ಗೋಕರ್ಣ: ನಮ್ಮ ಆಡುಭಾಷೆಯಲ್ಲಿ ಆಂಗ್ಲ ಪದಗಳು ಅರ್ಬುದ ರೋಗ ಹರಡುವಂತೆ ವ್ಯಾಪಕವಾಗುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಮರೆತುಹೋದ ಒಂದೊಂದೇ ಕನ್ನಡ ಪದಗಳನ್ನು ಮರುಬಳಕೆಗೆ ತರುವ ಮೂಲಕ ಭಾಷೆ, ಆ ಮೂಲಕ ಸಂಸ್ಕೃತಿಯನ್ನು ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಪಣ ತೊಡಬೇಕು. ಅರ್ಬುದ ರೋಗ ದೇಹದ ಒಂದು ಅಂಗದಲ್ಲಿ ಕಾಣಿಸಿಕೊಂಡು ಇಡೀ ದೇಹವನ್ನು ವ್ಯಾಪಿಸಿ ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ಆಂಗ್ಲಪದಗಳು ಕೂಡ ನಮ್ಮ ಸ್ವಂತಿಕೆಯನ್ನು ಮರೆಯುವಷ್ಟರ ಮಟ್ಟಿಗೆ ಕನ್ನಡದಲ್ಲಿ ವ್ಯಾಪಕವಾಗಿಬಿಟ್ಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸ್ವಭಾಷೆ ಕುಲಗೆಟ್ಟು ಹೋಗುತ್ತದೆ ಎಂದು ಎಚ್ಚರಿಸಿದರು.
ಅನಿವಾರ್ಯ ಸಂದರ್ಭಗಳಲ್ಲಿ ಆಂಗ್ಲಭಾಷೆ ಮಾತನಾಡಿದರೆ ತಪ್ಪಲ್ಲ; ಆದರೆ ಕನ್ನಡದ ಜತೆ ಆಂಗ್ಲವನ್ನು ಬಳಸಬೇಡಿ. ಭಾಷೆ ಎನ್ನುವುದು ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ; ಅದು ಸಂಸ್ಕೃತಿಯ ಪ್ರತೀಕ; ಭಾಷೆ ಮರೆತರೆ ಸಂಸ್ಕೃತಿ ನಾಶವಾದಂತೆ. ಸ್ವಭಾಷೆ ಮನೆ- ಮನದ ಭಾಷೆಯಾಗಬೇಕು. ಊಟ, ವೇಷಭೂಷಣ, ನಡವಳಿಕೆಯಲ್ಲೂ ಸ್ವಂತಿಕೆ ಉಳಿಸಿಕೊಳ್ಳಬೇಕು. ನಮ್ಮ ಸಂಸ್ಕೃತಿ- ಪರಂಪರೆ ಉಳಿಸಿ ಬೆಳೆಸುವ ದೀಕ್ಷೆ ತೊಡಬೇಕು ಎಂದು ಆಶಿಸಿದರು.ಮರೆತು ಹೋದ ಒಂದೊಂದೇ ಕನ್ನಡ ಪದಗಳನ್ನು ಮತ್ತೆ ಬಳಕೆ ಮಾಡುವ ತೊಡೋಣ. ಉದಾಹರಣೆಗೆ ಇಂದಿನ ಶಬ್ದ ಆತ್ಮವಿಶ್ವಾಸ. ಈ ಶುದ್ಧ ಕನ್ನಡ ಶಬ್ದದಲ್ಲಿ ಆತ್ಮದ ಬೆಳಕು ಇದೆ. ಆಂಗ್ಲದಲ್ಲಿ ಕಾನ್ಫಿಡೆನ್ಸ್ ಎಂಬ ಪದವನ್ನು ಬಳಕೆ ಮಾಡಲಾಗುತ್ತದೆ. ಆದರೆ ಇದು ಆತ್ಮವಿಶ್ವಾಸಕ್ಕೆ ಪರ್ಯಾಯವಾಗಲಾರದು ಎಂದು ವಿಶ್ಲೇಷಿಸಿದರು.
ಚಾತುರ್ಮಾಸ್ಯ ನಮ್ಮ ಮನಸ್ಸನ್ನು ತೊಳೆದು ಶುದ್ಧಗೊಳಿಸುತ್ತದೆ. ಮಳೆ ನೆಲವನ್ನು ಹಸಿರುಗೊಳಿಸುವಂತೆ ಚಾತುರ್ಮಾಸ್ಯದ ಗುರುದರ್ಶನ ನಿಮ್ಮ ಬದುಕನ್ನು ಹಸನಾಗಿಸುತ್ತದೆ ಎಂದು ಹೇಳಿದರು.
ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ರಘುನಾಥ ರಾವ್ ದೇಶಪಾಂಡೆ ದಂಪತಿ, ಚಾತುಮಾಸ್ಯ ವ್ರತನಿರತ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ಭಟ್ ಉಂಚಗೇರಿ ನೇತೃತ್ವದಲ್ಲಿ ಸತತ ಐದು ದಿನಗಳ ಕಾಲ ರಾಮದೇವರ ಸನ್ನಿದಿಯಲ್ಲಿ ಸಾಮವೇದ ಪಾರಾಯಣ ನೆರವೇರಿತು. ಸಾಮವೇದ ವಿದ್ವಾಂಸ ಮೈಸೂರಿನ ಮಂಜುನಾಥ ಶ್ರೌತಿ ಅವರನ್ನು ಶ್ರೀಗಳು ಸನ್ಮಾನಿಸಿದರು.