ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒಕ್ಕಲಿಗ ಜನಾಂಗಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿದರೆ ಮುಂದಿನ ಪೀಳಿಗೆಗೆ ದಾರಿ ಸುಲಲಿತವಾಗಿರುತ್ತದೆ. ನಮ್ಮ ಸಮುದಾಯ ಯಾರನ್ನು ದ್ವೇಷಿಸಲ್ಲ. ಎಲ್ಲರೊಂದಿಗೆ ಪ್ರೀತಿಯಿಂದ ಇರುತ್ತದೆ. ಬೇರೆ ಸಮುದಾಯದವರನ್ನು ತುಳಿದು ಮೇಲೆ ಬರುವ ಚಿಂತನೆಯಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.ಜಿಲ್ಲಾ ಒಕ್ಕಲಿಗರ ಸಂಘದಿಂದ ಬಿಡಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನದ ಡೈನಿಂಗ್ ಹಾಲ್ ಉದ್ಘಾಟನಾ ಕಾರ್ಯಕ್ರಮ ಹಾಗೂ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಕ್ಕಲಿಗ ಸಮುದಾಯ ಒಟ್ಟಾಗಿರಿ. ಎಲ್ಲರನ್ನು ಸಹೋದರರಂತೆ ಕಾಣಿ. ಪ್ರತಿ ತಾಲೂಕಿನಲ್ಲಿಯೂ ಹಾಸ್ಟೆಲ್ ಮತ್ತು ಸಮುದಾಯ ಭವನಗಳನ್ನು ಕಟ್ಟಿಸಿ. ಶಿಕ್ಷಣದಿಂದ ಮಾತ್ರ ಒಕ್ಕಲಿಗ ಜನಾಂಗ ಮುಂದುವರೆಯಲು ಸಾಧ್ಯ. ಆಸ್ತಿ, ಅಂತಸ್ತಿಗಿಂತ ವಿದ್ಯೆಗೆ ಹೆಚ್ಚಿನ ಮಹತ್ವವಿದೆ. 40 ವರ್ಷಗಳ ಹಿಂದೆ ನಮ್ಮ ಸಮುದಾಯವನ್ನು ಕೇಳುವವರಿರಲಿಲ್ಲ.ಈಗ ಪರಿಸ್ಥಿತಿ ಬದಲಾಗಿದೆ. ಒಕ್ಕಲಿಗರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಕೆಲವರು ಅಧಿಕಾರ ಸಿಕ್ಕಾಗ ಮೈಮೇಲೆ ಹುಚ್ಚು ಬಂದಂತೆ ಆಡುತ್ತಾರೆ. ಕಳೆದುಕೊಂಡಾಗ ಮೂಲೆ ಸೇರುತ್ತಾರೆ. ಅಧಿಕಾರದಲ್ಲಿದ್ದಾಗ ಸಮುದಾಯಕ್ಕೆ ಏನು ಮಾಡಿದ್ದೇನೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.ಸಂಸದ ಗೋವಿಂದ ಕಾರಜೋಳ ಮಾತನಾಡಿ, ಹಿಂದಿನ ಕಾಲದಲ್ಲಿ ವಿದ್ಯೆ ದಾನ ಮಾಡುತ್ತಿದ್ದ ಗುರುಕುಲ ಮತ್ತು ಆಶ್ರಮಗಳು ಈಗ ಮಠಗಳಾಗಿ ಶಿಕ್ಷಣಕ್ಕೆ ಒತ್ತು ಕೊಡುತ್ತಿವೆ. ಜಿಲ್ಲಾ ಒಕ್ಕಲಿಗರ ಸಂಘ ಅದ್ಬುತವಾದ ಡೈನಿಂಗ್ ಹಾಲ್ ಕಟ್ಟಿದೆ. ಇಲ್ಲಿ ನಿತ್ಯ ಕಲ್ಯಾಣ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದರು.
ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಶಿವಮೊಗ್ಗದ ಪ್ರತಿ ತಾಲೂಕಿನಲ್ಲಿಯೂ ಒಕ್ಕಲಿಗರ ಸಮುದಾಯ ಭವನವಿದೆ. 1 ಲಕ್ಷ 72 ಸಾವಿರ ಮಕ್ಕಳು ಓದುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕೊಡುಗೆಯಿದೆ. ಶಿಕ್ಷಣದ ಕಡೆ ಮಕ್ಕಳು ಹೆಚ್ಚಿನ ಗಮನಹರಿಸಬೇಕು. ದಾನಕ್ಕಿರುವ ಶ್ರೇಷ್ಠತೆ ಏನು ಎನ್ನುವುದನ್ನು ಅರಿಯುವುದು ಮುಖ್ಯ ಎಂದರು.
ಬಿಬಿಎಂಪಿ ನಿವೃತ್ತ ಉಪ ಆಯುಕ್ತ ಡಾ.ಜೆ.ರಾಜು, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಆರ್.ಮಂಜುನಾಥ್, ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಆರ್.ತಿಮ್ಮಯ್ಯ ಮಾತನಾಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿಪಿ.ಚೇತನ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಹಿರಿಯೂರು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ರಾಮಚಂದ್ರಪ್ಪ, ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹಾಜರಿದ್ದರು.ಕಾರ್ಯಕ್ರಮ ಯಾವ ಪುರುಷಾರ್ಥಕ್ಕೆ?
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೇರಿ ಒಂದು ಸಾವಿರ ದಿನಗಳಾಗಿದೆ ಎಂದು ಹಾವೇರಿಯಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವ್ಯಂಗ್ಯವಾಡಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಯಾರು ಎಂಬುದೇ ಗೊತ್ತಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿ.ಎಂ.ಗದ್ದುಗೆಯೇರಲು ದೆಹಲಿಗೆ ಹೋಗಿ ಬರುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಒಂದು ಸಾವಿರ ದಿನಗಳಾಗಿರುವುದನ್ನು ಕರಾಳ ದಿನವೆಂದು ಆಚರಿಸುವುದು ಸೂಕ್ತ.
ಬಡವರ ರೇಷನ್ ಕಾರ್ಡ್ ಗಳನ್ನು ಸರ್ಕಾರ ರದ್ದುಪಡಿಸುತ್ತಿದೆ. ಗುತ್ತಿಗೆದಾರರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆರು ಸಾವಿರ ಕೋಟಿ ರು.ಅಬಕಾರಿ ಡೀಲ್ ನಡೆದಿದೆ ಎಂದು ದೂರಿದರು.