ಹಗರಿಬೊಮ್ಮನಹಳ್ಳಿ: ಪಿಯುಸಿ ಹಂತದ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಹಿನ್ನೆಲೆ ಉಪನ್ಯಾಸಕರು ಅತ್ಯಂತ ಕಾಳಜಿಯಿಂದ ಪರಿಣಾಮಕಾರಿ ಬೋಧನೆಯಲ್ಲಿ ತೊಡಗಬೇಕು ಎಂದು ವೀವಿ ಸಂಘದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ ತಿಳಿಸಿದರು.
ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಶಕ್ತಿ ವಿದ್ಯಾರ್ಥಿಗಳ ಕೈಯಲ್ಲಿದೆ. ನಿರಂತರ ಓದು, ಶೈಕ್ಷಣಿಕ ಚರ್ಚೆಗಳ ಮೂಲಕ ವಿದ್ಯಾರ್ಥಿಗಳು ಸಂಪೂರ್ಣ ತೊಡಗಿಸಿಕೊಳ್ಳಬೇಕು. ಪಠ್ಯ ಹಾಗೂ ಪಠ್ಯೇತರ ಪೂರಕ ಚಟುವಟಿಕೆಗಳು ಶೈಕ್ಷಣಿಕ ಆಸಕ್ತಿಯನ್ನು ಹೆಚ್ಚಿಸುತ್ತವೆ ಎಂದರು.
ದಾನಿ ಅಕ್ಕಿ ಕೊಟ್ರಪ್ಪ ಮಾತನಾಡಿ, ವಿದ್ಯೆ ಎಂಬ ಸಂಪತ್ತನ್ನು ಯಾರೂ ಕದಿಯಲಾರರು. ಶಿಕ್ಷಣವೇ ಜೀವನ, ಶಿಕ್ಷಣದಿಂದ ಎಲ್ಲವನ್ನು ಪಡೆಯಬಹುದು. ಗ್ರಾಮದ ಶೈಕ್ಷಣಿಕ ಅಭಿವೃದ್ಧಿಗೆ ನಮ್ಮ ಕುಟುಂಬ ದಾನ ಮಾಡಲು ನಿರಂತರ ಸಕ್ರಿಯವಾಗಿರುತ್ತದೆ. ಬಡ ಮಕ್ಕಳು ಶೈಕ್ಷಣಿಕ ಅಭಿವೃದ್ಧಿ ಹೊಂದಿದರೆ ಆ ಕುಟುಂಬಗಳು ಅರ್ಥಬದ್ಧ ಜೀವನ ಸಾಗಿಸುತ್ತದೆ ಎಂದರು.ಪ್ರಾಂಶುಪಾಲ ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ದ್ವಿತೀಯ ಪಿಯುಸಿಯಲ್ಲಿ ಗುಣಮಟ್ಟದ ಫಲಿತಾಂಶ ಹೊರತರಲು ಕಾಲೇಜಿನ ಎಲ್ಲ ಉಪನ್ಯಾಸಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕಾಲೇಜು ದಾನಿಗಳು ಹಾಗೂ ಆಡಳಿತ ಮಂಡಳಿ ಅಧ್ಯಕ್ಷರ ಸಹಕಾರದಿಂದ ಕಾಲೇಜು ಪ್ರತಿವರ್ಷ ಉತ್ತಮ ಫಲಿತಾಂಶವನ್ನು ಪಡೆದಿದೆ ಎಂದರು.
ಉಪನ್ಯಾಸಕ ಗೌಡ್ರು ಬಸವರಾಜ ಉಪನ್ಯಾಸ ನೀಡಿದರು. ಇದೇ ವೇಳೆ ದಾನಿಗಳ ಕುಟುಂಬದ ಅಕ್ಕಿ ಪ್ರಸನ್ನ, ನಿವೇದಿತಾ ಅವರನ್ನು ಸನ್ಮಾನಿಸಲಾಯಿತು. ದತ್ತಿದಾನಿಗಳಾದ ಕೊಳ್ಳಿ ಗಿರೀಶ್, ಕಿಶನ್‌ರಾವ್, ಗೌರಜ್ಜನವರ ಬಸವರಾಜಪ್ಪ, ಸಣ್ಣಕೊಟ್ರಪ್ಪ, ದೇವಿಪ್ರಸಾದ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಟಿ.ಜಿ. ದೊಡ್ಡಬಸಪ್ಪ, ಎ. ಗಂಗಾಧರ, ಉಪನ್ಯಾಸಕ ಜಗದೀಶ್ ಇದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಎಚ್.ಎಂ. ಬಸವರಾಜ, ಕೊಟ್ರೇಶ ಆನೇಕಲ್, ಕುರಿ ಹೇಮಣ್ಣ ನಿರ್ವಹಿಸಿದರು. ಕಾರ್ಯಕ್ರಮದ ನಂತರ ನಡೆದ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮೆಚ್ಚುಗೆಗೆ ಪಾತ್ರವಾದವು.