ನಗರದಲ್ಲಿ ರಸ್ತೆ ಸಂಚಾರ ಸಮಸ್ಯೆ ನೀಗಿಸಲು ಸರ್ಕಾರ ಎಲ್ಲಾ ಮೂಲಗಳಿಂದ ಸುಮಾರು 5,394 ಕೋಟಿ ರುಪಾಯಿ ಅನುದಾನ ನೀಡಿದ್ದು, ಈ ಅನುದಾನದಲ್ಲಿ 2875 ಕಿಮೀ ರಸ್ತೆ ಅಭಿವೃದ್ಧಿ ಪಡಿಸಲಾಗುವುದು, ಪ್ರಸ್ತುತ 100 ಕಿಮೀ ರಸ್ತೆ ಸಿದ್ಧವಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ರಸ್ತೆ ಸಂಚಾರ ಸಮಸ್ಯೆ ನೀಗಿಸಲು ಸರ್ಕಾರ ಎಲ್ಲಾ ಮೂಲಗಳಿಂದ ಸುಮಾರು 5,394 ಕೋಟಿ ರುಪಾಯಿ ಅನುದಾನ ನೀಡಿದ್ದು, ಈ ಅನುದಾನದಲ್ಲಿ 2875 ಕಿಮೀ ರಸ್ತೆ ಅಭಿವೃದ್ಧಿ ಪಡಿಸಲಾಗುವುದು, ಪ್ರಸ್ತುತ 100 ಕಿಮೀ ರಸ್ತೆ ಸಿದ್ಧವಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ಇಂದು 5 ನಗರ ಪಾಲಿಕೆಗಳ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದೇನೆ. ನಗರದ ರಸ್ತೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರವು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಈ ಅನುದಾನ ಒದಗಿಸಿದೆ. ಅನುದಾನ ಸಮರ್ಪಕ ಬಳಸಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಮಳೆಗಾಲದಿಂದಾಗಿ ರಸ್ತೆ ಕಾಮಗಾರಿಗಳ ಪ್ರಗತಿಗೆ ಅಡಚಣೆಯಾಗಿತ್ತು. ಇದರ ಜೊತೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಟಾರ್ ದರ ಏರಿಕೆಯಾಗಿದ್ದು, ಕಾಮಗಾರಿಗಳ ಮೇಲೂ ಪರಿಣಾಮ ಬೀರಿತ್ತು. ಇದೀಗ ಮಳೆಗಾಲ ಮುಗಿದಿರುವುದರಿಂದ ಸ್ಟಾರ್ ರೇಟ್ ಆಧಾರದಲ್ಲಿ ಡಾಂಬರೀಕರಣಕ್ಕೆ ಹಣ ಪಾವತಿಸಲಾಗುತ್ತಿದೆ. ಆದ್ದರಿಂದ ಎಲ್ಲಾ ಕಾಮಗಾರಿಗಳ ವೇಗವನ್ನು ಹೆಚ್ಚಿಸಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ 1 ಸಾವಿರ ಕೋಟಿ ರು. ವೆಚ್ಚದಲ್ಲಿ 629 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳು, ವಿಶೇಷ ಅನುದಾನದಡಿ 1,241 ಕೋಟಿ ರು. ವೆಚ್ಚದಲ್ಲಿ 787 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗಳು, 2 ಸಾವಿರ ಕೋಟಿ ರು. ವಿಶೇಷ ಅನುದಾನದಡಿ 1,040 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳು, ಹೊರ ವಲಯದ 5 ವಿಧಾನಸಭಾ ಕ್ಷೇತ್ರಗಳಲ್ಲಿ 506 ಕೋಟಿ ರು. ವೆಚ್ಚದಲ್ಲಿ 250 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳು, ಪಾಲಿಕೆ ಅನುದಾನದಡಿ 647 ಕೋಟಿ ರು. ವೆಚ್ಚದಲ್ಲಿ 175 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳು ನಡೆಯಲಿವೆ ಎಂದರು.

ಖುದ್ದಾಗಿ ವಿಡಿಯೋ ಮೂಲಕ ಪ್ರಗತಿ ಪರಿಶೀಲನೆ

ಇನ್ನು ಮುಂದೆ ಅಧಿಕಾರಿಗಳಾಗಲಿ, ಗುತ್ತಿಗೆದಾರರ ಕಾಮಗಾರಿ ವಿಳಂಬ ಕುರಿತು ಸುಳ್ಳು ಹೇಳುವಂತಿಲ್ಲ. ಯಾವ ಕಾಮಗಾರಿ ಎಲ್ಲಿ ನಡೆಯುತ್ತಿದೆ. ಎಷ್ಟು ಪ್ರಗತಿಯಲ್ಲಿದೆ ಎಂದು ತಿಳಿಯಲು ವಿಡಿಯೋ ಮೂಲಕ ಲೈವ್ ಅಪ್ ಡೇಟ್ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು ಹಾಗೂ ವೇಗ ಹೆಚ್ಚಿಸಲು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ನಡೆಯುತ್ತಿರುವ ಎಲ್ಲಾ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ರಿಮ್ಸ್ ವ್ಯವಸ್ಥೆಯಲ್ಲಿ ಅಳವಡಿಸಿ, ಲೈವ್ ಡೇಟಾ ಲಭ್ಯವಾಗುವಂತೆ ಮಾಡಬೇಕು. ಎಲ್ಲಾ ಮಾಹಿತಿಯನ್ನು ಒಂದೇ ಕಡೆ ವೀಕ್ಷಿಸಲು ಏಕೀಕೃತ ಡ್ಯಾಶ್ಬೋರ್ಡ್ (ಯುನಿಫೈಡ್ ಡ್ಯಾಶ್ಬೋರ್ಡ್) ರೂಪಿಸಲು ನಿರ್ಧರಿಸಲಾಗಿದೆ ಎಂದರು.

ರಾಜಕಾಲುವೆ ಸರ್ವೇ-22 ಎಕರೆ

ಒತ್ತುವರಿ ತೆರವು, ಪಾಲಿಕೆ ವಶಕ್ಕೆ

ನಗರದ ಹೊರವಲಯದಲ್ಲಿ ಭೂಮಾಪಕರ ನೆರವಿನಿಂದ ಸುಮಾರು 22 ಎಕರೆವರೆಗೆ ಒತ್ತುವರಿಯಾಗಿದ್ದ ಜಾಗ ಪತ್ತೆ ಹಚ್ಚಿ ಪಾಲಿಕೆ ವಶಕ್ಕೆ ಪಡೆದು 200 ಕಿಮೀ ರಾಜಕಾಲುವೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಮುಂದಿನ 3 ತಿಂಗಳೊಳಗೆ ಡಾಂಬರೀಕರಣ ಹಾಗೂ ವೈಟ್ ಟಾಪಿಂಗ್ ಹೊರತುಪಡಿಸಿ ಕೈಗೆತ್ತಿಕೊಳ್ಳಲಾಗಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.