Farmers' struggle for water reaches a critical stage
-ನೀರು ಹರಿಸಲು ಪಟ್ಟು, ಶಿವಮೊಗ್ಗ ಬಂದ್ ಕರೆ ನೀಡುವುದಾಗಿ ರೈತರ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಭದ್ರಾ ಜಲಾಶಯದ ಬಲದಂಡೆ ಹಾಗೂ ಎಡದಂಡೆ ನಾಲೆಗಳಲ್ಲಿ ಸತತ 20 ದಿನ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೈತರ ಟ್ರ್ಯಾಕ್ಟರ್ ರ್ಯಾಲಿ ಸಂಜೆ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿತು.
ನಗರದ ಕೋರ್ಟ್ ವೃತ್ತ, ವೀರಭದ್ರ ಟಾಕೀಸ್ ವೃತ್ತ, ಮಹಾವೀರ ವೃತ್ತದಲ್ಲಿ ಟ್ರ್ಯಾಕ್ಟರ್ಗಳನ್ನು ರಸ್ತೆಗೆ ಅಡ್ಡಹಾಕಿ ಪ್ರತಿಭಟನೆ ನಡೆಸಿದರೆ ಇತ್ತ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆ ವಿಭಜಕದ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ ಪರಿಣಾಮ ಕಬ್ಬಿಣದ ರಾಡ್ಗಳು ಮುರಿದು ತುಂಡಾಗಿ ಬಿದ್ದಿವೆ.ರಾಜ್ಯ ಸರ್ಕಾರ ಬುಧವಾರವೇ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ನ.26ರಂದು ಶಿವಮೊಗ್ಗ ಬಂದ್ ಗೆ ಕರೆ ನೀಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಎಸ್ಪಿ ಅವರ ಮನವಿಗೆ ಸ್ಪಂದಿಸಿದ ರೈತರು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತದ ಅಧಿಕಾರಿಗಳು ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಇದಕ್ಕೆ ಒಪ್ಪದ ರೈತರು, ಪತ್ರ ವ್ಯವಹಾರ ಬೇಡ, ತಕ್ಷಣ ನಾಲೆಗಳಿಗೆ ನೀರು ಹರಿಸಿ ಎಂದು ಪಟ್ಟು ಹಿಡಿದರು.ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಡಿವೈಡರ್ ಮೇಲೆ ಹತ್ತಿದ ಟ್ರ್ಯಾಕ್ಟರ್:
ಅಧಿಕಾರಿಗಳ ಉತ್ತರಕ್ಕೆ ತೃಪ್ತರಾಗ ರೈತರು,ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆ ವಿಭಜಕದ (ಡಿವೈಡರ್) ಮೇಲೆ ರೈತರೊಬ್ಬರು ಟ್ರ್ಯಾಕ್ಟರ್ ಹತ್ತಿಸಿ ರಸ್ತೆ ದಾಟಿಸಿದರು. ಟ್ರ್ಯಾಕ್ಟರ್ ಡಿವೈಡರ್ ಮೇಲೆ ಚಲಿಸಿದ ಪರಿಣಾಮ ಅಲ್ಲಿದ್ದ ಕಬ್ಬಿಣದ ರಾಡ್ಗಳು ಮುರಿದು ತುಂಡಾಗಿವೆ. ಇದಲ್ಲದೆ, ಕೋರ್ಟ್ ವೃತ್ತದಲ್ಲಿ ಟ್ರ್ಯಾಕ್ಟರ್ಗಳನ್ನು ಚಲಾಯಿಸುತ್ತಾ ’ಸ್ವಾಭಿಮಾನಿ ಶಿವಮೊಗ್ಗ’ ಎಂಬ ಘೋಷಣೆಗಳನ್ನು ರೈತರು ಕೂಗಿದರು.ನೀರು ಬಿಡುವ ಕುರಿತು ತೀರ್ಮಾನ ಪ್ರಕಟಿಸದಿದ್ದರೆ ಗುರುವಾರ ಶಿವಮೊಗ್ಗ ನಗರ ಬಂದ್ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಟ್ರ್ಯಾಕ್ಟರ್ಗಳನ್ನು ತೆರವುಗೊಳಿಸಿದರೂ ಬೆಕ್ಕಿನಕಲ್ಮಠ, ಚರ್ಚ್ ಸರ್ಕಲ್ ನಲ್ಲೂ ಪ್ರತಿಭಟನೆ ಮುಂದುವರೆದಿದೆ.