ಕನ್ನಡಪ್ರಭ ವಾರ್ತೆ ಆಲೂರು
ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಧೈರ್ಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಬ್ಬನ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಚಿನ್ನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳು ಹಳೆಯ ಕಟ್ಟಡದಲ್ಲಿಯೇ ನಡೆಯುತ್ತಿವೆ ಎಂದು ಕೆಲವು ಪಾಲಕರು ತಾತ್ಸಾರ ಮಾಡಬೇಡಿ ಎಂದರು.
ಪತಿ-ಪತ್ನಿಯರು ದುಡಿಮೆಯಿಂದ ಆರ್ಥಿಕವಾಗಿ ಉತ್ತಮವಾಗಿರುವ ಕಾರಣ ಖಾಸಗಿ ಶಾಲೆಯಲ್ಲಿ ದುಬಾರಿ ಶುಲ್ಕವಾದರೂ ಮಕ್ಕಳನ್ನು ಸೇರಿಸಲು ಆಸಕ್ತಿ ವಹಿಸುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳ ಶಿಕ್ಷಕರು, ಶಿಕ್ಷಣ ವ್ಯವಸ್ಥೆಗೆ ಬೇಕಿರುವ ಉತ್ತಮ ಸಾಮರ್ಥ್ಯ ಹೊಂದಿರುತ್ತಾರೆ. ಸರ್ಕಾರ ಇಂತಹವರನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರ ಗುಣಮಟ್ಟದಷ್ಟು ಸಾಮರ್ಥ್ಯ ಹೊಂದಿರುವುದಿಲ್ಲ. ಇದನ್ನು ಪಾಲಕರು ಅರಿತುಕೊಳ್ಳಬೇಕು ಎಂದು ಹೇಳಿದರು.ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನುರಿತ ಶಿಕ್ಷಕರಿಂದ ಉತ್ತಮ ಬೋಧನೆ, ಕ್ರೀಡೆ, ಸಾಂಸ್ಕೃತಿಕ ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುತ್ತದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಬಿಸಿಯೂಟದ ಜತೆಗೆ ಪೌಷ್ಟಿಕ ಆಹಾರಗಳನ್ನು ಒದಗಿಸುತ್ತಿದೆ. ಮೂಲ ಸೌಕರ್ಯದ ಜತೆಗೆ ನೂತನ ಕಟ್ಟಡಗಳನ್ನು ಮಂಜೂರು ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಸುಂದರಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ. ಇಷ್ಟೆಲ್ಲಾ ಸವಲತ್ತುಗಳನ್ನು ಕೊಟ್ಟಿದ್ದರೂ ಪಾಲಕರಿಗೆ ಖಾಸಗಿ ಶಾಲೆಯ ಅಪೇಕ್ಷೆ ಏಕೆ, ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಜತೆಗೆ ಸಮಾಜದ ಅಭಿವೃದ್ಧಿಗೆ ಕೈಜೋಡಿಸಿ ಎಂದರು.
ಕಾರ್ಯಕ್ರಮದಲ್ಲಿ ಅಬ್ಬನ ಗ್ರಾಮ ಪಂಚಾಯತಿ ಅಧ್ಯಕ್ಷ ಬಶೀರ್, ಸದಸ್ಯರಾದ ರವಿಂದ್ರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್, ಮುಖ್ಯ ಶಿಕ್ಷಕ ನಾಗರಾಜ್, ಶಿಕ್ಷಕರಾದ ಹಾಲಪ್ಪ, ಗಂಗಾಧರ್, ಬಿಜೆಪಿ ಮುಖಂಡರಾದ ಎಸ್. ಮಂಜುನಾಥ್ ಸೇರಿದಂತೆ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.