-ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ "ಶಾಲೆಯಲ್ಲಿದೆ ಶಿಕ್ಷಣದ ಜೊತೆಗೆ ರಕ್ಷಣೆ " ಶೀರ್ಷಿಕೆಯಡಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ "ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ- 2009 ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಬಡ ಮಕ್ಕಳು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಬಾರದು. ಶಿಶ್ಯವೇತನ, ಶೈಕ್ಷಣಿಕ ಸೌಲಭ್ಯಗಳು ಅವರಿಗೆ ಸಕಾಲಕ್ಕೆ ದೊರಕಿಸುವ ಸದುದ್ದೇಶವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೊಂದಿದೆ. ಈ ಹಿನ್ನೆಲೆಯಲ್ಲಿ ಆಧಾರ ಪರಿಶೀಲಿಸಿ ಸರಿಪಡಿಸುವ ಕಾರ್ಯ ತುರ್ತಾಗಿ ಕೈಗೊಳ್ಳಬೇಕು. ಸ್ಯಾಟ್ಸ (SATS) ಅಪಾರ(APAAR) ತಂತ್ರಾಂಶಗಳ ಬಗ್ಗೆ ಈಗಾಗಲೇ ಗೂಗಲ್ ಮತ್ತು ಭೌತಿಕ ತರಬೇತಿಗಳನ್ನು ಸಹ ನೀಡಲಾಗಿದೆ. ಕಾರಣ ಆಧಾರ್ ಸರಿಪಡಿಸುವ ಜೊತೆಗೆ ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರುವಂತೆ ಅವರು ನಿರ್ದೇಶನ ನೀಡಿದರು.
ಜಿಲ್ಲೆಯ ವಿವಿಧ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಕೊರತೆ, ಶೌಚಾಲಯ, ಶುದ್ಧ ಕುಡಿವ ನೀರು, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇನ್ನಿತರ ಕುಂದುಕೊರತೆಗಳ ಬಗ್ಗೆ ಅವಶ್ಯಕ ಮಾಹಿತಿಯನ್ನು ಅವರು ಪಡೆದರು.
------
- ರಾಜ್ಯ ಶಶಿಧರ್ ಕೋಸಂಬೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು.
ಫೋಟೊ: ಯಾದಗಿರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ- 2009 ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಮಾತನಾಡಿದರು.