ಯಲ್ಲಾಪುರ: ಪಶ್ಚಿಮಘಟ್ಟ ಪ್ರದೇಶದಲ್ಲಿ ಯೋಜನೆಗಳನ್ನು ಹೇರಿ ರಾಜ್ಯದ ಉಳಿದ ಭಾಗದ ಅಭಿವೃದ್ಧಿ ಮಾಡುವ ಸರ್ಕಾರಕ್ಕೆ, ಅಲ್ಲಿನ ಜನ ಬದುಕುಳಿಯಬೇಕೆಂಬ ಕನಿಷ್ಠ ಪ್ರಜ್ಞೆ ಇಲ್ಲವೇ? ಪಶ್ಚಿಮಘಟ್ಟವನ್ನು ಲೂಟಿ ಮಾಡಿದ್ದು ಸಾಕು. ಪಕ್ಷಾತೀತವಾಗಿ ಹೋರಾಟ ನಡೆಸುತ್ತೇನೆ ಎನ್ನುವ ಜನಪ್ರತಿನಿಧಿಗಳು ನಮ್ಮನ್ನು ಮುಳುಗಿಸಿಯೇ ಅವರು ಮೇಲೆಳುತ್ತಾರೆ ಎನ್ನುವ ಸತ್ಯ ತಿಳಿಯಬೇಕು ಎಂದು ಪರಿಸರತಜ್ಞ ಅಖಿಲೇಶ ಚಿಪ್ಲಿ ಹೇಳಿದರು.
ಮಾಧವ ಗಾಡ್ಗೀಳ್ ಅವರ ವರದಿಯಲ್ಲಿ ಶೇ. ೭೫ರಷ್ಟು ಅರಣ್ಯ ಸಂರಕ್ಷಣೆಯಾಗಬೇಕು ಮತ್ತು ಶೇ. ೨೫ರಷ್ಟು ಭೂಮಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಹೇಳಲಾಗಿತ್ತು. ಆದರೆ ಕಸ್ತೂರಿರಂಗನ್ ವರದಿಯಲ್ಲಿ ಶೇ. ೭೫ರಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಶೇ. ೨೫ರಷ್ಟು ಭೂಭಾಗ ಸಂರಕ್ಷಣೆಯಾಗಬೇಕು ಎಂಬ ಅಂಶಗಳಿವೆ ಎಂದರು.
ಸಂಪನ್ಮೂಲ ತಜ್ಞ ಜಿ. ವೀರೇಶ ಮಾತನಾಡಿ, ಕಸ್ತೂರಿರಂಗನ್ ವರದಿಯಲ್ಲಿ ಪಶ್ಚಿಮಘಟ್ಟದ ೪೦ ಲಕ್ಷ ಎಕರೆ ಸಂರಕ್ಷಣೆ ಮಾಡಬೇಕು ಎಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೪ ಲಕ್ಷ ಹೆಕ್ಟೇರ್ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದೆ. ಯಲ್ಲಾಪುರ ತಾಲೂಕಿನಲ್ಲಿ ೮೭ ಹಳ್ಳಿಗಳ ಸುಮಾರು ೧೨೯೩ ಚದರ ಕಿಮೀ ಪ್ರದೇಶವನ್ನು ಸೂಕ್ಷ್ಮ ವಲಯದ ಪಟ್ಟಿಗೆ ಸೇರಿಸಲಾಗಿದೆ. ಇಂತಹ ಅತ್ಯಂತ ಮಹತ್ವದ ವಿಚಾರವನ್ನು ಸರ್ಕಾರ ಗಮನಿಸುತ್ತಿಲ್ಲ. ಇದರಿಂದ ಜಿಲ್ಲೆಗೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಈಗಾಗಲೇ ಹಲವು ಯೋಜನೆಗಳಿಂದ ಜಿಲ್ಲೆಯ ಅರಣ್ಯನಾಶದ ಬಗ್ಗೆ ಸರ್ಕಾರ ರಚಿಸಿರುವ ವರದಿಯ ಹತ್ತು ಪಟ್ಟು ಅರಣ್ಯ ನಾಶವಾಗಿದೆ. ಈಗ ಹೊಸದಾಗಿ ಯೋಜನೆ ಹೇರುತ್ತಿದ್ದಾರೆ. ಈಗ ಜನರು ಸರ್ಕಾರಕ್ಕೆ ಅಂಕುಶವಾಗಬೇಕಿದೆ ಎಂದರು.
ಸಂವಾದದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ, ಕೃಷಿ ಚಟುವಟಿಕೆಗಳಿಗೆ ನಿರ್ಬಂಧ, ಮೂಲ ಸೌಕರ್ಯ, ವಿವಿಧ ಯೋಜನೆಗಳಿಗೆ ತಡೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ್ ಕನಕನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.