆ ಇಂಗ್ಲೀಷ್ ಕಲಿಸಿ, ನಂತರ ವ್ಯಾಕರಣ ಕಲಿಸುವ ಪ್ರಯತ್ನದಲ್ಲಿ ರಫಿಉಲ್ಲಾ ಹಾಗೂ ಫಾತಿಮಾ ಯಶಸ್ವಿ ಆಗಿದ್ದಾರೆ ಎಂದರು.

ಸಂಸ್ಥೆಯ ಎ.ಆರ್. ರವಿಕುಮಾರ್ ಮಾತನಾಡಿ, ಮಗು ಇನ್ನೂ ಎಲ್ಕೆಜಿ ಸೇರಿದ ತಕ್ಷಣ ಆ ಮಗು ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು ಎಂದು ಪೋಷಕರು ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ. ಮಗುವಿನ ಆಸಕ್ತಿಯನ್ನು ಅರಿತು ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸಬೇಕು ಎಂದರು.

ಮಾಸ್ಟರ್ ಟ್ರೈನರ್ ರಫಿಉಲ್ಲಾ ಮಾತನಾಡಿ, ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಭಾಷೆ ಅವಶ್ಯಕವಾಗಿ ಬೇಕು. ವಾಸವಿ ವಿದ್ಯಾಸಂಸ್ಥೆ ಇದನ್ನು ಮನಗಂಡು ಶಾಲೆಯ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಹಾಗೂ ವ್ಯಾಕರಣವನ್ನು ಕಲಿಸಲು ಅವಕಾಶ ನೀಡಿದ್ದು ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದಾರೆ ಎಂದರು. ಮಕ್ಕಳು ಇಂಗ್ಲೀಷ್ ಭಾಷೆಯನ್ನೇ ಬಳಸಿ ನೀಡಿದ ಪ್ರದರ್ಶನ ಗಮನ ಸೆಳೆಯಿತು.

ಸಂಸ್ಥೆಯ ಕಾರ್ಯದರ್ಶಿ ಎನ್.ವಿ.ಬಾಲಾಜಿ, ಅನಂತ ಕೃಷ್ಣ, ಕಿರಣ್, ವೆಂಕಟೇಶ್ ಪ್ರಸಾದ್, ನಾಗೇಂದ್ರ ಗುಪ್ತಾ, ರಾಘವೇಂದ್ರ, ಕಾವ್ಯಾ ದಿನೇಶ್, ವಿಶ್ವಾಸ್ ಭಾಗವಹಿಸಿದ್ದರು.ಹೊಳೆನರಸೀಪುರದ ವಾಸವಿ ವಿದ್ಯಾಸಂಸ್ಥೆ ಶನಿವಾರ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ನ್ಯೂ ಕ್ಯಾಂಪಸ್ ಜಂಬೂರಿ ಕಾರ್ಯಕ್ರಮವನ್ನು ಉಪನ್ಯಾಸಕ ಡಿ.ಕೆ. ಕುಮಾರಯ್ಯ ಉದ್ಘಾಟಿಸಿದರು.

Share this article