ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಒತ್ತು ನೀಡಿ, ನಿರಂತರ ಕಲಿಕೆಯಿಂದ ಜ್ಞಾನ ವೃದ್ಧಿಸಿಕೊಳ್ಳುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಹೊರಹೊಮ್ಮುವಂತೆ ಕಾವೇರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷೆ ಕಾವೇರಿ ಮುತ್ತಣ್ಣ ಕರೆ ನೀಡಿದರು.ನಗರದ ಸೆರೆನಿಟಿ ಸಭಾಂಗಣದಲ್ಲಿ ಆಯೋಜಿಸಲಾದ ವಿರಾಜಪೇಟೆಯ ಕಾವೇರಿ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭ ‘ಪ್ರಣವಂ ಭಾರತ್’ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ವಿರಾಜಪೇಟೆ ಕ್ಷೇತ್ರ ಸಮನ್ವಯ ಅಧಿಕಾರಿ ವನಜಾಕ್ಷಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆಗಳು ಹೊಣೆಗಾರಿಕೆಯ ಪಾತ್ರ ವಹಿಸುತ್ತವೆ. ಇದರಲ್ಲಿ ಮಕ್ಕಳ ಪೋಷಕರ ಜವಾಬ್ದಾರಿಯೂ ಇದೆ. ಮಕ್ಕಳು ತಮ್ಮ ಪೋಷಕರನ್ನು ಹೆಚ್ಚಾಗಿ ಅನುಕರಣೆ ಮಾಡುತ್ತವೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಕೈಯಲ್ಲಿ ಮೊಬೈಲ್ ಹಿಡಿದು, ಮಕ್ಕಳು ಮಾತ್ರ ಪುಸ್ತಕವನ್ನು ಓದಲಿ ಅನ್ನುವುದು ಎಷ್ಟು ಸರಿ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, ಮಕ್ಕಳು ತಮ್ಮ ಜೀವನವನ್ನು ಕಟ್ಟಿಕೊಳ್ಳುವ ವರೆಗೆ ಪೋಷಕರು ತಮ್ಮ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವೆಂದು ಸಲಹೆ ನೀಡಿದರು.
ಕಾವೇರಿ ಸ್ಕೂಲ್‌ನ ಕಾರ್ಯದರ್ಶಿ ಪಿ.ಎನ್.ವಿನೋದ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಶಾಲಾ ವಾರ್ಷಿಕೋತ್ಸವವನ್ನು ಆಯೋಜಿಸದ ಹಿನ್ನೆಲೆಯಲ್ಲಿ ಈ ವರ್ಷ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ, ಕೋಮುದ್ವೇಷ, ಭ್ರಷ್ಟಾಚಾರ ತೊಲಗಿ ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ಎಂಬುದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಚಿಂತನೆಯೊಂದಿಗೆ ಶಾಲಾ ವಾರ್ಷಿಕೋತ್ಸವಕ್ಕೆ ಪ್ರಣವಂ ಭಾರತ್ ಎಂದು ಹೆಸರಿಡಲಾಗಿದೆ ಎಂದರು.ಕಾವೇರಿ ಸ್ಕೂಲ್‌ನ ಅಧ್ಯಕ್ಷ ಬಿ.ಎಸ್.ಸುದೇಶ್ ವಾರ್ಷಿಕ ವರದಿ ವಾಚಿಸಿದರು. ಕ್ಲಸ್ಟರ್ ಸಂಪನ್ಯೂಲ ವ್ಯಕ್ತಿ ಸುಶಾ ಉಪಸ್ಥಿತರಿದ್ದರು.ಕಳೆದ ಮೂರು ವರ್ಷಗಳ ಅಂದರೆ ೨೦೧೯-೨೦, ೨೦೨೦-೨೧ ಹಾಗೂ ೨೦೨೧-೨೨ ರ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಹಾಗೂ ೨೦೨೨-೨೩ ರ ಸಾಲಿನಲ್ಲಿ ಯುಕೆಜಿಯಿಂದ ೯ನೇ ತರಗತಿ ವರೆಗೆ ಅತ್ಯುತ್ತಮ ಸಾಧನೆ ತೋರಿದ ಶಾಲೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾವೇರಿ ಮುತ್ತಣ್ಣ ಅವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಸನ್ಮಾನಿಸಲಾಯಿತು. ಇತ್ತೀಚೆಗೆ ಅಗಲಿದ ಕಲಾವಿದ ಶ್ರೀನಿವಾಸ್ ಅವರಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.
ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸಹನ, ಚಿತ್ರಾ, ಪೂರ್ವ ಪ್ರಾಥಮಿಕ ವಿಭಾಗದ ಕೋ ಆರ್ಡಿನೇಟರ್ ಅಮೃತಾ ಅರ್ಜುನ್, ಪ್ರಾಥಮಿಕ ವಿಭಾಗದ ಕೋ ಆರ್ಡಿನೇಟರ್ ಭಾಗ್ಯ, ಪ್ರೌಢಶಾಲೆ ವಿಭಾಗದ ಕೋ ಆರ್ಡಿನೇಟರ್ ಚೈತ್ರಾ ಸೇರಿದಂತೆ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಮಕ್ಕಳ ಪೋಷಕರು ಹಾಜರಿದ್ದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಮಾರ್ಷಲ್ ಆರ್ಟ್ಸ್, ಕರಾಟೆ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.