ಯಲಬುರ್ಗಾ:
ಗುಣಾತ್ಮಕ ಶಿಕ್ಷಣ ಪಡೆಯಲು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಬಿಇಒ ಸೋಮಶೇಖರಗೌಡ ಪಾಟೀಲ್ ಸಲಹೆ ನೀಡಿದರು.ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) ಹಾಗೂ ಸರ್ಕಾರಿ ಶಾಲೆಗಳ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಪ್ರಭಾತ್‌ಪೇರಿ ನಡೆಸಲಾಯಿತು. ಎತ್ತಿನ ಚಕ್ಕಡಿಗೆ ಅಲಂಕಾರ ಮಾಡಿ ಸಕಲ ವಾದ್ಯದೊಂದಿಗೆ ಪ್ರಮುಖ ಬೀದಿಗಳಲ್ಲಿ ಶಿಕ್ಷಣದ ಬಗ್ಗೆ ವಿಶೇಷ ಜಾಗೃತಿ ಮೂಡಿಸಿದರು. ಕನಕದಾಸ ವೃತ್ತದಲ್ಲಿ ವಿದ್ಯಾರ್ಥಿಗಳು ನೃತ್ಯ ಮತ್ತು ಹಾಡುಗಳೊಂದಿಗೆ ಜನರಿಗೆ ಮಾಹಿತಿ ನೀಡಿದರು.2024-25ರಲ್ಲಿ ಜಿಲ್ಲೆಯಲ್ಲಿ ಯಲಬುರ್ಗಾ ತಾಲೂಕು ಉತ್ತಮ ಫಲಿತಾಂಶ ಪಡೆದಿದೆ. ಅಷ್ಟು ಮಾತ್ರವಲ್ಲ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ೬೨೫ ಕ್ಕೆ ೬೨೫ ಅಂಕ ಪಡೆದು ಸರ್ಕಾರಿ ಶಾಲೆಗಳ ಕೀರ್ತಿ ಹೆಚ್ಚಿಸಿದ್ದಾರೆ. ಶಾಲೆಗಳ ಗುಣಾತ್ಮಕ ಶಿಕ್ಷಣಕ್ಕೆ ಇದೇ ಸಾಕ್ಷಿಯಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾಗುವ ಮಕ್ಕಳಿಗೆ ಇಲಾಖೆ ಹೆಚ್ಚಿನ ಸೌಲಭ್ಯ ಒದಗಿಸುತ್ತಿದೆ. ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ಸೇರಿದಂತೆ ಪೂರಕ ಪೌಷ್ಟಿಕ ಆಹಾರ ನೀಡುವ ಮೂಲಕ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸಮುದಾಯದ ಸಹಭಾಗಿತ್ವ ತುಂಬಾ ಅವಶ್ಯವಿದೆ. ಹಾಗಾಗಿ ಇಲಾಖೆಯ ಜತೆಗೆ ಕೈಜೋಡಿಸಬೇಕು ಎಂದರು.2025-26ನೇ ಶೈಕ್ಷಣಿಕ ಸಾಲಿನಲ್ಲಿ ಹಿರೇವಂಕಲಕುಂಟಾಕ್ಕೆ ಹೊಸದಾಗಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿದ್ದು, ಸಂತಸದ ವಿಷಯ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ವಿಶೇಷ ಕಾಳಜಿಯಿಂದಾಗಿ ನಾಲ್ಕು ಹೊಸ ಪ್ರೌಢಶಾಲೆ ಮಂಜೂರಾಗಿದ್ದು ಇದೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು.
ಉಪ ಪ್ರಾಚಾರ್ಯ ಬಾಬುಸಾಬ್ ಲೈನದಾರ್ ಮಾತನಾಡಿದರು. ಈ ವೇಳೆ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ತಳವಾರ, ಬಿಆರ್‌ಸಿ ಅಶೋಕ ಗೌಡರ, ವೈದ್ಯ ಟಿ.ಜೆ. ಘಾಟಗೆ, ವಿಎಸ್ಸೆಸ್ಸೆನ್ ಅಧ್ಯಕ್ಷ ಕುಂಟೆಪ್ಪ ಕಂಬಳಿ, ಸದಸ್ಯ ಅಶೋಕ ಹರ್ಲಾಪುರ, ಎಸ್‌ಡಿಎಂಸಿ ಅಧ್ಯಕ್ಷ ವೀರೇಶ ಕೋರಿ, ಗಣ್ಯರಾದ ವಿರೂಪಯ್ಯ ಹಿರೇಮಠ, ಗಾಳೆಪ್ಪ ಓಜನಹಳ್ಳಿ, ಮುತ್ತನಗೌಡ ಗೌಡರ, ಮಂಜುನಾಥ ಸಜ್ಜನ, ಸೋಮಣ್ಣ ಹರ್ಲಾಪುರ, ರಾಯಪ್ಪ ಸಜ್ಜನ, ಯುವಕರು, ಆಶಾ ಕಾರ್ಯಕರ್ತೆಯರು, ಸ್ವ-ಸಹಾಯ ಸಂಘದವರು, ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಇದ್ದರು.